image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಚಲ್ಲಘಟ್ಟ-ಕಡಬಗೆರೆ ದಶಪಥ ರಸ್ತೆ ಲೋಕಾರ್ಪಣೆ

ಬೆಂಗಳೂರು ಸಂಚಾರ ದಟ್ಟಣೆ ನಿವಾರಣೆಗೆ ಚಲ್ಲಘಟ್ಟ-ಕಡಬಗೆರೆ ದಶಪಥ ರಸ್ತೆ ಲೋಕಾರ್ಪಣೆ

ಬೆಂಗಳೂರು : ಬೆಂಗಳೂರು ನಗರದ ಸಂಚಾರ ದಟ್ಟಣೆಯನ್ನು ಕೊಂಚ ಮಟ್ಟಿಗೆ ನಿವಾರಿಸುವ ನಿಟ್ಟಿನಲ್ಲಿ, ಚಲ್ಲಘಟ್ಟದ ನಾಡಪ್ರಭು ಕೆಂಪೇಗೌಡ ಬಡಾವಣೆ ಬಳಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ಎಂ. ಕೃಷ್ಣ ಅವರ ಹೆಸರಿನ ನೂತನ ದಶಪಥ ರಸ್ತೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ನಾಡಪ್ರಭು ಕೆಂಪೇಗೌಡರ ಜಯಂತಿಯ ದಿನದಂದೇ ಈ ಭವ್ಯ ರಸ್ತೆಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಪ್ರೇಮಾ ಕೃಷ್ಣ, ಡಿಸಿಎಂ ಪರಮೇಶ್ವರ್, ಸಚಿವರಾದ ಕೆ.ಹೆಚ್ ಮುನಿಯಪ್ಪ, ಕೃಷ್ಣಬೈರೇಗೌಡ ಹಾಗೂ ಬಿಡಿಎ ಅಧ್ಯಕ್ಷ ಎನ್ ಎ ಹ್ಯಾರಿಸ್ ಉಪಸ್ಥಿತರಿದ್ದರು. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸುಮಾರು 631 ಕೋಟಿ ರೂಪಾಯಿ ವೆಚ್ಚದಲ್ಲಿ ಕಡಬಗೆರೆಯಿಂದ ಚಲ್ಲಘಟ್ಟ ಮೆಟ್ರೋ ನಿಲ್ದಾಣದ ನಡುವೆ ಈ ನೂತನ ಹೆದ್ದಾರಿಯನ್ನು ನಿರ್ಮಿಸಿದೆ. ಒಟ್ಟು 10.7 ಕಿ.ಮೀ. ಉದ್ದ ಹಾಗೂ 100 ಮೀಟರ್ ಅಗಲದ ಈ ಕಾರಿಡಾರ್ ಸಂಪೂರ್ಣವಾಗಿ ಸಿಗ್ನಲ್ ಫ್ರೀ ಮತ್ತು ಟೋಲ್ ಮುಕ್ತವಾಗಿದೆ. ಇದು ನೈಸ್ ರಸ್ತೆಗಿಂತಲೂ ವೇಗವಾದ ಪರ್ಯಾಯ ಮಾರ್ಗವಾಗಿದ್ದು, ಮಾಗಡಿ ರಸ್ತೆ ಮತ್ತು ಮೈಸೂರು ರಸ್ತೆ ನಡುವಿನ ಪ್ರಯಾಣದ ಸಮಯವನ್ನು 60 ನಿಮಿಷಗಳಿಂದ ಕೇವಲ 20 ನಿಮಿಷಕ್ಕೆ ಇಳಿಸಲಿದೆ.

ಈ ಮಾರ್ಗದಲ್ಲಿ 3 ಅಂಡರ್ ಪಾಸ್, 11 ಸೇತುವೆಗಳು ಮತ್ತು 270 ಮೀಟರ್ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಸುಸಜ್ಜಿತ ಸರ್ವೀಸ್ ರಸ್ತೆಗಳು ಹಾಗೂ ಸೈಕ್ಲಿಂಗ್‌ಗಾಗಿ ಪ್ರತ್ಯೇಕ ಟ್ರ್ಯಾಕ್ ವ್ಯವಸ್ಥೆ ಮಾಡಲಾಗಿದ್ದು, ರಸ್ತೆಯ ಎರಡು ಬದಿಗಳಲ್ಲಿ 27 ಮೀಟರ್ ಹಸಿರು ವನಸಿರಿ ಬೆಳೆಸಲಾಗಿದೆ. ಭವಿಷ್ಯದ ಮೆಟ್ರೋ ಯೋಜನೆಗಾಗಿ 3 ಮೀಟರ್ ಮಧ್ಯದ ವಿಭಜಕವನ್ನು (ಮೀಡಿಯನ್) ಕಾಯ್ದಿರಿಸಲಾಗಿದೆ. ಈ ಹೆದ್ದಾರಿಯು ನಾಡಪ್ರಭು ಕೆಂಪೇಗೌಡ ಲೇಔಟ್‌ನ ಎಲ್ಲಾ 9 ಬ್ಲಾಕ್‌ಗಳನ್ನು ನೇರವಾಗಿ ಜೋಡಿಸುತ್ತದೆ. ಈ ನೂತನ ರಸ್ತೆಯು ಕಂಬೀಪುರ, ಕೊಮ್ಮಘಟ್ಟ, ಕೆಂಚನಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಅತ್ಯುತ್ತಮ ಸಂಪರ್ಕವನ್ನು ಕಲ್ಪಿಸಲಿದೆ. ಮೈಸೂರು, ಮಂಡ್ಯ, ರಾಮನಗರ, ಹಾಸನ, ಕುಣಿಗಲ್ ಮತ್ತು ಮಾಗಡಿಯಿಂದ ಬರುವ ಪ್ರಯಾಣಿಕರಿಗೆ ಇದು ಸಹಕಾರಿಯಾಗಲಿದ್ದು, ಕೆಂಪೇಗೌಡ ಬಡಾವಣೆ ಹಾಗೂ 11 ನೆರೆಹೊರೆಯ ಹಳ್ಳಿಗಳ ಸರ್ವತೋಮುಖ ಅಭಿವೃದ್ಧಿಗೆ ದೊಡ್ಡ ಕೊಡುಗೆಯಾಗಲಿದೆ. ಎಸ್‌.ಎಂ.ಕೃಷ್ಣ ಅವರು ಬೆಂಗಳೂರನ್ನು ಜಾಗತಿಕ ಮಾಹಿತಿ ತಂತ್ರಜ್ಞಾನ (IT) ನಕ್ಷೆಯಲ್ಲಿ ಗುರುತಿಸುವಂತೆ ಮಾಡಿದ ದೂರದೃಷ್ಟಿಯ ನಾಯಕರಾಗಿದ್ದು, ನಗರದ ಆಧುನಿಕ ಮೂಲಸೌಕರ್ಯಕ್ಕೆ ಬಲವಾದ ಅಡಿಪಾಯ ಹಾಕಿಕೊಟ್ಟಿದ್ದಾರೆ. ಅವರ ಸಾಧನೆಯ ಸ್ಮರಣಾರ್ಥ ಈ ರಸ್ತೆಗೆ ನಾಮಕರಣ ಮಾಡಲಾಗಿದ್ದು, ಇದು ರಾಜಧಾನಿಯ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸುವ ನಿರೀಕ್ಷೆಯಿದೆ.

Category
ಕರಾವಳಿ ತರಂಗಿಣಿ