image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕ್ಷಮೆ ಕೇಳಿದರೂ ಯತ್ನಾಳ್ ಆಡಿದ ಮಾತು ಅಳಿಸಲಾಗದು: ಹೈಕೋರ್ಟ್ ತೀವ್ರ ಬೇಸರ

ಕ್ಷಮೆ ಕೇಳಿದರೂ ಯತ್ನಾಳ್ ಆಡಿದ ಮಾತು ಅಳಿಸಲಾಗದು: ಹೈಕೋರ್ಟ್ ತೀವ್ರ ಬೇಸರ

ಬೆಂಗಳೂರು : ಚಿನ್ನ ಕಳ್ಳಸಾಗಣೆ ಹಗರಣದಲ್ಲಿ ಆರೋಪಿಯಾಗಿರುವ ನಟಿ ರನ್ಯಾ ರಾವ್ ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಆಡಿರುವ ಮಾತುಗಳು ಅವರ ಘನತೆಗೆ ತಕ್ಕನಾಗಿಲ್ಲ ಹಾಗೂ ಒಂದು ವೇಳೆ ಅವರು ಕ್ಷಮೆ ಯಾಚನೆ ಮಾಡಿದರೂ ಆ ಮಾತುಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ತೀವ್ರ ವೇದನೆ ವ್ಯಕ್ತಪಡಿಸಿದೆ. ನಟಿ ರನ್ಯಾ ರಾವ್ ಅವರ ಸಂಬಂಧಿ ಅಕುಲಾ ಅನುರಾಧ ನೀಡಿರುವ ದೂರಿನ ಅನ್ವಯ ಬೆಂಗಳೂರಿನ ಹೈ ಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸಬೇಕು ಎಂದು ಕೋರಿ ಯತ್ನಾಳ್‌ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ರನ್ಯಾ ರಾವ್ ಪರ ವಕೀಲ ವೈ. ಎಲ್‌. ಮಹೇಶ್‌ ವಾದ ಮಂಡಿಸಿ, ಯತ್ನಾಳ್‌ ಬಳಸಿರುವ ಆಕ್ಷೇಪಾರ್ಹ ಪದಕ್ಕೆ ಉತ್ತರ ಕರ್ನಾಟಕದ ಭಾಷಾ ಶೈಲಿ ಸೇರಿದಂತೆ ಇತರೆ ಯಾವುದೇ ಭಾಷಾ ಪ್ರಬೇಧಗಳಲ್ಲಾಗಲಿ ಒಂದೇ ರೀತಿಯ ಅಶ್ಲೀಲ ಅರ್ಥವಿದೆ. ಈ ಹಗರಣದಲ್ಲಿ ಇಬ್ಬರು ಸಚಿವರು ಭಾಗಿಯಾಗಿದ್ದಾರೆ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದ ಯತ್ನಾಳ್, ಇದುವರೆಗೆ ಅವರ ಹೆಸರನ್ನು ಬಹಿರಂಗಪಡಿಸದೆ ಕೇವಲ ತಮ್ಮ ರಾಜಕೀಯ ಪ್ರತೀಕಾರ ತೀರಿಸಿಕೊಳ್ಳುವ ಭರದಲ್ಲಿ ನಟಿಯ ಬಗ್ಗೆ ತೀರಾ ಲಘುವಾಗಿ ಮಾತನಾಡಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಯತ್ನಾಳ್‌ ಪರ ವಕೀಲ ವೆಂಕಟೇಶ್‌ ಪಿ. ದಳವಾಯಿ ವಾದಿಸಿ, ಶಾಸಕರು ಎಲ್ಲಾ ಮಹಿಳೆಯರನ್ನು