ಬೆಂಗಳೂರು : ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿಯ ಗೈರುಹಾಜರಿಯನ್ನು ತಡೆದು ಆಡಳಿತದಲ್ಲಿ ಶಿಸ್ತು ತರುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಜಿಯೋ ಫೆನ್ಸಿಂಗ್ ಆಧಾರಿತ 'ಕರ್ತವ್ಯ ಆ್ಯಪ್' ಆನ್‌ಲೈನ್ ಹಾಜರಾತಿ ಪದ್ಧತಿಗೆ ನೌಕರರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಮೇ 1 ರಿಂದ ಜಾರಿಗೆ ಬಂದಿರುವ ಈ ನಿಯಮದ ಪ್ರಕಾರ, ಸರ್ಕಾರದ ಅಧೀನದ ಇಲಾಖೆಗಳು ಹಾಗೂ ನಿಗಮ ಮಂಡಳಿಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿನಿತ್ಯ ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದಾಗ 'ಚೆಕ್‌ಇನ್' ಹಾಗೂ ಸಂಜೆ ಕಚೇರಿಯಿಂದ ತೆರಳುವಾಗ 'ಚೆಕ್‌ಔಟ್' ಮೂಲಕ ಕಡ್ಡಾಯವಾಗಿ ಮೊಬೈಲ್‌ನಲ್ಲಿ ಹಾಜರಾತಿ ದಾಖಲಿಸಬೇಕಿದೆ. ಆದರೆ, ಈ ಹೊಸ ವ್ಯವಸ್ಥೆಗೆ ಆರಂಭದಲ್ಲಿ ಪೊಲೀಸ್ ಇಲಾಖೆಯಿಂದ ಅಪಸ್ವರ ಕೇಳಿಬಂದ ಬೆನ್ನಲ್ಲೇ, ಇದೀಗ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಹಾಗೂ ಅಬಕಾರಿ ಇಲಾಖೆಯ ನೌಕರರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಗ್ರಾಮೀಣ ಮಟ್ಟದಲ್ಲಿ ಕಾರ್ಯನಿರ್ವಹಿಸುವ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ದೈನಂದಿನ ಕೆಲಸದ ಸ್ವರೂಪಕ್ಕೂ ಮತ್ತು ಈ ಆ್ಯಪ್‌ನ ನಿಯಮಗಳಿಗೂ ಸಂಪೂರ್ಣ ವ್ಯತಿರಿಕ್ತವಾಗಿದೆ ಎಂದು ಆರೋಪಿಸಲಾಗಿದೆ. ಹಳ್ಳಿಗಳಲ್ಲಿ ಹಠಾತ್ ಕುಡಿಯುವ ನೀರಿನ ಪೈಪ್‌ಲೈನ್ ಒಡೆತ, ಬೋರ್‌ವೆಲ್ ಮೋಟಾರ್ ದುರಸ್ತಿ, ಸಾಂಕ್ರಾಮಿಕ ರೋಗ ಅಥವಾ ನೈಸರ್ಗಿಕ ವಿಕೋಪಗಳಂತಹ ತುರ್ತು ಸಂದರ್ಭಗಳಲ್ಲಿ ಪಿಡಿಒಗಳು ತಕ್ಷಣ ಸ್ಥಳಕ್ಕೆ ಧಾವಿಸಬೇಕಿರುತ್ತದೆ. ಆದರೆ, ಇಂತಹ ಮಾನವೀಯ ಹಾಗೂ ತುರ್ತು ಸಾರ್ವಜನಿಕ ಸೇವೆಗಿಂತ ಕಚೇರಿ ಆವರಣ ತಲುಪಿ ಹಾಜರಾತಿ ದಾಖಲಿಸುವುದೇ ಮುಖ್ಯ ಎಂಬ ನಿಯಮವು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಲಿದೆ ಎಂದು ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬಿ ಗ್ರೇಡ್ ಹುದ್ದೆ ಉನ್ನತೀಕರಣ ಸಂಘ ಕಳವಳ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರ ಮಟ್ಟದ ಯೋಜನೆಗಳ ಅನುಷ್ಠಾನಕ್ಕೆ ತೊಂದರೆಯಾಗುತ್ತಿರುವುದರಿಂದ, ನಿಯಮದಿಂದ ವಿನಾಯಿತಿ ನೀಡಬೇಕು ಅಥವಾ ಸೂಕ್ತ ತಿದ್ದುಪಡಿ ತರಬೇಕೆಂದು ಸಂಘವು ಸಚಿವ ಈಶ್ವರ್ ಖಂಡ್ರೆಗೆ ಪತ್ರ ಬರೆದು ಮನವಿ ಮಾಡಿದೆ.
