ಬೆಂಗಳೂರು : ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ಅವರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ರಾಜ್ಯ ಸರ್ಕಾರವು ಪ್ರತ್ಯೇಕವಾಗಿ 'ಪ್ರಜಾಸೇವೆ' ಇಲಾಖೆಯನ್ನು ರಚಿಸಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹೊಸ ಇಲಾಖೆಯಲ್ಲಿ ಸಚಿವರು ಹಾಗೂ ಹಿರಿಯ ಅಧಿಕಾರಿಗಳು ಕಾರ್ಯನಿರ್ವಹಿಸಲಿದ್ದು, ಇದು ಕೇವಲ ಪತ್ರ ವ್ಯವಹಾರ ನಡೆಸುವ ಇಲಾಖೆಯಾಗದೆ ಸಾರ್ವಜನಿಕರಿಗೆ ನೇರವಾಗಿ ನ್ಯಾಯ ಒದಗಿಸುವ ಕೆಲಸ ಮಾಡಲಿದೆ ಎಂದರು. ರಾಜ್ಯದ ಎಲ್ಲಾ 224 ಕ್ಷೇತ್ರಗಳಲ್ಲೂ ಸಚಿವರು ಹಾಗೂ ಶಾಸಕರು ವಾರಕ್ಕೊಮ್ಮೆ ಕಡ್ಡಾಯವಾಗಿ ಜಂಟಿ 'ಸ್ಪಂದನಾ ಸಭೆ' ನಡೆಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿರ್ಧಾರವನ್ನು ಸಂಪುಟದಲ್ಲಿ ಕೈಗೊಳ್ಳಲಾಗಿದೆ. ಇದೇ ವೇಳೆ, ಕಟ್ಟಡಗಳ ಒಸಿ ಮತ್ತು ಸಿಸಿ ವಿಚಾರವನ್ನು ಸರಳೀಕರಣಗೊಳಿಸಲಾಗಿದ್ದು, ತಾತ್ಕಾಲಿಕ ವಿದ್ಯುತ್ ಸಂಪರ್ಕ ಹೊಂದಿರುವ ಪೂರ್ಣಗೊಂಡ ಕಟ್ಟಡಗಳ ಮಾಲೀಕರಿಗೆ ಅರ್ಜಿ ಸಲ್ಲಿಸಲು ಫೋಟೊ ಮತ್ತು ಜಿಪಿಎಸ್ ಕಡ್ಡಾಯದೊಂದಿಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ದೇವನಹಳ್ಳಿಯಲ್ಲಿ ಸ್ವಯಂಪ್ರೇರಿತರಾಗಿ ಜಮೀನು ನೀಡುವ ರೈತರಿಗೆ ಮತ್ತೊಮ್ಮೆ ಅವಧಿ ವಿಸ್ತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಪ್ರಕಟಿಸಿದರು.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲು ನವದೆಹಲಿಯಲ್ಲಿ 91 ಕೋಟಿ ರೂ. ವೆಚ್ಚದಲ್ಲಿ 'ಕರ್ನಾಟಕ ಭವನ-4' ನಿರ್ಮಿಸಲು ಸಂಪುಟ ಸಮ್ಮತಿಸಿದೆ. ಇದರಲ್ಲಿ ಶೇ. 50 ರಷ್ಟು ಸೀಟುಗಳನ್ನು ಎಸ್‌ಸಿ/ಎಸ್‌ಟಿ ಹಾಗೂ ಉಳಿದ ಶೇ. 50 ರಷ್ಟು ಸೀಟುಗಳನ್ನು ಇತರ ವರ್ಗದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುವುದು. ಜೊತೆಗೆ, ದೆಹಲಿಯಲ್ಲಿರುವ ಕರ್ನಾಟಕ ಸ್ಥಾನಿಕ ಆಯುಕ್ತರ ವ್ಯವಸ್ಥೆಯನ್ನು ಪುನರ್ರಚಿಸಲು ಹಾಗೂ ಕೇಂದ್ರದ ಅನುದಾನಗಳನ್ನು ಪರಿಣಾಮಕಾರಿಯಾಗಿ ಪಡೆಯಲು ದೆಹಲಿಯಲ್ಲಿರುವ ಕರ್ನಾಟಕ ಕೇಡರ್‌ನ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ. ಸಾರಿಗೆ ಸಂಸ್ಥೆಗಳ ಬಸ್ ಪ್ರಯಾಣ ದರ ಹೆಚ್ಚಳದ ಪ್ರಸ್ತಾವನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಸಾರ್ವಜನಿಕ ಹಿತರಕ್ಷಣೆ ಹಾಗೂ ಸಾರಿಗೆ ಸಂಸ್ಥೆಗಳ ಉಳಿವು ಎರಡನ್ನೂ ಗಮನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು. ಬಿಡದಿ ಟೌನ್‌ಶಿಪ್ ಯೋಜನೆ ಕುರಿತು ಮಾತನಾಡಿದ ಅವರು, ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಆರಂಭಿಸಿದ್ದ ಯೋಜನೆಯನ್ನು ನಾವು ಮುಂದುವರಿಸುತ್ತಿದ್ದೇವೆಯೇ ಹೊರತು ಯಾರಿಂದಲೂ ಬಲವಂತವಾಗಿ ಭೂಸ್ವಾಧೀನ ಮಾಡುತ್ತಿಲ್ಲ ಮತ್ತು ರೈತರಿಗೆ ಗರಿಷ್ಠ ಪರಿಹಾರ ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.