image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಬಿಡದಿ ಟೌನ್‌ಶಿಪ್‌ಗೆ ತೀವ್ರ ವಿರೋಧ: ಜಟಾಪಟಿ ನಡುವೆಯೇ ರೈತರಿಗೆ ಬಂಪರ್ ಪರಿಹಾರ ವಿತರಣೆ ಚಾಲನೆ

ಬಿಡದಿ ಟೌನ್‌ಶಿಪ್‌ಗೆ ತೀವ್ರ ವಿರೋಧ: ಜಟಾಪಟಿ ನಡುವೆಯೇ ರೈತರಿಗೆ ಬಂಪರ್ ಪರಿಹಾರ ವಿತರಣೆ ಚಾಲನೆ

ಬೆಂಗಳೂರು : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಬಿಡದಿ ಟೌನ್‌ಶಿಪ್ (ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ) ನಿರ್ಮಾಣಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆ ತೀವ್ರಗೊಂಡಿದ್ದು, ಇದರ ಸುತ್ತಲಿನ ರಾಜಕೀಯ ಹಾಗೂ ಸಾಮಾಜಿಕ ಜಟಾಪಟಿ ತಾರಕಕ್ಕೇರಿದೆ. ಯೋಜನೆಯಡಿ ಸುಮಾರು 516 ಎಕರೆಗೂ ಹೆಚ್ಚು ವಿಸ್ತೀರ್ಣದ ಭೂಸ್ವಾಧೀನವನ್ನು ವಿರೋಧಿಸಿ ಭಾನುವಾರ ಜೆಡಿಎಸ್ ಹಾಗೂ ವಿವಿಧ ರೈತ ಸಂಘಟನೆಗಳು ಬೃಹತ್ ಪಾದಯಾತ್ರೆ ಮತ್ತು ಪ್ರತಿಭಟನೆ ಹಮ್ಮಿಕೊಂಡಿವೆ. ಬಿಡದಿ ಟೌನ್‌ಶಿಪ್ ಹೆಸರಿನಲ್ಲಿ ಬರೋಬ್ಬರಿ 33,562 ಕೋಟಿ ರೂಪಾಯಿಗಳ ರಿಯಲ್ ಎಸ್ಟೇಟ್‌ ದಂಧೆ ನಡೆಯುತ್ತಿದೆ ಎಂದು ಪ್ರತಿಪಕ್ಷಗಳು ಗಂಭೀರವಾಗಿ ಆರೋಪಿಸಿವೆ. ಪ್ರತಿಪಕ್ಷಗಳು ಹಾಗೂ ರೈತರ ತೀವ್ರ ಪ್ರತಿಭಟನೆ ಮತ್ತು ವಿರೋಧದ ನಡುವೆಯೂ ಧೃತಿಗೆಡದ ರಾಜ್ಯ ಸರ್ಕಾರವು ಯೋಜನೆಯ ಅನುಷ್ಠಾನಕ್ಕಾಗಿ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಭೂಮಿ ನೀಡಲು ಸ್ವಯಂಪ್ರೇರಿತರಾಗಿ ಮುಂದೆ ಬಂದಿರುವ ರೈತರಿಗೆ ಪರಿಹಾರದ ಚೆಕ್ ವಿತರಿಸುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ರಾಮನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಜಿಬಿಡಿಎ) ಕಚೇರಿಯಲ್ಲಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರ ನೇತೃತ್ವದಲ್ಲಿ ರೈತರಿಗೆ ಸಾಂಕೇತಿಕವಾಗಿ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು. ಯೋಜನೆಗಾಗಿ ಗುರುತಿಸಲಾಗಿರುವ ಕೆಂಪಯ್ಯನಪಾಳ್ಯ, ವಡೇರಹಳ್ಳಿ ಹಾಗೂ ಮುಂಡಹಳ್ಳಿ ಈ ಮೂರು ಕಂದಾಯ ಗ್ರಾಮಗಳ ಪೈಕಿ ಈವರೆಗೆ ಒಟ್ಟು 270 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯದ 10 ರೈತರಿಗೆ ಪರಿಹಾರ ವಿತರಿಸಲಾಯಿತು. ಸರ್ಕಾರವು ಕೆಂಪಯ್ಯನಪಾಳ್ಯದಲ್ಲಿ ಪ್ರತಿ 1 ಎಕರೆ ಜಮೀನಿಗೆ ಗರಿಷ್ಠ 2,07,30,000 ರೂಪಾಯಿಗಳ ಬಂಪರ್ ಪರಿಹಾರವನ್ನು ನಿಗದಿಪಡಿಸಿದೆ.

