image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿಸಿಯೂಟ ತಯಾರಕರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ

ಬಿಸಿಯೂಟ ತಯಾರಕರಿಂದ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮನವಿ

ಕೂಡ್ಲಿಗಿ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ತಾಲೂಕು ಸಮಿತಿಯ ಪದಾಧಿಕಾರಿಗಳು ಶಿರಸ್ತೇದಾರ್ ಎಸ್.ಚಂದ್ರಶೇಖರ ಹಾಗೂ ಬಿಸಿಯೂಟ ಯೋಜನಾಧಿಕಾರಿ ಕಚೇರಿಯ ಎಫ್‌ಡಿಎ ಎಸ್.ಎಂ.ನಟರಾಜ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಎಚ್.ವೀರಣ್ಣ ಅವರು, ಕಳೆದ 25 ವರ್ಷಗಳಿಂದ ಬಿಸಿಯೂಟ ಯೋಜನೆಯಡಿ ಸರ್ಕಾರಿ ಮತ್ತು ಸರ್ಕಾರೇತರ ಶಾಲೆಗಳಲ್ಲಿ ನಿಯಮದ ಪ್ರಕಾರ ಅಡುಗೆ ತಯಾರಿಸಿ ಮಕ್ಕಳಿಗೆ ಉಣಬಡಿಸುತ್ತ ಬರಲಾಗುತ್ತಿದೆ. ಆರಂಭದಲ್ಲಿ 300 ರೂಪಾಯಿ ಇದ್ದ ಗೌರವಧನ ಈಗ 4,700 ರೂಪಾಯಿಗಳಿಗೆ ತಲುಪಿದ್ದರೂ, ಪ್ರಸ್ತುತ ದಿನಗಳ ಬೆಲೆ ಏರಿಕೆಗೆ ಈ ವೇತನ ಯಾವುದಕ್ಕೂ ಸಾಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕಾಂಗ್ರೆಸ್ ನಾಯಕರು ಚುನಾವಣೆ ಸಂದರ್ಭದಲ್ಲಿ 6ನೇ ಗ್ಯಾರಂಟಿಯಾಗಿ 18,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.

ಪ್ರಸ್ತುತ ಶಾಲೆಗಳಲ್ಲಿ ಮಕ್ಕಳ ಹಾಜರಾತಿಗಿಂತ ಕಡಿಮೆ ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳು ಪೂರೈಕೆಯಾಗುತ್ತಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಅಡುಗೆ ತಯಾರಿಸುವ ಸಂದರ್ಭದಲ್ಲಿ ಅಗ್ನಿ ಅವಘಡ ಅಥವಾ ಅಪಘಾತ ಸಂಭವಿಸಿ ಮೃತಪಟ್ಟರೆ ಅಥವಾ ಗಾಯಗೊಂಡರೆ 10 ಲಕ್ಷ ರೂಪಾಯಿ ಪರಿಹಾರ ಹಾಗೂ ಅವರ ಕುಟುಂಬದ ಸದಸ್ಯರೊಬ್ಬರಿಗೆ ಕೆಲಸ ನೀಡಬೇಕು ಎಂದು ಅವರು ಒತ್ತಾಯಿಸಿದರು. ಈ ಪ್ರತಿಭಟನಾ ಮನವಿ ಸಲ್ಲಿಕೆಯ ಸಂದರ್ಭದಲ್ಲಿ ಫೆಡರೇಷನ್ ತಾಲೂಕು ಸಮಿತಿ ಅಧ್ಯಕ್ಷೆ ಜಿ.ಸುಜಾತ, ಉಪಾಧ್ಯಕ್ಷರಾದ ಎಚ್.ತಿಪ್ಪಮ್ಮ, ಕೆ.ರಾಧಮ್ಮ, ಕೆ.ನಾಗಮ್ಮ, ಪ್ರಧಾನ ಕಾರ್ಯದರ್ಶಿ ಜಿ.ಉಷಾರಾಣಿ, ಸಹ ಕಾರ್ಯದರ್ಶಿಗಳಾದ ಜಯಮ್ಮ, ಸಾಕಮ್ಮ, ಎ.ಗೌರಮ್ಮ, ಅಂಜಿನಮ್ಮ, ಕರಿ ಬಸಮ್ಮ, ವನಜಾಕ್ಷಿ, ರಾಜೇಶ್ವರಿ, ಉಮಾದೇವಿ, ಲೋಲಾಕ್ಷಿ, ಕೊತ್ಲಮ್ಮ, ಲಕ್ಷ್ಮೀ, ಶಾರದಮ್ಮ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