ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ತೀವ್ರ ಹೈಡ್ರಾಮಾ ನಡೆದಿದೆ. ಕಾರ್ಯಕ್ರಮಕ್ಕೆ ಆಗಮಿಸಿದ್ದ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಒಕ್ಕಲಿಗ ಸಮುದಾಯ ಹಾಗೂ ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದ ಭವನದ ಮುಖ್ಯ ಗೇಟ್‌ನಲ್ಲಿ ಒಕ್ಕಲಿಗ ಸಮುದಾಯದ ಯುವಕರನ್ನು ಪೊಲೀಸರು ತಡೆದಿದ್ದೇ ಈ ಗದ್ದಲಕ್ಕೆ ಕಾರಣವಾಯಿತು. ಇದರಿಂದ ಆಕ್ರೋಶಗೊಂಡ ಯುವಕರು ಮತ್ತು ಜೆಡಿಎಸ್ ನಾಯಕರು ಗೇಟ್‌ನ ಬೀಗ ಮುರಿದು ಒಳಗೆ ನುಗ್ಗಿದರು. ವೇದಿಕೆಯಲ್ಲಿದ್ದ ಶಾಸಕ ಪ್ರದೀಪ್ ಈಶ್ವರ್ ಅವರನ್ನು ಕಂಡು ಆಕ್ರೋಶದ ಕಟ್ಟೆ ಒಡೆದ ಪ್ರತಿಭಟನಾಕಾರರು, ಅವರ ವಿರುದ್ಧ "ಪ್ರದೀಪ್ ಈಶ್ವರ್ ಗೋ ಬ್ಯಾಕ್" ಹಾಗೂ "ಹುಚ್ಚ ಹುಚ್ಚ" ಎಂದು ಜೋರಾಗಿ ಘೋಷಣೆಗಳನ್ನು ಕೂಗಿದರು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಈ ಹಿಂದೆ ನೀಡಿದ್ದ ಹೇಳಿಕೆಗೆ ಶಾಸಕರು ತಕ್ಷಣ ಕ್ಷಮೆಯಾಚಿಸಬೇಕು ಮತ್ತು ಕಾರ್ಯಕ್ರಮದಿಂದ ಹೊರಹೋಗಬೇಕು ಎಂದು ಪಟ್ಟು ಹಿಡಿದರು.
ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಪ್ರಭು ಅವರು, ಯಾರೂ ಸಹ ಕಾನೂನನ್ನು ಕೈಗೆ ತೆಗೆದುಕೊಳ್ಳಬಾರದು ಎಂದು ಪ್ರತಿಭಟನಾಕಾರರಲ್ಲಿ ಮನವಿ ಮಾಡಿದರು. ಇದೇ ವೇಳೆ ವೇದಿಕೆಗೆ ಆಗಮಿಸಿದ ಮಂಗಳನಾಥ ಸ್ವಾಮೀಜಿ ಅವರು ಮಧ್ಯಪ್ರವೇಶಿಸಿ, "ನಾವು ಕೆಂಪೇಗೌಡರ ವಂಶದವರು, ಯಾರೂ ಕೂಗಾಡಬೇಡಿ. ಐದು ನಿಮಿಷಗಳ ಕಾಲ ಮುಖಂಡರ ಜೊತೆ ಚರ್ಚಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು" ಎಂದು ಭರವಸೆ ನೀಡಿ ಜನರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಸ್ವಾಮೀಜಿಯವರ ಮಾತಿಗೆ ಗೌರವ ನೀಡಬೇಕು ಎಂದು ಸಮುದಾಯದ ಹಿರಿಯ ಮುಖಂಡರು ಸಹ ಮನವಿ ಮಾಡಿದ ನಂತರ ಕಾರ್ಯಕರ್ತರ ಆಕ್ರೋಶ ತುಸು ತಣ್ಣಗಾಯಿತು.