ಇದೇ ವೇಳೆ ಕೆಂಪಯ್ಯನಪಾಳ್ಯದ ರೈತ ಮಹಿಳೆ ಜಾನಕಮ್ಮ ಎಂಬುವವರು ಸರ್ಕಾರಕ್ಕೆ ತಮ್ಮ 1 ಎಕರೆ ಜಮೀನನ್ನು ಬಿಟ್ಟುಕೊಟ್ಟಿದ್ದು, ಈ ಪೈಕಿ 18 ಗುಂಟೆಗೆ 1,00,52,386 ರೂಪಾಯಿಗಳ ನಗದು ಪರಿಹಾರ ಪಡೆದಿದ್ದಾರೆ. ಇನ್ನುಳಿದ 22 ಗುಂಟೆ ಜಮೀನಿಗೆ ಪ್ರತಿಯಾಗಿ ಅಭಿವೃದ್ಧಿಪಡಿಸಿದ ನಿವೇಶನ (ಸೈಟ್) ಪಡೆಯಲು ಒಪ್ಪಂದ ಮಾಡಿಕೊಂಡಿದ್ದಾರೆ. ಪರಿಹಾರದ ಚೆಕ್ ಸ್ವೀಕರಿಸಿದ ಅವರು ಸರ್ಕಾರದ ಈ ಕ್ರಮಕ್ಕೆ ತೃಪ್ತಿ ವ್ಯಕ್ತಪಡಿಸಿ ಸಂತಸ ಹಂಚಿಕೊಂಡಿದ್ದಾರೆ. ಮತ್ತೊಬ್ಬ ರೈತ ಗಿರೀಶ್ ಅವರು ತಮಗೆ ಸೇರಿದ 6 ಗುಂಟೆ ಜಮೀನನ್ನು ಬಿಟ್ಟುಕೊಟ್ಟಿದ್ದು, ಅವರಿಗೆ 36,47,083 ರೂಪಾಯಿ ಪರಿಹಾರ ಸಿಕ್ಕಿದೆ. ವಿಶೇಷವೆಂದರೆ ಸರ್ಕಾರವು ಕೇವಲ ಭೂಮಿಗೆ ಮಾತ್ರವಲ್ಲದೆ, ಜಮೀನಿನಲ್ಲಿರುವ ವಿವಿಧ ವಾಣಿಜ್ಯ ಬೆಳೆಗಳು ಹಾಗೂ ಮರಗಳಿಗೂ ಪ್ರತ್ಯೇಕವಾಗಿ ಆಕರ್ಷಕ ಪರಿಹಾರ ದರವನ್ನು ನಿಗದಿಪಡಿಸಿದೆ. ಅದರಂತೆ ಪ್ರತಿ ತೆಂಗಿನ ಮರಕ್ಕೆ 40,446 ರೂಪಾಯಿ, ಮಾವಿನ ಮರಕ್ಕೆ 62,000 ರೂಪಾಯಿ ಹಾಗೂ ಅಡಕೆ ಮರಕ್ಕೆ 7,440 ರೂಪಾಯಿ ಪರಿಹಾರ ನೀಡಲಾಗುತ್ತಿದೆ. ವಾಣಿಜ್ಯ ಬೆಳೆಗಳಾದ ಬಾಳೆಗೆ ಪ್ರತಿ ಎಕರೆಗೆ 10.86 ಲಕ್ಷ ರೂಪಾಯಿ, ರೇಷ್ಮೆಗೆ ಪ್ರತಿ ಎಕರೆಗೆ 14 ಲಕ್ಷ ರೂಪಾಯಿ ಹಾಗೂ ಪಪ್ಪಾಯ ಬೆಳೆಗೆ ಪ್ರತಿ ಎಕರೆಗೆ 12 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಇನ್ನು ಹಲಸು ಬೆಳೆಗೆ ಪ್ರತಿ ಎಕರೆಗೆ 42,750 ರೂಪಾಯಿ, ಹುಣಸೆಗೆ ಪ್ರತಿ ಎಕರೆಗೆ 53,310 ರೂಪಾಯಿ ಹಾಗೂ ಸಪೋಟ ಬೆಳೆಗೆ ಪ್ರತಿ ಎಕರೆಗೆ 43,166 ರೂಪಾಯಿ ಪರಿಹಾರ ನಿಗದಿಯಾಗಿದೆ.

ರೈತರಿಗೆ ಪರಿಹಾರ ನೀಡಲು ಸರ್ಕಾರದ ಖಜಾನೆಯಲ್ಲಿ ಹಣವೇ ಇಲ್ಲ ಎಂದು ಟೀಕಿಸಿದ್ದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ರೈತರಿಗೆ ಸೂಕ್ತ ಪರಿಹಾರ ಕೊಡಿಸದಿದ್ದರೆ ತಾವು ರಾಜಕೀಯ ನಿವೃತ್ತಿ ಪಡೆಯುವುದಾಗಿ ಅವರು ಪ್ರತಿಪಕ್ಷಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಒಟ್ಟಾರೆಯಾಗಿ, ರಾಜಕೀಯ ಕೆಸರೆರಚಾಟ ಹಾಗೂ ಪ್ರತಿಭಟನೆಗಳ ಬಿಸಿಯ ನಡುವೆಯೂ ರೈತರಿಗೆ ಕೋಟ್ಯಂತರ ರೂಪಾಯಿ ಪರಿಹಾರದ ಹಣ ತಲುಪಿಸುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಈ ಬೃಹತ್ ಯೋಜನೆಯನ್ನು ಇನ್ನುಳಿದ ರೈತರು ಒಪ್ಪಿಕೊಳ್ಳುತ್ತಾರಾ ಅಥವಾ ಪ್ರತಿಪಕ್ಷಗಳ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Category
ಕರಾವಳಿ ತರಂಗಿಣಿ