ಕೊಪ್ಪಳ : ದೇಶದಾದ್ಯಂತ ಇರುವ ಬಹುತೇಕ ಅಣೆಕಟ್ಟುಗಳಲ್ಲಿ ಶೇ.15ಕ್ಕಿಂತಲೂ ಹೆಚ್ಚು ಹೂಳು ತುಂಬಿಕೊಂಡಿದ್ದು, ಇದರಿಂದ ಜಲಾಶಯಗಳ ನೀರು ಸಂಗ್ರಹಣಾ ಸಾಮರ್ಥ್ಯ ಗಣನೀಯವಾಗಿ ಕುಸಿದಿದೆ. ಈ ಸಮಸ್ಯೆಯನ್ನು ಮನಗಂಡು ದೇಶದ ಅಣೆಕಟ್ಟುಗಳಿಂದ ಹೂಳು ತೆಗೆಯುವ ಬೃಹತ್ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಹೇಳಿದರು. ಮುನಿರಾಬಾದ್‌ನಲ್ಲಿ ಆಯೋಜಿಸಲಾಗಿದ್ದ ತುಂಗಭದ್ರಾ ಜಲಾಶಯದ ನೂತನ 33 ಸ್ಪಿಲ್‌ವೇ ಗೇಟುಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಂಗಭದ್ರಾ ಜಲಾಶಯದಲ್ಲೂ ಹೂಳು ತುಂಬಿಕೊಂಡಿರುವುದನ್ನು ಪ್ರಸ್ತಾಪಿಸಿದ ಸಚಿವರು, ಜಲಶಕ್ತಿ ಸಚಿವಾಲಯವು ಹೂಳು ತೆಗೆಯುವ ವಿಶೇಷ ಯೋಜನೆಯನ್ನು ರೂಪಿಸುತ್ತಿದೆ ಎಂದರು. ಈ ಯೋಜನೆಯ ತಾಂತ್ರಿಕ ಸಹಯೋಗವನ್ನು ಕೇಂದ್ರ ಸರ್ಕಾರ ನೀಡಲಿದ್ದು, ಅನುಷ್ಠಾನದ ಜವಾಬ್ದಾರಿಯನ್ನು ಆಯಾ ರಾಜ್ಯ ಸರ್ಕಾರಗಳು ಹೊರಬೇಕಾಗುತ್ತದೆ. ಈ ಯೋಜನೆ ಯಶಸ್ವಿಯಾದರೆ ತುಂಗಭದ್ರಾ ಜಲಾಶಯದ ನೀರು ಸಂಗ್ರಹಣಾ ಸಾಮರ್ಥ್ಯವನ್ನು ಶೇಕಡಾ 25 ರಿಂದ 30ರಷ್ಟು ಹೆಚ್ಚಿಸಬಹುದಾಗಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೆ ಆಂಧ್ರಪ್ರದೇಶ, ತೆಲಂಗಾಣ ಮತ್ತು ಕರ್ನಾಟಕ ರಾಜ್ಯಗಳ ನಡುವೆ ನೀರು ಹಂಚಿಕೆ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಆದರೆ ಇಂದು ಮೂರೂ ರಾಜ್ಯಗಳ ಮುಖ್ಯಮಂತ್ರಿಗಳು ಒಂದೇ ವೇದಿಕೆಗೆ ಬಂದು ಒಗ್ಗಟ್ಟು ಪ್ರದರ್ಶಿಸಿರುವುದನ್ನು ಸಚಿವರು ಮುಕ್ತಕಂಠದಿಂದ ಶ್ಲಾಘಿಸಿದರು. ಯಾವುದೇ ಆಕ್ಷೇಪಣೆಗಳಿಲ್ಲದೆ, ಪರಸ್ಪರ ಸಹಕಾರ ಹಾಗೂ ಆರ್ಥಿಕ ನೆರವು ನೀಡಿದ್ದರಿಂದಲೇ ತುಂಗಭದ್ರಾ ಜಲಾಶಯಕ್ಕೆ ಕೇವಲ ದಿನಗಳಲ್ಲಿ ನೂತನ ಗೇಟುಗಳನ್ನು ಅಳವಡಿಸಲು ಸಾಧ್ಯವಾಯಿತು ಎಂದು ಅವರು ಸ್ಮರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯಂತೆ ದೇಶವನ್ನು ರಸ್ತೆಗಳ ಮೂಲಕ ಹೇಗೆ ಜೋಡಿಸಲಾಗುತ್ತಿದೆಯೋ, ಅದೇ ರೀತಿ ನೀರಿನ ಯೋಜನೆಗಳ ಮೂಲಕವೂ ಇಡೀ ದೇಶವನ್ನು ಬೆಸೆಯಲಾಗುತ್ತಿದೆ ಎಂದು ತಿಳಿಸಿದರು. ರೈತರಿಗೆ ಹೆಚ್ಚಿನ ನೀರು ಲಭ್ಯವಾದರೆ, ಅವರು ವರ್ಷಕ್ಕೆ ಒಂದರ ಬದಲು ಎರಡು ಬೆಳೆಗಳನ್ನು ತೆಗೆಯಲು ಸಾಧ್ಯವಾಗುತ್ತದೆ ಮತ್ತು ಇದರಿಂದ ಅವರ ಆದಾಯವೂ ದ್ವಿಗುಣಗೊಳ್ಳುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ 'ಹರ್ ಘರ್ ಜಲ್' ಯೋಜನೆಯು ಹಳ್ಳಿಗಳಲ್ಲಿ ಸರಿಯಾಗಿ ಅನುಷ್ಠಾನಗೊಳ್ಳದಿದ್ದರೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳ ಗಮನಕ್ಕೆ ತರುವಂತೆ ಸಾರ್ವಜನಿಕರಲ್ಲಿ ಕೇಂದ್ರ ಸಚಿವ ಸಿ.ಆರ್. ಪಾಟೀಲ್ ಮನವಿ ಮಾಡಿದರು.