image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಹಾವೇರಿ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಸದ್ದು: ಅನ್ನದಾತರಲ್ಲಿ ತೀವ್ರ ಆತಂಕ

ಹಾವೇರಿ ಗಣಜೂರಿನಲ್ಲಿ ಚಿನ್ನದ ಗಣಿಗಾರಿಕೆ ಸದ್ದು: ಅನ್ನದಾತರಲ್ಲಿ ತೀವ್ರ ಆತಂಕ

ಹಾವೇರಿ : ದಿನದಿಂದ ದಿನಕ್ಕೆ ಗಗನಮುಖಿಯಾಗುತ್ತಿರುವ ಚಿನ್ನದ ದರ ಜನಸಾಮಾನ್ಯರ ಕೈಗೆಟುಕದ ನಕ್ಷತ್ರವಾಗಿದೆ. ಈ ನಡುವೆ, ಹಾವೇರಿ ಜಿಲ್ಲೆಯ ಗಣಜೂರು ಗ್ರಾಮದಲ್ಲಿ ಚಿನ್ನದ ಗಣಿಗಾರಿಕೆ ಆರಂಭವಾಗುವ ಕುರಿತು ಚರ್ಚೆಗಳು ಮತ್ತೆ ಮುನ್ನೆಲೆಗೆ ಬಂದಿವೆ. ಮಹಾರಾಷ್ಟ್ರದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್‌ ಇತ್ತೀಚೆಗೆ ನೀಡಿದ ಮಹತ್ವದ ಆದೇಶವು ಗಣಜೂರಿನಲ್ಲಿಯೂ ಗಣಿಗಾರಿಕೆ ಪ್ರಕ್ರಿಯೆ ಪುನಾರಂಭಗೊಳ್ಳಲು ಪೂರಕ ವಾತಾವರಣ ಸೃಷ್ಟಿಸಿದೆ. ಇದು ಸ್ಥಳೀಯ ರೈತರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಕಲ್ಯಾಣ ಚಾಲುಕ್ಯರ ಕಾಲದಲ್ಲಿ 'ಚಿನ್ನೂರು' ಎಂದೇ ಪ್ರಸಿದ್ಧಿಯಾಗಿದ್ದ ಗಣಜೂರಿನಲ್ಲಿ ಚಿನ್ನದ ಇತಿಹಾಸವೇ ಇದೆ. 2015ರಲ್ಲಿ 'ಡೆಕ್ಕನ್ ಗೋಲ್ಡ್ ಮೈನ್ಸ್' ಕಂಪನಿಯು ಇಲ್ಲಿ ಚಿನ್ನದ ನಿಕ್ಷೇಪಗಳ ಪತ್ತೆಗಾಗಿ ಪ್ರಾಥಮಿಕ ಪರವಾನಗಿ ಪಡೆದು ಸಂಶೋಧನೆ ನಡೆಸಿತ್ತು. ತನ್ನ ಅಂಗಸಂಸ್ಥೆಯಾದ 'ಡೆಕ್ಕನ್ ಎಕ್ಸ್‌ಪ್ಲೋರೇಷನ್ ಸರ್ವೀಸಸ್' ಮೂಲಕ ಸುಮಾರು 72 ಎಕರೆ ಜಾಗದಲ್ಲಿ 150ಕ್ಕೂ ಹೆಚ್ಚು ಕೊಳವೆಬಾವಿಗಳನ್ನು ಕೊರೆದು, ಕಲ್ಲಿನ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಈ ವೇಳೆ ಇಲ್ಲಿನ ಕಲ್ಲುಗಳಲ್ಲಿ ಯಥೇಚ್ಛವಾಗಿ ಚಿನ್ನದ ಅಂಶ ಇರುವುದು ಸಾಬೀತಾಗಿತ್ತು. ರಾಯಚೂರಿನ ಹಟ್ಟಿ ಹಾಗೂ ಕೆಜಿಎಫ್‌ಗಿಂತಲೂ ಹೆಚ್ಚಿನ ಚಿನ್ನದ ನಿಕ್ಷೇಪ ಇಲ್ಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಇದಕ್ಕಾಗಿ ಕಂಪನಿಯು ರೈತರ ಜಮೀನುಗಳನ್ನು ಲೀಸ್ ಪಡೆದು ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸರ್ಕಾರಕ್ಕೆ ವರದಿಯನ್ನೂ ಸಲ್ಲಿಸಿತ್ತು.

