image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಂಚಾರ ದಂಡ 50% ರಿಯಾಯಿತಿ: ಮೊದಲ ದಿನವೇ ₹96.73 ಲಕ್ಷ ಸಂಗ್ರಹ

ಸಂಚಾರ ದಂಡ 50% ರಿಯಾಯಿತಿ: ಮೊದಲ ದಿನವೇ ₹96.73 ಲಕ್ಷ ಸಂಗ್ರಹ

ಬೆಂಗಳೂರು : ನಗರದಲ್ಲಿ ಬಾಕಿ ಉಳಿದಿರುವ ಸಂಚಾರ ನಿಯಮ ಉಲ್ಲಂಘನೆ ದಂಡ (ಇ-ಚಲನ್) ಪಾವತಿಗೆ ಸರ್ಕಾರ ಘೋಷಿಸಿರುವ ಶೇಕಡಾ 50ರಷ್ಟು ರಿಯಾಯಿತಿ ಯೋಜನೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮೊದಲ ದಿನ ವಿವಿಧ ಪಾವತಿ ವಿಧಾನಗಳ ಮೂಲಕ ಒಟ್ಟು 32,486 ಪ್ರಕರಣಗಳು ಇತ್ಯರ್ಥಗೊಂಡಿದ್ದು, 96,73,800 ರೂಪಾಯಿ ದಂಡದ ಮೊತ್ತ ಸಂಗ್ರಹವಾಗಿದೆ. ರಾಜ್ಯ ಸರ್ಕಾರ ನೀಡಿರುವ ಈ ರಿಯಾಯಿತಿ ಅವಕಾಶವು ಜೂನ್ 21ರಿಂದ ಜುಲೈ 10ರವರೆಗೆ ಚಾಲ್ತಿಯಲ್ಲಿರಲಿದೆ. 2026ರ ಮೇ ತಿಂಗಳಿಗೂ ಮೊದಲು ಪೊಲೀಸ್ ಇಲಾಖೆಯ ಸಂಚಾರ ಇ-ಚಲನ್‌ಗಳಲ್ಲಿ ದಾಖಲಾಗಿ ಬಾಕಿ ಇರುವ ಪ್ರಕರಣಗಳ ದಂಡದ ಮೊತ್ತ ಮತ್ತು ಸಾರಿಗೆ ಇಲಾಖೆಯಲ್ಲಿ 1991ರಿಂದ 2022ರ ಅವಧಿಯಲ್ಲಿ ದಾಖಲಾಗಿರುವ ದಂಡವನ್ನು ಪಾವತಿಸಲು ಈ ರಿಯಾಯಿತಿ ಅನ್ವಯವಾಗುತ್ತದೆ ಎಂದು ಸರ್ಕಾರ ತಿಳಿಸಿದೆ.

ಪ್ರಸ್ತುತ ರಾಜ್ಯದಲ್ಲಿ ಒಟ್ಟು 5.05 ಕೋಟಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಬಾಕಿಯಿದ್ದು, ಒಟ್ಟು 2,727 ಕೋಟಿ ರೂಪಾಯಿ ದಂಡ ಪಾವತಿಯಾಗಬೇಕಿದೆ. ಈ ಪೈಕಿ ಬೆಂಗಳೂರಿನಲ್ಲೇ ಸಿಂಹಪಾಲು ಇದ್ದು, 3.37 ಕೋಟಿ ಪ್ರಕರಣಗಳಿಂದ 1,843 ಕೋಟಿ ರೂಪಾಯಿ ದಂಡ ವಸೂಲಿಯಾಗಬೇಕಿದೆ. ಸರ್ಕಾರ ಈಗಾಗಲೇ 2023ರಲ್ಲಿ ಮೂರು ಬಾರಿ ಹಾಗೂ 2025ರಲ್ಲಿ ಎರಡು ಬಾರಿ ಇಂತಹ ರಿಯಾಯಿತಿ ಘೋಷಿಸಿತ್ತು. ಸದ್ಯ ದಂಡ ಪಾವತಿಗೆ ನೀಡಲಾಗಿರುವ 6ನೇ ಅವಕಾಶ ಇದಾಗಿದೆ. ಕಳೆದ ವರ್ಷ ನೀಡಲಾಗಿದ್ದ ರಿಯಾಯಿತಿ ಸಂದರ್ಭದಲ್ಲಿ 30 ಲಕ್ಷಕ್ಕೂ ಅಧಿಕ ಪ್ರಕರಣಗಳು ಇತ್ಯರ್ಥಗೊಂಡು, 89 ಕೋಟಿ ರೂಪಾಯಿಗೂ ಅಧಿಕ ದಂಡ ಸಂಗ್ರಹವಾಗಿತ್ತು. ವಾಹನ ಸವಾರರು ತಮ್ಮ ದಂಡದ ವಿವರಗಳನ್ನು ಕರ್ನಾಟಕ ಸ್ಟೇಟ್ ಪೊಲೀಸ್ (ಕೆಎಸ್‌ಪಿ) ಆ್ಯಪ್, ಬಿಟಿಪಿ-ಅಸ್ತ್ರಂ ಆ್ಯಪ್, ಹತ್ತಿರದ ಸಂಚಾರ ಪೊಲೀಸ್ ಠಾಣೆಗಳು, ಬೆಂಗಳೂರು ಸಂಚಾರ ನಿರ್ವಹಣಾ ಕೇಂದ್ರ ಹಾಗೂ ಕರ್ನಾಟಕ ಒನ್/ಬೆಂಗಳೂರು ಒನ್ ವೆಬ್‌ಸೈಟ್‌ ಮೂಲಕ ಪರಿಶೀಲಿಸಿ ಪಾವತಿಸಬಹುದಾಗಿದೆ. ಇದಲ್ಲದೆ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರಿನ 12 ಪ್ರಮುಖ ಸ್ಥಳಗಳಲ್ಲಿ ಸಂಚಾರ ಪೊಲೀಸರು ವಿಶೇಷ ಕೌಂಟರ್‌ಗಳನ್ನು ಸಹ ಆರಂಭಿಸಿದ್ದು, ವಾಹನ ಸವಾರರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.

Category
ಕರಾವಳಿ ತರಂಗಿಣಿ