ಬೆಂಗಳೂರು : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿರುವ ಹಿನ್ನೆಲೆಯಲ್ಲಿ, ದ್ರೋಹ ಬಗೆದವರನ್ನು ಪತ್ತೆ ಹಚ್ಚಲು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆ-ಪ್ರಮಾಣ ಮಾಡಿಸಲು ಮುಂದಾಗಿರುವ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕ್ರಮಕ್ಕೆ ಹಿರಿಯ ನಾಯಕ ಹಾಗೂ ಶಾಸಕ ಎಸ್. ಸುರೇಶ್ ಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ರಾಜ್ಯಾಧ್ಯಕ್ಷರ ಈ ಘೋಷಣೆ ತಮಗೆ ದಿಗ್ಭ್ರಮೆ ಉಂಟುಮಾಡಿದೆ ಮತ್ತು ಇದ್ಯಾಕೋ ಸರಿಯಾದ ತೀರ್ಮಾನ ಎಂದು ಅನಿಸುತ್ತಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳವು ತನ್ನದೇ ಆದ ಪಾವಿತ್ರ್ಯತೆ ಹೊಂದಿದೆ. ರಾಜಕಾರಣದಲ್ಲಿ ನಡೆದುಬಿದ್ದಿರುವ ಕೀಳು ಮಟ್ಟದ ಅಡ್ಡಮತದ ಅಪಚಾರಕ್ಕೆ ಧರ್ಮಸ್ಥಳವನ್ನು ಎಳೆಯುವುದು ದಯವಿಟ್ಟು ಬೇಡ. ಇಂತಹ ಅಪಚಾರ ಮಾಡಿದವರು ಹೆತ್ತ ತಾಯಿಗೆ ದ್ರೋಹ ಮಾಡಿದಷ್ಟೇ ಪಾಪ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಇಡೀ ನಾಡಿನ ಜನತೆ ನಂಬಿಕೆ ಇಟ್ಟಿರುವ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಾನದಲ್ಲಿ, ಒಂದೊಮ್ಮೆ ಅಡ್ಡ ಮತದಾನ ಮಾಡಿದವರು ಸುಳ್ಳು ಆಣೆ-ಪ್ರಮಾಣ ಮಾಡಿ ಬಚಾವಾಗಲು ಯತ್ನಿಸಿದರೆ ಅದರಿಂದ ಅಪಚಾರದ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆಯೇ ಹೊರತು ಯಾವುದೇ ಪ್ರಯೋಜನವಿಲ್ಲ. ಆದ್ದರಿಂದ ಸ್ವಾಮಿಯ ಶ್ರೇಷ್ಠತೆಯನ್ನು ಈ ರೀತಿ ಒರೆ ಹಚ್ಚುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ನಿಗದಿಯಾಗಿದ್ದ ಮತಗಳಿಗಿಂತ ಕಡಿಮೆ ಮತಗಳು ಬಂದಿರುವುದು ಬಿಜೆಪಿಯಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ಪಕ್ಷಕ್ಕೆ ದ್ರೋಹ ಬಗೆದವರನ್ನು ಪತ್ತೆಹಚ್ಚಲು ತನ್ನ ಎಲ್ಲಾ 63 ಶಾಸಕರನ್ನು ಧರ್ಮಸ್ಥಳಕ್ಕೆ ಕರೆದೊಯ್ದು ಮಂಜುನಾಥ ಸ್ವಾಮಿಯ ಮುಂದೆ ಪ್ರಮಾಣ ಮಾಡಿಸಲು ವಿಜಯೇಂದ್ರ ನೇತೃತ್ವದ ತಂಡ ನಿರ್ಧರಿಸಿದ್ದು, ಸದ್ಯ ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.