ಚಿಕ್ಕಮಗಳೂರು : ಭಾರತೀಯ ಜನಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನದಿಂದಲೇ ಕಾಶ್ಮೀರ ಭಾರತದಲ್ಲಿ ಉಳಿಯಲು ಸಾಧ್ಯವಾಯಿತು ಎಂದು ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ಅವರು ಹೇಳಿದ್ದಾರೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಬಲಿದಾನ ದಿನ ಹಾಗೂ ಕರ್ನಾಟಕ ಕೇಸರಿ ಜಗನ್ನಾಥರಾವ್ ಜೋಶಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಶ್ಯಾಮ್ ಪ್ರಸಾದ್ ಮುಖರ್ಜಿ ಅವರು ಕೇವಲ 33ನೇ ವಯಸ್ಸಿನಲ್ಲಿ ಕಲ್ಕತ್ತಾ ವಿಶ್ವವಿದ್ಯಾಲಯದ ಕುಲಪತಿಯಾಗಿ ನೇಮಕಗೊಂಡು ಶಿಕ್ಷಣ ಕ್ಷೇತ್ರದಲ್ಲಿ ಅಪ್ರತಿಮ ಸಾಧನೆ ಮಾಡಿದ್ದರು. ಮಾತೃಭಾಷೆ ಮತ್ತು ಸಂಸ್ಕೃತಿಯ ರಕ್ಷಣೆಗೆ ಒತ್ತು ನೀಡಿದ್ದ ಅವರು, ದೇಶ ವಿಭಜನೆಯ ರಾಜಕಾರಣದ ವಿರುದ್ಧ ಹೋರಾಡಿದ್ದರು. ಇವರ ಹೋರಾಟದ ಫಲವಾಗಿಯೇ ಪಶ್ಚಿಮ ಬಂಗಾಳ ಭಾರತದಲ್ಲಿ ಉಳಿಯಲು ಸಾಧ್ಯವಾಯಿತು. ಸ್ವಾತಂತ್ರ್ಯಾನಂತರದ ರಾಷ್ಟ್ರೀಯ ಸರ್ಕಾರದಲ್ಲಿ ಕೈಗಾರಿಕಾ ಸಚಿವರಾಗಿದ್ದ ಮುಖರ್ಜಿ ಅವರು ಚಿತ್ತರಂಜನ್ ಲೋಕೊಮೋಟಿವ್ ವರ್ಕ್ಸ್, ಸಿಂಧಿ ರಸಗೊಬ್ಬರ ಕಾರ್ಖಾನೆ, ದಾಮೋದರ್ ವ್ಯಾಲಿ ಯೋಜನೆ ಹಾಗೂ ಬೆಂಗಳೂರಿನ ಐಟಿಐ ಮತ್ತು ಎಚ್‌ಎಎಲ್‌ನ ಪುನಶ್ವೇತನ ಸೇರಿದಂತೆ ಹಲವು ಪ್ರಮುಖ ಯೋಜನೆಗಳ ಮೂಲಕ ದೇಶದ ಕೈಗಾರಿಕಾ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದ್ದರು.
ನೆಹರು-ಲಿಯಾಖತ್ ಒಪ್ಪಂದದ ವಿರುದ್ಧ ಹಾಗೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ವಿರೋಧಿಸಿ 1950ರಲ್ಲಿ ಸಚಿವ ಸಂಪುಟಕ್ಕೆ ರಾಜೀನಾಮೆ ನೀಡಿದ ಅವರು, "ಏಕ್ ದೇಶ್ ಮೇ ದೋ ವಿಧಾನ್, ದೋ ನಿಶಾನ್, ದೋ ಪ್ರಧಾನ್ ನಹೀ ಚಲೇಗಾ" ಎಂಬ ಘೋಷಣೆಯೊಂದಿಗೆ ರಾಷ್ಟ್ರವ್ಯಾಪಿ ಹೋರಾಟ ನಡೆಸಿದರು. ಕಾಶ್ಮೀರ ಪ್ರವೇಶಕ್ಕೆ ಪರ್ಮಿಟ್ ಕಡ್ಡಾಯವಾಗಿದ್ದ ವ್ಯವಸ್ಥೆಯನ್ನು ವಿರೋಧಿಸಿ ಅಲ್ಲಿಗೆ ತೆರಳಿದ ಅವರನ್ನು ಬಂಧಿಸಲಾಯಿತು ಹಾಗೂ ಬಂಧನದಲ್ಲಿದ್ದಾಗಲೇ ಅನುಮಾನಾಸ್ಪದ ಪರಿಸ್ಥಿತಿಯಲ್ಲಿ ಅವರು ಮೃತಪಟ್ಟರು. ಅವರ ಬಲಿದಾನದ ಪರಿಪೂರ್ಣ ಫಲವಾಗಿ 2019ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿತು. ಇವರಿಂದ ಸ್ಥಾಪಿತವಾದ ಜನಸಂಘ ಮತ್ತು ನಂತರದ ಭಾರತೀಯ ಜನತಾ ಪಕ್ಷದ ಮೂಲ ಸಿದ್ಧಾಂತ ವೋಟ್ ಬ್ಯಾಂಕ್ ಅಥವಾ ಅಧಿಕಾರದ ರಾಜಕಾರಣವಲ್ಲ, ಬದಲಿಗೆ ರಾಷ್ಟ್ರಹಿತದ ರಾಜಕಾರಣವಾಗಿದೆ. ಮುಖರ್ಜಿ ಅವರ ಸಿದ್ಧಾಂತವು ಅಧಿಕಾರಕ್ಕಾಗಿ ಅಲ್ಲದೆ ರಾಷ್ಟ್ರಹಿತಕ್ಕಾಗಿ ಆಗಿದ್ದರಿಂದಲೇ ಇಂದು ಬಿಜೆಪಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದು ಸಿ. ಟಿ. ರವಿ ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಸೇರಿದಂತೆ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.