ಬೆಂಗಳೂರು : ದೇಶದಾದ್ಯಂತ ಹೆಚ್ಚಿನ ಭಾಗಗಳಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ಆತಂಕ ಸೃಷ್ಟಿಯಾದ ಬೆನ್ನಲ್ಲೇ, ನೈಋತ್ಯ ಮಾನ್ಸೂನ್ ಪುನರುಜ್ಜೀವನದ ಆಶಾದಾಯಕ ಲಕ್ಷಣಗಳು ಗೋಚರಿಸಿವೆ. ಸಂಪೂರ್ಣವಾಗಿ ಸ್ಥಗಿತಗೊಂಡಂತಿದ್ದ ಮಾನ್ಸೂನ್ ಚಟುವಟಿಕೆಗಳು ಅಂತಿಮವಾಗಿ ಚುರುಕುಕೊಳ್ಳುತ್ತಿದ್ದು, ದೇಶದ ವಿಶಾಲ ಪ್ರದೇಶಗಳಲ್ಲಿ ಮಳೆ ಪುನರಾರಂಭಗೊಳ್ಳಲು ಸಿದ್ಧತೆ ನಡೆಸುತ್ತಿದೆ ಎಂದು ಭಾರತ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಹವಾಮಾನ ಮುನ್ಸೂಚನೆಗಳ ಪ್ರಕಾರ, ಮಧ್ಯ ಭಾರತದ ಮೇಲೆ ಮಳೆಗಾಲದ ಮೋಡಗಳು ಕ್ರಮೇಣ ಬಲಗೊಳ್ಳುತ್ತಿದ್ದು, ವ್ಯಾಪಕ ಮಾನ್ಸೂನ್ ಮಳೆಗಾಗಿ ಕಾಯುತ್ತಿರುವ ಕೋಟ್ಯಂತರ ಜನರಿಗೆ ಮತ್ತು ಕೃಷಿ ವಲಯಕ್ಕೆ ಇದು ಅಗತ್ಯ ಪರಿಹಾರವನ್ನು ನೀಡುವ ನಿರೀಕ್ಷೆ ಮೂಡಿಸಿದೆ. ಹವಾಮಾನ ಇಲಾಖೆಯ ವರದಿಯ ಅನ್ವಯ, ಜೂನ್ 19 ರಿಂದ ಜೂನ್ 25 ರ ಅವಧಿಯಲ್ಲಿ ಛತ್ತೀಸ್‌ಗಢ, ಪೂರ್ವ ಮತ್ತು ಪಶ್ಚಿಮ ಮಧ್ಯಪ್ರದೇಶ ಹಾಗೂ ವಿದರ್ಭದ ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಪ್ರಸ್ತುತ ನಡೆಯುತ್ತಿರುವ ಮಾನ್ಸೂನ್ ನಿಧಾನಗತಿಯ ಚಲನೆಯಿಂದಾಗಿ ತೀವ್ರವಾಗಿ ತತ್ತರಿಸಿದ್ದ ಮಧ್ಯ ಭಾರತದ ಪ್ರದೇಶಗಳಿಗೆ ಈ ಹೊಸ ಬೆಳವಣಿಗೆಯು ದೊಡ್ಡ ಬದಲಾವಣೆಯ ಸೂಚನೆಯಾಗಿದೆ. ಅಧಿಕೃತವಾಗಿ ಮಾನ್ಸೂನ್ ಆಗಮನವಾಗಿದ್ದರೂ ಸಹ ಮಧ್ಯಪ್ರದೇಶ, ವಿದರ್ಭ ಮತ್ತು ಛತ್ತೀಸ್‌ಗಢದ ಬಹುತೇಕ ಭಾಗಗಳಲ್ಲಿ ಹಗಲಿನಲ್ಲಿ ಸ್ಪಷ್ಟ ಆಕಾಶ ಮತ್ತು ತೀವ್ರ ಶಾಖದ ವಾತಾವರಣವೇ ಮುಂದುವರಿದಿತ್ತು. ಆದರೆ ಈಗ ಮೋಡಗಳು ಕಾಣಿಸಿಕೊಳ್ಳುತ್ತಿರುವುದು ಗಮನಾರ್ಹ ಬದಲಾವಣೆಯಾಗಿದೆ ಎಂದು ಹವಾಮಾನಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಂಬರುವ ವಾರದಲ್ಲಿ ದಕ್ಷಿಣದ ರಾಜ್ಯಗಳಲ್ಲಿ ದೇಶದಲ್ಲೇ ಅತ್ಯಂತ ಹೆಚ್ಚು ಮಳೆ ಬೀಳುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ. ಜೂನ್ 19 ರಿಂದ ಜೂನ್ 21 ರವರೆಗೆ ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್‌ನಲ್ಲಿ ಭಾರಿ ಮಳೆಯಾಗಲಿದ್ದು, ಕೇರಳದಲ್ಲಿ ಜೂನ್ 19 ರಿಂದ ಜೂನ್ 23 ರ ನಡುವೆ ವರುಣನ ಆರ್ಭಟ ಜೋರಾಗಿರಲಿದೆ. ಇನ್ನು ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 21 ರಿಂದ ಜೂನ್ 25 ರವರೆಗೆ ಅತ್ಯಂತ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಜೂನ್ 22 ಮತ್ತು 23 ರಂದು ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಇದರೊಂದಿಗೆ ಲಕ್ಷದ್ವೀಪದಲ್ಲೂ ಜೂನ್ 21 ರಂದು ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸದ್ಯ ಮುಂಗಾರು ಮಳೆ ದುರ್ಬಲಗೊಂಡು ಕಂಗಾಲಾಗಿರುವ ದೇಶದ ರೈತ ಸಮುದಾಯ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಬಿತ್ತನೆ ಕಾರ್ಯಗಳಿಗೆ ಮಳೆಯಿಲ್ಲದೆ ಕೃಷಿ ಚಟುವಟಿಕೆಗಳು ಕುಂಠಿತಗೊಂಡಿದ್ದು, ಮುಂಬರುವ ದಿನಗಳಲ್ಲಿ ಸಕಾಲಕ್ಕೆ ಮಳೆಯಾಗದೆ ಹೋದಲ್ಲಿ ಭತ್ತ ಸೇರಿದಂತೆ ಪ್ರಮುಖ ಆಹಾರ ಧಾನ್ಯಗಳ ಕೃಷಿ ಬೆಳೆಗಳ ಮೇಲೆ ಭಾರೀ ದುಷ್ಪರಿಣಾಮ ಬೀರುವ ಸಾಧ್ಯತೆಗಳಿವೆ. ಸದ್ಯ ಹವಾಮಾನ ಇಲಾಖೆ ನೀಡಿರುವ ಈ ಪುನರುಜ್ಜೀವನದ ಮುನ್ಸೂಚನೆಯು ರೈತರಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.