ಬೆಂಗಳೂರು : ನೈಋತ್ಯ ಮುಂಗಾರು ಮಾರುತಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಜೂನ್ 23 ರಿಂದ ಜೂನ್ 29 ರವರೆಗೆ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಪ್ರಾದೇಶಿಕ ಹವಾಮಾನ ಕೇಂದ್ರ (IMD) ಮುನ್ಸೂಚನೆ ನೀಡಿದೆ. ಲಕ್ಷದ್ವೀಪದ ಸಮೀಪ ಸಮುದ್ರ ಮಟ್ಟದಿಂದ 5.8 ಕಿಮೀ ಎತ್ತರದಲ್ಲಿ ಸುಳಿಗಾಳಿ ಉಂಟಾಗಿರುವುದರಿಂದ ರಾಜ್ಯದಾದ್ಯಂತ ಗುಡುಗು ಸಹಿತ ಮಳೆ ಮತ್ತು ಗಂಟೆಗೆ 30-40 ಕಿಮೀ ವೇಗದ ಬಲವಾದ ಗಾಳಿ ಬೀಸಲಿದೆ. ಈಗಾಗಲೇ ಮಹಾರಾಷ್ಟ್ರ, ತೆಲಂಗಾಣ, ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್ ಮತ್ತು ಬಿಹಾರಕ್ಕೆ ಮುಂಗಾರು ವಿಸ್ತರಿಸಿದ್ದು, ಮುಂದಿನ 2-3 ದಿನಗಳಲ್ಲಿ ಗುಜರಾತ್ ಹಾಗೂ ಮಧ್ಯಪ್ರದೇಶಕ್ಕೆ ಮುನ್ನಡೆಯಲು ಪೂರಕ ವಾತಾವರಣವಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಜೂನ್ 23 ರಿಂದ 26 ರವರೆಗೆ ಅತಿ ಭಾರೀ ಮಳೆಯಾಗಲಿದ್ದು, ಜೂನ್ 27 ರಿಂದ 29 ರವರೆಗೆ ಭಾರೀ ಮಳೆ ಮುಂದುವರಿಯಲಿದೆ. ಈ ಹಿನ್ನೆಲೆಯಲ್ಲಿ ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಜೂನ್ 24 ರಿಂದ 26 ರವರೆಗೆ ಭಾರೀ ಮಳೆಯಾಗಲಿದ್ದು, ಹಾವೇರಿ, ಗದಗ, ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ.
ದಕ್ಷಿಣ ಒಳನಾಡಿನ ಮಲೆನಾಡು ಭಾಗದ ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಜೂನ್ 24 ರಿಂದ 29 ರವರೆಗೆ ಸತತವಾಗಿ ಭಾರೀ ಮಳೆಯಾಗಲಿದ್ದು, ಹಾಸನ ಮತ್ತು ಕೊಡಗಿನಲ್ಲೂ ಉತ್ತಮ ಮಳೆಯಾಗಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಮತ್ತು ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಳೆದ 24 ಗಂಟೆಗಳಲ್ಲಿ ಉತ್ತರ ಒಳನಾಡಿನ ಕೆಲವು ಕಡೆ ತಾಪಮಾನ 5 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿಕೆಯಾಗಿದ್ದರೂ, ಮಳೆಯ ಕಾರಣ ಮುಂಬರುವ ಐದು ದಿನಗಳಲ್ಲಿ ತಾಪಮಾನದಲ್ಲಿ ಯಾವುದೇ ದೊಡ್ಡ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ.