ಬೆಂಗಳೂರು : ರೈತರ ಸಮುಖದಲ್ಲೇ ಬಿಡದಿ ಟೌನ್‌ಶಿಪ್ ಯೋಜನೆ ವಿಚಾರ ಇತ್ಯರ್ಥವಾಗಬೇಕು ಎಂದು ಪಟ್ಟು ಹಿಡಿದಿರುವ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು, ಮುಖ್ಯಮಂತ್ರಿ ಶಿವಕುಮಾರ್ ಅವರಿಗಾಗಿ ಬೈರಮಂಗಲದಲ್ಲಿ ಕಾದು ಕುಳಿತ ಪ್ರಸಂಗ ನಡೆದಿದೆ. ಬೈರಮಂಗಲದಲ್ಲಿ ಆಯೋಜಿಸಿದ್ದ ವೇದಿಕೆಯಲ್ಲಿ ಮುಖ್ಯಮಂತ್ರಿಗೆ ಒಂದು ಆಸನ ಕಾಯ್ದಿರಿಸಿ, ಮತ್ತೊಂದು ಆಸನದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹಸಿರು ಶಾಲು ಹಾಕಿಕೊಂಡು ಆಸೀನರಾಗಿದ್ದರು. ಆದರೆ ಮುಖ್ಯಮಂತ್ರಿ ಇಂದು ನಾಡಪ್ರಭು ಕೆಂಪೇಗೌಡ ಜಯಂತಿಯ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಚರ್ಚೆಗೆ ಆಗಮಿಸಿರಲಿಲ್ಲ. ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, ಬಿಡದಿ ಟೌನ್‌ಶಿಪ್ ವಿಚಾರದಲ್ಲಿ ತಮಗೆ ಯಾವುದೇ ಪ್ರತಿಷ್ಠೆ ಇಲ್ಲ. ಮುಖ್ಯಮಂತ್ರಿಗಳು ಎಲ್ಲಿಗೆ ಬೇಕಾದರೂ ಚರ್ಚೆಗೆ ಕರೆಯಲಿ, ತಾವು ರೈತರನ್ನು ಕರೆದುಕೊಂಡು ಹೋಗಲು ಸಿದ್ಧರಿದ್ದಾರೆ ಎಂದರು. ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರೂ ರೈತರನ್ನು ಕರೆದುಕೊಂಡು ಹೋಗುತ್ತೇನೆ, ಆದರೆ ರೈತರ ಸಮುಖದಲ್ಲೇ ಚರ್ಚೆಯಾಗಿ ತೀರ್ಮಾನವಾಗಬೇಕು ಎಂದು ಒತ್ತಾಯಿಸಿದರು. 2007ರಲ್ಲೇ ರೈತರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಯೋಜನೆಯನ್ನು ಕೈಬಿಡಲಾಗಿದೆ ಎಂದ ಅವರು, ಕಳೆದ 470 ದಿನಗಳಿಗೂ ಹೆಚ್ಚು ಕಾಲದಿಂದ ಶೇಕಡಾ 80 ರಷ್ಟು ರೈತರು ಈ ಯೋಜನೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ನೆನಪಿಸಿದರು.
ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ವಿಧಾನಸೌಧಕ್ಕೆ ಬರುವಂತೆ ಆಹ್ವಾನ ನೀಡಿದ್ದರು, ಆದರೆ ಜೂನ್ 26ರಂದು ತಮಗೆ ಪೂರ್ವ ನಿಯೋಜಿತ ಕಾರ್ಯಕ್ರಮವಿದ್ದ ಕಾರಣ ಇಂದು ಬೈರಮಂಗಲಕ್ಕೆ ಬರುವಂತೆ ಕುಮಾರಸ್ವಾಮಿ ಪತ್ರ ಬರೆದಿದ್ದರು. ಮುಖ್ಯಮಂತ್ರಿಗಳು ಬರಲು ಸಾಧ್ಯವಾಗದಿದ್ದರೆ ಸಂಬಂಧಪಟ್ಟ ಅಧಿಕಾರಿಗಳನ್ನಾದರೂ ಕಳುಹಿಸಿಕೊಡಿ ಎಂದು ಆಗ್ರಹಿಸಿದ್ದರು. ಈ ನಡುವೆ ಕಳೆದೆರಡು ಮೂರು ದಿನಗಳಿಂದ ಬಿಡದಿ ಟೌನ್‌ಶಿಪ್ ಅನುಷ್ಠಾನವಾಗಬೇಕೆಂದು ಆಗ್ರಹಿಸಿ ಕೆಲವು ರೈತರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸುತ್ತಿರುವುದರಿಂದ ಬೈರಮಂಗಲದಲ್ಲಿ ಟೌನ್‌ಶಿಪ್ ಪರ-ವಿರೋಧದ ಪ್ರತಿಭಟನೆಗಳು ಕಾವೇರತೊಡಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. ಕುಮಾರಸ್ವಾಮಿ ಆಗಮನದ ವೇಳೆ ಕೆಲವು ರೈತರು ಹಸಿರು ಬಾವುಟ ತೋರಿಸಿ ಸ್ವಾಗತಿಸಿದರೆ, ಇನ್ನು ಕೆಲವು ರೈತರು ಕೆಂಪು ಬಾವುಟ ಪ್ರದರ್ಶಿಸಿದರು. ಯೋಜನೆ ಪರವಾಗಿರುವ ಕೆಲವು ರೈತರು ಪರಿಹಾರಧನ ಹೆಚ್ಚಳ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. ಬೈರಮಂಗಲದಲ್ಲಿ ಕುಮಾರಸ್ವಾಮಿ ಅವರಿಗೆ ಮಾಜಿ ಶಾಸಕರಾದ ಎ.ಮಂಜುನಾಥ್, ಎಚ್.ಎಂ.ರಮೇಶ್ ಗೌಡ ಹಾಗೂ ಜೆಡಿಎಸ್ ಮುಖಂಡರು ಸಾಥ್ ನೀಡಿದರು. ಟೌನ್‌ಶಿಪ್ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತರ ಪರವಾಗಿ ಈಗಾಗಲೇ ಜೆಡಿಎಸ್ ಪಾದಯಾತ್ರೆ ನಡೆಸಿ ಬೆಂಬಲ ಸೂಚಿಸಿದ್ದು, ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದೆ.