image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಿ.ಟಿ. ರವಿ ಆಗ್ರಹ

ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲು ಸಿ.ಟಿ. ರವಿ ಆಗ್ರಹ

ಚಿಕ್ಕಮಗಳೂರು : ಜಿಲ್ಲೆಯ ಬಡ ರೋಗಿಗಳಿಗೆ ಸ್ಥಳೀಯವಾಗಿಯೇ ಉತ್ತಮ ಚಿಕಿತ್ಸೆ ದೊರೆಯುವಂತಾಗಲು ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ತಕ್ಷಣವೇ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುವಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಎರಡು ತಿಂಗಳ ಮಗುವಿನ ಸಾವಿನ ಘಟನೆ ಸೇರಿದಂತೆ ಜಿಲ್ಲಾಸ್ಪತ್ರೆಯಲ್ಲಿ ಸರಣಿ ದುರಂತಗಳು ನಡೆದಿರುವುದು ಕಳವಳಕಾರಿ ಸಂಗತಿಯಾಗಿದೆ. ಸಣ್ಣದೊಂದು ಗಂಭೀರ ಪ್ರಕರಣ ಬಂದರೂ ರೋಗಿಗಳನ್ನು ಶಿವಮೊಗ್ಗ, ಹಾಸನ, ಮಂಡ್ಯ ಅಥವಾ ಬೆಂಗಳೂರಿಗೆ ಕಳುಹಿಸಲಾಗುತ್ತಿದೆ. ಇದರಿಂದ ಜಿಲ್ಲೆಯ ಜನರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವೇನು ಎಂಬ ಪ್ರಶ್ನೆ ಮೂಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲೆಯ ಮಕ್ಕಳಲ್ಲಿ ವೈದ್ಯಕೀಯ ಶಿಕ್ಷಣದ ಆಸಕ್ತಿ ಮೂಡಿಸುವುದು ಮತ್ತು ಬಡ ರೋಗಿಗಳಿಗೆ ಸ್ಥಳೀಯವಾಗಿ ಉತ್ತಮ ಚಿಕಿತ್ಸೆ ನೀಡುವುದು ಈ ಕಾಲೇಜು ಸ್ಥಾಪನೆಯ ಮೂಲ ಉದ್ದೇಶವಾಗಿತ್ತು. ತಾವು ಶಾಸಕರಾಗಿದ್ದಾಗ ಕಾಮಗಾರಿಗಳ ಮೇಲ್ವಿಚಾರಣೆ ನಡೆಸಿದ್ದಾಗಿ ಹಾಗೂ ನಂತರದ ದಿನಗಳಲ್ಲಿ ಇಲ್ಲಿ ರಾಜಕೀಯ ಕಾರಣಗಳಿಗಾಗಿ ಅಧಿಕಾರಿಗಳನ್ನು ತಡೆಯುವ ಪ್ರಯತ್ನ ನಡೆದಿತ್ತು ಎಂದು ಅವರು ಆರೋಪಿಸಿದರು.

ಆಸ್ಪತ್ರೆಯ ಬಾಕಿ ಕಾಮಗಾರಿಗಳನ್ನು ತಕ್ಷಣ ಮುಗಿಸಿ, ಭ್ರಷ್ಟಾಚಾರಕ್ಕೆ ಆಸ್ಪದ ನೀಡದೆ ಸೇವಾ ಮನೋಭಾವದ ತಜ್ಞ ವೈದ್ಯರು ಹಾಗೂ ಅಧಿಕಾರಿಗಳನ್ನು ನೇಮಿಸಬೇಕು. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದ್ದರೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೇರಿದಂತೆ ಅಗತ್ಯ ಸೇವೆಗಳು ಸ್ಥಳೀಯವಾಗಿಯೇ ಸಿಗಬೇಕು. ಯಂತ್ರೋಪಕರಣಗಳಲ್ಲಿ ತಾಂತ್ರಿಕ ಸಮಸ್ಯೆ ಎದುರಾದರೆ ಬಳಕೆದಾರರ ನಿಧಿ (ಯೂಸರ್ಸ್ ಫಂಡ್) ಬಳಸಿ ತಕ್ಷಣ ಸೇವೆ ಪುನರಾರಂಭಿಸಬೇಕು. ಆಂಬ್ಯುಲೆನ್ಸ್ ಹಾಗೂ ವೆಂಟಿಲೇಟರ್‌ಗಳ ಸಮಸ್ಯೆ ಕುರಿತ ಮಾಧ್ಯಮಗಳ ವರದಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂದರು. ಜಿಲ್ಲೆಯ ಜನರು ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗದಂತೆ ಸರ್ಕಾರ ಶೀಘ್ರ ಕ್ರಮ ಕೈಗೊಳ್ಳದಿದ್ದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಹೋರಾಟದ ಮಾರ್ಗವನ್ನು ಅನುಸರಿಸಬೇಕಾಗುತ್ತದೆ ಎಂದು ಸಿ.ಟಿ. ರವಿ ಎಚ್ಚರಿಕೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