ಮತ್ತೊಂದೆಡೆ, ಅಬಕಾರಿ ಇಲಾಖೆಯ ಅಧಿಕಾರಿಗಳು ಮತ್ತು ನೌಕರರು ಸಹ ತಮಗೂ ಈ ಆ್ಯಪ್‌ನಿಂದ ವಿನಾಯಿತಿ ನೀಡುವಂತೆ ಒತ್ತಾಯಿಸಿದ್ದಾರೆ. ಇಲಾಖೆಯಲ್ಲಿ ವಾರದ ಕವಾಯಿತು (ಪರೇಡ್) ಬೆಳಗ್ಗೆ 7 ಗಂಟೆಗೆ ಇರುವುದರಿಂದ ಕಚೇರಿಗೆ ತೆರಳಿ ಆನ್‌ಲೈನ್ ಹಾಜರಾತಿ ದಾಖಲಿಸುವುದು ಅಸಾಧ್ಯವಾಗಿದೆ. ಅಷ್ಟೇ ಅಲ್ಲದೆ, ರಾಜ್ಯದಲ್ಲಿ ಮದ್ಯದಂಗಡಿಗಳು ಬೆಳಿಗ್ಗೆ 9 ರಿಂದ ರಾತ್ರಿ 12 ರವರೆಗೆ (ಬೆಂಗಳೂರಿನಲ್ಲಿ ರಾತ್ರಿ 1 ಗಂಟೆಯವರೆಗೆ) ಕಾರ್ಯನಿರ್ವಹಿಸುತ್ತವೆ. ನೌಕರರು ಆ್ಯಪ್ ನಿಯಮದಂತೆ ಸಂಜೆ 5.30ಕ್ಕೆ ಚೆಕ್‌ಔಟ್ ಮಾಡಿ ಮನೆಗೆ ತೆರಳಿದ ನಂತರ ನಡೆಯುವ ಅಬಕಾರಿ ಅಪರಾಧಗಳಿಗೆ ಮತ್ತು ಅಕ್ರಮಗಳಿಗೆ ಹೊಣೆ ಯಾರು ಎಂಬ ಗೊಂದಲ ಸೃಷ್ಟಿಯಾಗಿದೆ. ಸಂಜೆ 7 ಗಂಟೆಯ ಬಳಿಕವೇ ಅಬಕಾರಿ ಪ್ರಕರಣಗಳು ಹೆಚ್ಚು ಸಂಭವಿಸುವುದರಿಂದ ನಿರಂತರ ತಪಾಸಣೆ ಅಗತ್ಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ದಿನದ 24 ಗಂಟೆಯೂ ಕೆಲಸ ಮಾಡಲು ಸಾಧ್ಯವಿಲ್ಲದ ಕಾರಣ, ಅಧಿಕಾರಿಗಳು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಆದ್ದರಿಂದ, ಪೊಲೀಸ್, ಕಾರಾಗೃಹ, ಅಗ್ನಿಶಾಮಕ ಮತ್ತು ಅರಣ್ಯ ಇಲಾಖೆಯ ಮಾದರಿಯಲ್ಲೇ ಅಬಕಾರಿ ಇಲಾಖೆಯನ್ನೂ 'ಅಗತ್ಯ ಇಲಾಖೆ' ಎಂದು ಘೋಷಿಸಬೇಕು ಮತ್ತು ಇಲಾಖೆಗೆ 'ನಿಗದಿತ ಪಾಳಿ' (Shift) ವ್ಯವಸ್ಥೆಯನ್ನು ತರಬೇಕು ಎಂದು ನೌಕರರು ಆಗ್ರಹಿಸಿದ್ದಾರೆ. ಈ ಅವೈಜ್ಞಾನಿಕ ಕರ್ತವ್ಯ ಆ್ಯಪ್ ಪದ್ಧತಿಯನ್ನು ತಕ್ಷಣವೇ ಕೈಬಿಡಬೇಕೆಂದು ಅಬಕಾರಿ ಸಿಬ್ಬಂದಿ ಸರ್ಕಾರದ ಮುಂದೆ ಅಳಲು ತೋಡಿಕೊಂಡಿದ್ದಾರೆ.