ಪೂರ್ಣ ಪ್ರಮಾಣದ ಗಣಿಗಾರಿಕೆಗೆ ಅನುಮತಿ ಕೋರಿ ಡೆಕ್ಕನ್ ಗೋಲ್ಡ್ ಮೈನ್ಸ್ ಕಂಪನಿ ಈ ಹಿಂದೆ ಸಲ್ಲಿಸಿದ್ದ ಅರ್ಜಿಗಳು ಕೆಲವು ತಾಂತ್ರಿಕ ಕಾನೂನುಗಳಿಂದಾಗಿ ತಿರಸ್ಕೃತಗೊಂಡಿದ್ದವು. ಆದರೆ, ಇತ್ತೀಚೆಗೆ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ತೀರ್ಪು, 2015ರ ಕಾಯ್ದೆ ತಿದ್ದುಪಡಿಗೂ ಮುನ್ನ ಅನುಮತಿ ಪಡೆದ ಕಂಪನಿಗಳ ಹಕ್ಕನ್ನು ಎತ್ತಿಹಿಡಿದಿದೆ. ಈ ಆದೇಶವು ಗಣಜೂರು ಯೋಜನೆಗೂ ಅನ್ವಯವಾಗುವ ಸಾಧ್ಯತೆಗಳಿದ್ದು, ಶೀಘ್ರದಲ್ಲೇ 72 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಆರಂಭವಾಗುವ ಲಕ್ಷಣಗಳು ದಟ್ಟವಾಗಿವೆ. ಅಲ್ಲದೆ, ಗಣಿಗಾರಿಕೆಯ ಇತರ ಪೂರಕ ಕೆಲಸಗಳಿಗಾಗಿ ಸುತ್ತಮುತ್ತಲಿನ ಸುಮಾರು 400 ಎಕರೆ ಪ್ರದೇಶ ಬಳಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಸುದ್ದಿ ಗಣಜೂರು ಮತ್ತು ನಾಗೇಂದ್ರನಮಟ್ಟಿ ಭಾಗದ ರೈತರ ನಿದ್ದೆಗೆಡಿಸಿದೆ. ಈ ಭಾಗದಲ್ಲಿ ಮೆಕ್ಕೆಜೋಳ, ಶೇಂಗಾ, ಸೋಯಾಬಿನ್, ಕಬ್ಬು ಮತ್ತು ರೇಷ್ಮೆಯಂತಹ ಉತ್ತಮ ಇಳುವರಿ ಕೊಡುವ ಫಲವತ್ತಾದ ಭೂಮಿಯಿದೆ. ಈಗಾಗಲೇ ಗಣಜೂರು ಪಕ್ಕದ 600 ಎಕರೆ ಜಾಗ ಕೈಗಾರಿಕಾ ಕಾರಿಡಾರ್‌ಗೆ ಕೈಬಿಟ್ಟು ಹೋಗಿದ್ದು, ಈಗ ಚಿನ್ನದ ಗಣಿಗಾಗಿ ಮತ್ತೆ 400 ಎಕರೆ ಕಳೆದುಕೊಂಡರೆ ರೈತರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಗ್ರಾಮದ ರೈತರಾದ ದುದ್ದುಸಾಬ್ ಮಾತನಾಡಿ, "2015ರಲ್ಲಿ ಕಂಪನಿಯವರು ಬಂದು ಸಂಶೋಧನೆ ನಡೆಸಿದಾಗ ರೈತರಿಗೆ ಲಾವಣಿ ಹಣ ನೀಡಿ, ಸ್ಥಳೀಯ 50-60 ಜನರಿಗೆ ಕೆಲಸ ಕೊಟ್ಟಿದ್ದರು. ಆದರೆ ಈಗ ಗಣಿಗಾರಿಕೆ ಖಾತ್ರಿಯಾಗುತ್ತಿದ್ದಂತೆ ನಮ್ಮ ಭೂಮಿ ನಮಗೆ ಸಿಗದಂತಾಗುವ ಭೀತಿ ಶುರುವಾಗಿದೆ. ನಮಗೆ ಇರುವುದೇ ಒಂದು ಅಥವಾ ಎರಡು ಎಕರೆ ಜಮೀನು. ಒಮ್ಮೆ ಆಸ್ತಿ ಮಾರಿದರೆ ಮರಳಿ ಪಡೆಯುವುದು ಅಸಾಧ್ಯ. ಭೂಮಿ ಕಳೆದುಕೊಂಡರೆ ನಾವು ಎಲ್ಲಿಗೆ ಹೋಗಬೇಕು? ನಮಗೆ ದುಡಿದು ತಿನ್ನಲು ಭೂಮಿಯೇ ಇಲ್ಲದಂತಾಗುತ್ತದೆ" ಎಂದು ಅಳಲು ತೋಡಿಕೊಂಡಿದ್ದಾರೆ. ಚಿನ್ನದ ಗಣಿಗಾರಿಕೆಗೆ ಅಧಿಕೃತವಾಗಿ ಹಸಿರು ನಿಶಾನೆ ಸಿಕ್ಕರೆ ರೈತರಿಗೆ ಭೂಸ್ವಾಧೀನದ ಕಿರುಕುಳ ಪ್ರಾರಂಭವಾಗಲಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಡೆಕ್ಕನ್ ಮೈನಿಂಗ್ ಕಂಪನಿ ಕಾರ್ಯಾಚರಣೆಗೆ ಸಜ್ಜಾಗುತ್ತಿದ್ದರೆ, ಇತ್ತ ಗಣಜೂರಿನ ಅನ್ನದಾತರು ತಮ್ಮ ಅಸ್ತಿತ್ವ ಮತ್ತು ಭೂಮಿಯ ರಕ್ಷಣೆಗಾಗಿ ಮುಂದಿನ ಹೋರಾಟದ ಹಾದಿ ತುಳಿಯಲು ಸಿದ್ಧತೆ ನಡೆಸುತ್ತಿದ್ದಾರೆ. ನ್ಯಾಯಾಲಯದ ಅಂತಿಮ ತೀರ್ಪು ಮತ್ತು ಸರ್ಕಾರದ ಮುಂದಿನ ಕ್ರಮಗಳ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದೆ.

Category
ಕರಾವಳಿ ತರಂಗಿಣಿ