image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ದಾಖಲೆಯಿಲ್ಲದ ಗ್ರಾಮಠಾಣಾ ಆಸ್ತಿಗೆ ಇ-ಸ್ವತ್ತು ವಿತರಣೆ: ನಿಯಮಾವಳಿ ಸರಳೀಕರಣಕ್ಕೆ ಸಚಿವ ಈಶ್ವರ ಖಂಡ್ರೆ ಆದೇಶ

ದಾಖಲೆಯಿಲ್ಲದ ಗ್ರಾಮಠಾಣಾ ಆಸ್ತಿಗೆ ಇ-ಸ್ವತ್ತು ವಿತರಣೆ: ನಿಯಮಾವಳಿ ಸರಳೀಕರಣಕ್ಕೆ ಸಚಿವ ಈಶ್ವರ ಖಂಡ್ರೆ ಆದೇಶ

ಬೆಂಗಳೂರು : ರಾಜ್ಯದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ದಾಖಲೆಗಳಿಲ್ಲದೆ ಇರುವ ಹಳೆಯ ಮನೆಗಳಿಗೆ ಇ-ಸ್ವತ್ತು (ಇ-ಖಾತಾ) ನೀಡಲು ಅನುಕೂಲವಾಗುವಂತೆ ನಿಯಮಗಳಿಗೆ ತಿದ್ದುಪಡಿ ತರಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ. ಖಂಡ್ರೆ ಅವರು ಉನ್ನತಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ನಡೆದ ಉನ್ನತಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಗ್ರಾಮಠಾಣಾ ವ್ಯಾಪ್ತಿಯಲ್ಲಿ ಸುಮಾರು 65 ಲಕ್ಷ ಆಸ್ತಿಗಳಿದ್ದು, ಇವುಗಳಲ್ಲಿ ಬಹುತೇಕ ಆಸ್ತಿಗಳು ಪೂರ್ವಜರಿಂದ ಬಳುವಳಿಯಾಗಿ ಬಂದಿರುವುದರಿಂದ ಸಾರ್ವಜನಿಕರ ಬಳಿ ಯಾವುದೇ ಅಧಿಕೃತ ದಾಖಲೆಗಳಿಲ್ಲ. ಹೀಗಾಗಿ ಜನರ ಸಮಸ್ಯೆಯನ್ನು ನಿವಾರಿಸಲು ಒಂದು ಬಾರಿಯ ಕ್ರಮವಾಗಿ ನಿಯಮಾವಳಿಗಳನ್ನು ಸರಳೀಕರಿಸಿ, ಆಕ್ಷೇಪಣೆಗಳನ್ನು ಆಹ್ವಾನಿಸಿ 100 ದಿನಗಳ ಒಳಗಾಗಿ ಸಮರೋಪಾದಿಯಲ್ಲಿ ಇ-ಖಾತಾ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮೂಲ ನಿವಾಸಿಗಳಿಗೆ ಆಸ್ತಿಯ ಹಕ್ಕು ಒದಗಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದ್ದು, ಅದೇ ಸಮಯದಲ್ಲಿ ಖರಾಬು ಮತ್ತು ಗೋಮಾಳದಂತಹ ಸರ್ಕಾರಿ ಆಸ್ತಿಗಳನ್ನು ಸಂರಕ್ಷಿಸಿ, ಸಾರ್ವಜನಿಕರ ಸ್ವಾಧೀನದಲ್ಲಿರುವ ಮನೆಗಳಿಗೆ ಮಾತ್ರ ಖಾತಾ ನೀಡಲಾಗುವುದು. ಇನ್ನು ನಮೂನೆ 11 ಬಿ ಅಡಿಯಲ್ಲಿ ಆಸ್ತಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಲು ಮುಂದಿನ ಸೆಪ್ಟೆಂಬರ್ ತಿಂಗಳವರೆಗೆ ಕಾಲಾವಕಾಶ ವಿಸ್ತರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಸದ್ಯ ರಾಜ್ಯದ ಒಟ್ಟು 5,928 ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿರುವ 