ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನ ರೈಲ್ವೆ ನಿಲ್ದಾಣಕ್ಕೆ ಹೌರಾ ಎಕ್ಸ್‌ಪ್ರೆಸ್ ರೈಲಿನ ಮೂಲಕ 40ಕ್ಕೂ ಹೆಚ್ಚು ಶಂಕಿತ ಬಾಂಗ್ಲಾದೇಶದ ಅಕ್ರಮ ವಲಸಿಗರು ಬಂದಿಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಸ್ಥಳದಲ್ಲಿ ಭಾರೀ ಹೈಡ್ರಾಮಾ ನಡೆದಿದೆ. ವಾರಕ್ಕೊಮ್ಮೆ ಕೋಲ್ಕತ್ತಾದಿಂದ ಮೈಸೂರಿಗೆ ಆಗಮಿಸುವ ಈ ರೈಲಿನಲ್ಲಿ ಬಂದ ಕಾರ್ಮಿಕರ ಗುಂಪಿನ ಚಲನವಲನಗಳನ್ನು ಗಮನಿಸಿ ಅನುಮಾನಗೊಂಡ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಅವರನ್ನು ನಿಲ್ದಾಣದಲ್ಲೇ ತಡೆದು ನಿಲ್ಲಿಸಿ ತಪಾಸಣೆ ನಡೆಸಿದ್ದಾರೆ.
ಅವರ ಗುರುತಿನ ಚೀಟಿಗಳನ್ನು ಪರಿಶೀಲಿಸಿದಾಗ ಬಹುತೇಕರ ಬಳಿ ಪಶ್ಚಿಮ ಬಂಗಾಳದ ವಿಳಾಸವಿರುವ ಆಧಾರ್ ಮತ್ತು ಐಡಿ ಕಾರ್ಡ್‌ಗಳು ಪತ್ತೆಯಾಗಿವೆ. ಮೇಲ್ನೋಟಕ್ಕೆ ಇವೆಲ್ಲವೂ ನಕಲಿ ದಾಖಲೆಗಳಂತೆ ಕಾಣಿಸುತ್ತಿದ್ದ ಹಿನ್ನೆಲೆಯಲ್ಲಿ, ಇವರೆಲ್ಲರೂ ಬಾಂಗ್ಲಾದೇಶದ ಅಕ್ರಮ ವಲಸಿಗರು ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ರೈಲು ಇಳಿದ ತಕ್ಷಣ ಕೆಲವರು ನಗರದ ವಿವಿಧೆಡೆ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಅವರನ್ನು ಬೆನ್ನಟ್ಟಿ ಹಿಡಿದು ವಿಚಾರಣೆ ನಡೆಸಿದಾಗ ಗೊಂದಲದ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಕಾರ್ಮಿಕರು ಮೈಸೂರಿನಿಂದ ಕೊಡಗು, ಪಿರಿಯಾಪಟ್ಟಣ ಹಾಗೂ ಕೇರಳದ ವಿವಿಧ ಭಾಗಗಳಿಗೆ ಕೆಲಸದ ನೆಪದಲ್ಲಿ ತೆರಳಲು ಯೋಜಿಸಿದ್ದರು ಎಂದು ಶಂಕಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿ ಎಲ್ಲಾ ಶಂಕಿತರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಶಾಸಕ ಎಲ್. ನಾಗೇಂದ್ರ, ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಬದಲಾವಣೆಗಳ ನಂತರ ಅಕ್ರಮ ಬಾಂಗ್ಲಾ ವಲಸಿಗರು ನಕಲಿ ಆಧಾರ್ ಕಾರ್ಡ್‌ಗಳೊಂದಿಗೆ ಪ್ರತಿ ಭಾನುವಾರ ಮೈಸೂರಿಗೆ ಬರುತ್ತಿದ್ದಾರೆ. ರಾಜ್ಯ ಸರ್ಕಾರ ಇವರ ಮೇಲೆ ಹದ್ದಿನ ಕಣ್ಣಿಡಬೇಕು ಮತ್ತು ಭದ್ರತಾ ವೈಫಲ್ಯವನ್ನು ತಡೆದು ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಸದ್ಯ ವಶದಲ್ಲಿರುವವರು ನಿಜವಾಗಿಯೂ ಬಾಂಗ್ಲಾದೇಶದ ನುಸುಳುಕೋರರೇ ಅಥವಾ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರೇ ಎಂಬ ಸತ್ಯ ಪೊಲೀಸ್ ತನಿಖೆಯ ನಂತರವಷ್ಟೇ ಹೊರಬರಬೇಕಿದೆ.