ಬೆಂಗಳೂರು : ಪ್ರತೀಕಾರಾತ್ಮಕ ಅಶ್ಲೀಲತೆ (ರಿವೆಂಜ್ ಪೋರ್ನೋಗ್ರಫಿ), ಸೆಕ್ಸ್ ಟಾರ್ಷನ್ ಹಾಗೂ ಬ್ಲ್ಯಾಕ್ ಮೇಲ್ ವಿಡಿಯೋಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಪೊಲೀಸರು ಇನ್ನು ಮುಂದೆ ಕಡ್ಡಾಯವಾಗಿ ಎಫ್ ಐಆರ್ ದಾಖಲಿಸಬೇಕು ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾರ್ವಜನಿಕರ ಅನುಮತಿ ಇಲ್ಲದೆ ಅವರ ಖಾಸಗಿ ಫೋಟೋಗಳು ಹಾಗೂ ವಿಡಿಯೋಗಳನ್ನು ಪ್ರಕಟಿಸುವುದು, ಹಂಚಿಕೊಳ್ಳುವುದು ಅಥವಾ ಪ್ರಸಾರ ಮಾಡುವ ಪ್ರಕರಣಗಳಲ್ಲಿ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮಕೈಗೊಳ್ಳುವಂತೆ ಅವರು ಪೊಲೀಸ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಇಂತಹ ಪ್ರಕರಣಗಳು ಸಂಜ್ಞೆಯ (ಕಾಗ್ನಿಸಬಲ್) ಅಪರಾಧಗಳಾಗಿದ್ದು, ಇವುಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಸೆಕ್ಷನ್ 77 ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆ ಸೆಕ್ಷನ್ 66ಇ, 67 ಮತ್ತು 67ಎ ಅಡಿಯಲ್ಲಿ ಪ್ರಕರಣ ದಾಖಲಿಸುವುದನ್ನು ಕಡ್ಡಾಯಗೊಳಿಸಿ ಇಲಾಖೆಯು ಸ್ಥಾಯಿ ಆದೇಶ ಹೊರಡಿಸಿದೆ.
ಸದರಿ ವಿಡಿಯೋ ಅಥವಾ ಫೋಟೋವನ್ನು ರೆಕಾರ್ಡ್ ಮಾಡಲು ಹಿಂದೆ ಸಂತ್ರಸ್ತರು ಒಪ್ಪಿಗೆ ನೀಡಿದ್ದರು ಎಂಬ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ದೂರು ದಾಖಲಿಸಿಕೊಳ್ಳಲು ನಿರಾಕರಿಸುವುದು ಅಥವಾ ವಿಳಂಬ ಧೋರಣೆ ಅನುಸರಿಸುವುದನ್ನು ಈ ಆದೇಶದಲ್ಲಿ ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದರೊಂದಿಗೆ, ಸಂತ್ರಸ್ತರಿಗೆ ಬೆದರಿಕೆ ಹಾಕುವುದು, ಸುಲಿಗೆ ಮಾಡುವುದು, ಲೈಂಗಿಕ ಅನುಕೂಲಗಳಿಗಾಗಿ ಬೇಡಿಕೆ ಇಡುವುದು ಅಥವಾ ಇನ್ಯಾವುದೇ ರೀತಿಯ ಒತ್ತಡ ಹೇರುವ ಸಂದರ್ಭಗಳು ಕಂಡುಬಂದಲ್ಲಿ, ಸುಲಿಗೆ ಮತ್ತು ಕ್ರಿಮಿನಲ್ ಬೆದರಿಕೆಗೆ ಸಂಬಂಧಿಸಿದ ಹೆಚ್ಚುವರಿ ಸೆಕ್ಷನ್‌ಗಳನ್ನು ಸಹ ಎಫ್‌ಐಆರ್‌ನಲ್ಲಿ ಅಳವಡಿಸಬೇಕು ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.