1.50 ಕೋಟಿ ಆಸ್ತಿಗಳ ಪೈಕಿ 53.53 ಲಕ್ಷ ಸ್ವತ್ತುಗಳಿಗೆ ಇ-ಸ್ವತ್ತು ನೀಡಲಾಗಿದೆ. ಉಳಿದ ಆಸ್ತಿಗಳಿಗೆ ಶೀಘ್ರವಾಗಿ ಹಕ್ಕುಪತ್ರ ನೀಡುವ ಗುರಿ ಹೊಂದಲಾಗಿದ್ದು, ವಸತಿ ಬಡಾವಣೆಗಳಲ್ಲಿ ಸರ್ಕಾರಿ ಜಾಗವನ್ನು ಬಳಸಿಕೊಂಡು ಲೇಔಟ್ ನಿರ್ಮಿಸಿದ್ದರೆ ಅಂತಹವುಗಳಿಗೆ ಇ-ಸ್ವತ್ತು ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಇಂತಹ ಸಂದರ್ಭಗಳಲ್ಲಿ ದಿಶಾಂಕ್ ಆ್ಯಪ್ ಮೂಲಕ ಪರಿಶೀಲನೆ ನಡೆಸಲು ಕಂದಾಯ ಮತ್ತು ಪಂಚಾಯತ್ ರಾಜ್ ಇಲಾಖೆಗಳ ಜಂಟಿ ಸಭೆ ಕರೆಯಲಾಗುವುದು ಎಂದು ಅವರು ವಿವರಿಸಿದರು. ಬಿ ಖಾತೆಗಳನ್ನು ಎ ಖಾತೆಯಾಗಿ ಪರಿವರ್ತಿಸುವ ಕುರಿತು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಇದೇ ವೇಳೆ ಆಡಳಿತಾತ್ಮಕ ವಿಳಂಬದ ವಿರುದ್ಧ ಎಚ್ಚರಿಕೆ ನೀಡಿದ ಸಚಿವರು, ಸಾರ್ವಜನಿಕರು ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದ 15 ದಿನಗಳ ಒಳಗಾಗಿ ಪ್ರಕ್ರಿಯೆ ಮುಗಿಯಬೇಕು. ತಾಂತ್ರಿಕ ಕಾರಣ ಹೊರತುಪಡಿಸಿ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವ ಪಿಡಿಓಗಳಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗುವುದು ಹಾಗೂ ದಾಖಲೆಗಳಿಲ್ಲದೆ ಕಾನೂನುಬಾಹಿರವಾಗಿ ಇ-ಸ್ವತ್ತು ನೀಡುವ ಅಧಿಕಾರಿಗಳ ವಿರುದ್ಧ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ಮಳೆ ಕೊರತೆಯ ಬಗ್ಗೆ ಮಾತನಾಡಿದ ಅವರು, ಎಲ್ ನಿನೋ ಪ್ರಭಾವದಿಂದಾಗಿ ಜೂನ್ ವರೆಗೆ ಶೇ. 42 ರಷ್ಟು ಮಳೆ ಕೊರತೆಯಾಗಿದ್ದು, ಪ್ರಸ್ತುತ 826 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ. ಆದರೆ ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರು ಪೂರೈಸಲು ಹಣಕಾಸಿನ ಯಾವುದೇ ಕೊರತೆಯಿಲ್ಲ ಮತ್ತು ಈಗಾಗಲೇ ಸರ್ಕಾರ 117 ಕೋಟಿ ರೂಪಾಯಿಗಳನ್ನು ಮುಂಗಡವಾಗಿ ಬಿಡುಗಡೆ ಮಾಡಿದೆ ಎಂದು ಸಚಿವರು ಮಾಹಿತಿ ನೀಡಿದರು. ಈ ಪ್ರಮುಖ ಸಭೆಯಲ್ಲಿ ಇಲಾಖೆಯ ಕಾರ್ಯದರ್ಶಿಗಳಾದ ಸಮೀರ್ ಶುಕ್ಲ, ಡಿ. ರಣದೀಪ್ ಹಾಗೂ ಆಯುಕ್ತರಾದ ಅರುಂದತಿ ಚಂದ್ರಶೇಖರ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