ಬೆಂಗಳೂರು : ಕಾರ್ಮಿಕ ಮತ್ತು ಸಿವಿಲ್ ಸ್ವರೂಪದ ಪ್ರಕರಣಗಳಿಗೆ ಕ್ರಿಮಿನಲ್ ರೂಪ ನೀಡಿ, ಅದರಲ್ಲೂ ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಭದ್ರಾವತಿಯ 'ಮಾಲ್ನಾಡ್ ಅಲೋಯ್ಸ್ ಕಾಸ್ಟಿಂಗ್ಸ್ ಪ್ರೈವೇಟ್ ಲಿಮಿಟೆಡ್' ಕಂಪನಿಯ ವ್ಯವಸ್ಥಾಪಕ ಮಧುಕರ್ ಜೋಯಿಸ್ ಸೇರಿದಂತೆ ಐವರ ವಿರುದ್ಧ ದಾಖಲಾಗಿದ್ದ ಎಫ್‌ಐಆರ್ ಮತ್ತು ಕಾನೂನು ಪ್ರಕ್ರಿಯೆಗಳನ್ನು ರದ್ದುಗೊಳಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.
ಪ್ರಕರಣದ ಹಿನ್ನೆಲೆಯ ಪ್ರಕಾರ, ಕಂಪನಿಯಲ್ಲಿ 18 ವರ್ಷಗಳಿಂದ ಪ್ರೊಡಕ್ಷನ್ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ ರವಿ ಎಂಬ ಉದ್ಯೋಗಿಯ ನಿರ್ಲಕ್ಷ್ಯದಿಂದ ಸಂಸ್ಥೆಗೆ ನಷ್ಟ ಉಂಟಾಗಿತ್ತು. ಈ ಸಂಬಂಧ ಕಂಪನಿಯು 2024ರ ಡಿಸೆಂಬರ್‌ನಲ್ಲಿ ಶೋಕಾಸ್ ನೋಟಿಸ್ ಜಾರಿ ಮಾಡಿ, ಆಂತರಿಕ ವಿಚಾರಣೆಗೆ ಆದೇಶಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಉದ್ಯೋಗಿ ಕೈಗಾರಿಕಾ ನ್ಯಾಯಾಧೀಕರಣದ ಮೆಟ್ಟಿಲೇರಿದ್ದರೂ ಅಲ್ಲಿ ಯಾವುದೇ ಏಕಪಕ್ಷೀಯ ಆದೇಶ ಸಿಕ್ಕಿರಲಿಲ್ಲ. ಇದರಿಂದ ಅಸಮಾಧಾನಗೊಂಡು, ಕಂಪನಿಯು ಕೈಗೊಂಡಿದ್ದ ಶಿಸ್ತು ಕ್ರಮಕ್ಕೆ ಪ್ರತೀಕಾರವಾಗಿ ಆಡಳಿತ ಮಂಡಳಿಯ ವಿರುದ್ಧ ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಸುಳ್ಳು ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ದೂರು ದಾಖಲಿಸಲಾಗಿತ್ತು ಎಂಬುದು ದಾಖಲೆಗಳ ಪರಿಶೀಲನೆಯಿಂದ ಸ್ಪಷ್ಟವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖಿಸಿದ ಹೈಕೋರ್ಟ್, ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಾಗಬೇಕಾದರೆ ನಿಂದನಾತ್ಮಕ ಘಟನೆಯು ಸಾರ್ವಜನಿಕರು ನೋಡುವ ಅಥವಾ ಇರುವ ಜಾಗದಲ್ಲಿ ನಡೆದಿರಬೇಕು. ಆದರೆ ಈ ಪ್ರಕರಣದಲ್ಲಿ ಆರೋಪಿಸಲಾದ ಘಟನೆಯು ಕಂಪನಿಯ ಒಳಗಿನ ನಾಲ್ಕು ಗೋಡೆಗಳ ಮಧ್ಯೆ ನಡೆದಿದ್ದು, ಅಲ್ಲಿ ಯಾವುದೇ ಸಾರ್ವಜನಿಕರು ಇರಲಿಲ್ಲ. ಆದ್ದರಿಂದ ಇದು ಕಾಯ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಸಿವಿಲ್ ಮತ್ತು ಸೇವಾ ವಿವಾದಗಳಿಗೆ ಕ್ರಿಮಿನಲ್ ಬಣ್ಣ ಬಳಿದು ವಿಶೇಷ ಕಾಯ್ದೆಗಳನ್ನು ದುರುಪಯೋಗ ಪಡಿಸಿಕೊಳ್ಳುವುದು ಕಾನೂನು ಪ್ರಕ್ರಿಯೆಯ ದುರ್ಬಳಕೆಯಾಗಲಿದ್ದು, ದೂರುದಾರರ ಆರೋಪಗಳಲ್ಲಿ ಯಾವುದೇ ಪ್ರಮುಖ ಅಂಶಗಳಿಲ್ಲದ ಕಾರಣ ಶಿವಮೊಗ್ಗದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿದ್ದ ಈ ಪ್ರಕರಣದ ವಿಚಾರಣಾ ಪ್ರಕ್ರಿಯೆಯನ್ನು ಹೈಕೋರ್ಟ್ ಸಂಪೂರ್ಣವಾಗಿ ರದ್ದುಗೊಳಿಸಿದೆ.