ಬೆಂಗಳೂರು : ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಹೆಬ್ಬಾಳ ಜಂಕ್ಷನ್‌ನಿಂದ ಯುಎಎಸ್ ಕ್ವಾರ್ಟರ್ಸ್‌ವರೆಗಿನ ಸುರಂಗ ರಸ್ತೆ ನಿರ್ಮಾಣಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಭಾನುವಾರ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಹೆಬ್ಬಾಳವು ಹೆಬ್ಬಾಗಿಲಿನಂತಿದ್ದು, ಈ ಭಾಗದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಹಾಗೂ ಮುಂದಿನ 50 ವರ್ಷಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನದೇ ಆದ ಸಂಪನ್ಮೂಲಗಳ ಮೂಲಕ ಕೈಗೆತ್ತಿಕೊಂಡಿರುವ ಈ 2.5 ಕಿಲೋ ಮೀಟರ್ ಉದ್ದದ 'ಕಟ್ ಅಂಡ್ ಕವರ್' ಸುರಂಗ ರಸ್ತೆಯು ಸಂಪೂರ್ಣವಾಗಿ ಟೋಲ್ ಮುಕ್ತವಾಗಿರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಇದೇ ವೇಳೆ ಮೇಕೆದಾಟು ಯೋಜನೆ ಹಾಗೂ ಬೆಂಗಳೂರು ಬಿಸಿನೆಸ್ ಕಾರಿಡಾರ್ (ಬಿಬಿಸಿ) ಯೋಜನೆಗಳ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ಬಿಬಿಸಿ ಯೋಜನೆಯನ್ನು 2006 ರಲ್ಲೇ ಮಾಡಿದ್ದರೆ ಕೇವಲ 2-3 ಸಾವಿರ ಕೋಟಿ ರೂ.ಗಳಲ್ಲಿ ಮುಗಿಯುತ್ತಿತ್ತು, ಆದರೆ ಈಗ ಅದರ ವೆಚ್ಚ 24 ಸಾವಿರ ಕೋಟಿ ರೂ.ಗೆ ತಲುಪಿದೆ. ಈ ರಸ್ತೆಯು 123 ಕಿಲೋ ಮೀಟರ್ ಉದ್ದವಿರಲಿದ್ದು, ಭೂಮಿ ಕಳೆದುಕೊಂಡ ರೈತರಿಗೆ ಟಿಡಿಆರ್ ಮತ್ತು ಸೂಕ್ತ ಪರಿಹಾರ ನೀಡಲಾಗಿದೆ ಎಂದರು. ಅಲ್ಲದೆ, ಹೆಬ್ಬಾಳದಿಂದ ರೇಷ್ಮೆ ಸಂಸ್ಥೆಯವರೆಗೆ 17 ಕಿಮೀ ಉದ್ದದ ಮತ್ತೊಂದು ಬೃಹತ್ ಟನಲ್ ಯೋಜನೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಂದಿನ 3-4 ವರ್ಷಗಳಲ್ಲಿ ಈ ಕೆಲಸ ಪೂರ್ಣಗೊಳ್ಳಲಿದೆ. ಇದರಿಂದ ಸಾರ್ವಜನಿಕರ ಅಮೂಲ್ಯ ಸಮಯ ಉಳಿಯಲಿದ್ದು, ಸಂಜೆ ಕೆಲಸ ಮುಗಿಸಿ ಬೇಗ ಮನೆ ಸೇರಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ವಿರೋಧ ಪಕ್ಷಗಳ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ಬೆಂಗಳೂರಿನಲ್ಲಿ 1.40 ಕೋಟಿ ಜನಸಂಖ್ಯೆ ಹಾಗೂ 1.35 ಕೋಟಿ ವಾಹನಗಳಿದ್ದು, ಕಸದ ಸಮಸ್ಯೆ ಸೇರಿದಂತೆ ನಗರದ ಯಾವುದೇ ಪ್ರಮುಖ ಸವಾಲುಗಳನ್ನು ಹಿಂದಿನ ಸರ್ಕಾರಗಳು ಬಗೆಹರಿಸಲಿಲ್ಲ ಎಂದು ವಾಗ್ದಾಳಿ ನಡೆಸಿದರು. ಟೆಂಡರ್ ಪ್ರಕ್ರಿಯೆಯೇ ಪೂರ್ಣಗೊಳ್ಳುವ ಮುನ್ನ ತಮ್ಮ ವಿರುದ್ಧ 10 ಸಾವಿರ ಕೋಟಿ ರೂ. ಭ್ರಷ್ಟಾಚಾರದ ಆರೋಪ ಮಾಡಿರುವುದನ್ನು ಲೇವಡಿ ಮಾಡಿದ ಅವರು, ವಿಪಕ್ಷಗಳು ಟೀಕೆ ಮಾಡಿದಷ್ಟೂ ನಾವು ಮತ್ತಷ್ಟು ಎಚ್ಚರಿಕೆಯಿಂದ ಕೆಲಸ ಮಾಡುತ್ತೇವೆ ಮತ್ತು ರಚನಾತ್ಮಕ ಮಾರ್ಗದರ್ಶನಗಳನ್ನು ಸದಾ ಸ್ವಾಗತಿಸುತ್ತೇವೆ ಎಂದರು. ಬೆಂಗಳೂರಿನ ಆಡಳಿತಾತ್ಮಕ ಒತ್ತಡವನ್ನು ಕಡಿಮೆ ಮಾಡಲು ಐದು ಪಾಲಿಕೆಗಳನ್ನು ರಚಿಸುವ ತೀರ್ಮಾನವನ್ನು ವಿರೋಧ ಪಕ್ಷಗಳ ಸಲಹೆ ಪಡೆದೇ ತೆಗೆದುಕೊಳ್ಳಲಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.