ಉದ್ದೇಶಿಸಿ ಈ ಹೇಳಿಕೆ ನೀಡಿಲ್ಲ. ಆಕ್ಷೇಪಾರ್ಹ ಹೇಳಿಕೆ ನೀಡಿದ ದಿನ ರನ್ಯಾ ರಾವ್‌ ನ್ಯಾಯಾಂಗ ಬಂಧನದಲ್ಲಿದ್ದ ಕಾರಣ, ಅವರು ಈ ಹೇಳಿಕೆಯನ್ನು ಗಮನಿಸಿರುವ ಅಥವಾ ಕೇಳಿರುವ ಸಾಧ್ಯತೆ ಇಲ್ಲ. ಹಾಗಾಗಿ ದೂರಿನಲ್ಲಿರುವ ಅಂಶಗಳು ನಟಿಗೆ ತಿಳಿದಿತ್ತು ಎನ್ನುವುದು ಸರಿಯಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಯತ್ನಾಳ್‌ ಅವರ ಮಾತುಗಳು ಘನತೆಗೆ ತಕ್ಕುದಾಗಿಲ್ಲ. ಕ್ಷಮೆ ಕೇಳಿದರೂ ಹೇಳಿರುವುದನ್ನು ಅಳಿಸಲಾಗದು ಎಂದರಲ್ಲದೆ, ಈ ಹಿಂದೆ ಸಿ.ಟಿ.ರವಿ ಪ್ರಕರಣದಲ್ಲೂ ಇಂತಹದ್ದೇ ಕ್ಷಮಾಪಣಾ ಅರ್ಜಿಯನ್ನು ತಾವು ಒಪ್ಪಿರಲಿಲ್ಲ ಎಂಬುದನ್ನು ಸ್ಮರಿಸಿದರು. ಅಲ್ಲದೆ, ತಾವು ಈ ಪ್ರಕರಣದ ಆರಂಭದಲ್ಲಿದ್ದಿದ್ದರೆ ಮಧ್ಯಂತರ ತಡೆಯನ್ನೇ ನೀಡುತ್ತಿರಲಿಲ್ಲ ಎಂದು ಮೌಖಿಕವಾಗಿ ಅಭಿಪ್ರಾಯಪಟ್ಟ ಪೀಠವು, ಸದ್ಯದ ಮಧ್ಯಂತರ ಆದೇಶವನ್ನು ವಿಸ್ತರಿಸಿ ಮುಂದಿನ ವಿಚಾರಣೆಯನ್ನು ಜುಲೈ 17ಕ್ಕೆ ಮುಂದೂಡಿತು. ಈ ಹಿಂದೆ 2025ರ ಏಪ್ರಿಲ್‌ 1ರಂದು ನ್ಯಾಯಮೂರ್ತಿ ಪ್ರದೀಪ್‌ ಸಿಂಗ್‌ ಯೆರೂರು ಅವರಿದ್ದ ಪೀಠವು ಈ ಪ್ರಕರಣಕ್ಕೆ ಮಧ್ಯಂತರ ತಡೆ ನೀಡಿತ್ತು.

ಪ್ರಕರಣದ ಹಿನ್ನೆಲೆ:

ಮಾಧ್ಯಮಗಳ ಮುಂದೆ ಬೇಜವಾಬ್ದಾರಿಯಿಂದ ಅಸಭ್ಯವಾಗಿ ಮತ್ತು ಲೈಂಗಿಕ ಅರ್ಥ ಕಲ್ಪಿಸುವ ರೀತಿಯಲ್ಲಿ ಮಾತನಾಡಿ ನಟಿ ರನ್ಯಾ ರಾವ್‌ ಅವರ ಚಾರಿತ್ರ್ಯ ಹಾಗೂ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಅಕುಲಾ ಅನುರಾಧ ಅವರು 2026ರ ಮಾರ್ಚ್‌ 18ರಂದು ಹೈ ಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಅನ್ವಯ ಪೊಲೀಸರು ಶಾಸಕ ಯತ್ನಾಳ್ ವಿರುದ್ಧ ಭಾರತೀಯ ನ್ಯಾಯ ಸಂಹಿತಾ-2023ರ (ಬಿಎನ್‌ಎಸ್‌) ಕಲಂ 79ರ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Category
ಕರಾವಳಿ ತರಂಗಿಣಿ