image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆರ್‌ಎಸ್‌ಎಸ್‌ ವಿರುದ್ಧದ ಪ್ರಶ್ನೆಗಳಿಗೆ ಸಂಘದ ನೂರು ವರ್ಷಗಳ ಪಯಣವೇ ಉತ್ತರ: ಸಿ.ಟಿ. ರವಿ

ಆರ್‌ಎಸ್‌ಎಸ್‌ ವಿರುದ್ಧದ ಪ್ರಶ್ನೆಗಳಿಗೆ ಸಂಘದ ನೂರು ವರ್ಷಗಳ ಪಯಣವೇ ಉತ್ತರ: ಸಿ.ಟಿ. ರವಿ

ಚಿಕಮಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ವಿರುದ್ಧ ಕೇಳಲಾಗುತ್ತಿರುವ ಪ್ರಶ್ನೆಗಳು ಹೊಸದೇನಲ್ಲ, ಸಂಘದ ನೂರು ವರ್ಷದ ಸುದೀರ್ಘ ಪಯಣವೇ ಆ ಎಲ್ಲ ಪ್ರಶ್ನೆಗಳಿಗೆ ಸೂಕ್ತ ಉತ್ತರವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ.ಟಿ. ರವಿ ತಿಳಿಸಿದ್ದಾರೆ. ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಕುರಿತು ಕಾಂಗ್ರೆಸ್ ನಾಯಕರು ಎತ್ತಿರುವ ಪ್ರಶ್ನೆಗಳಿಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು. ಸಂಘವು ಯಾವುದೇ ವ್ಯವಹಾರ ನಡೆಸುವ ಸಂಸ್ಥೆಯಲ್ಲ, ಲಾಭದಾಯಕ ಕಂಪನಿಯಲ್ಲ ಅಥವಾ ರಾಜಕೀಯ ಪಕ್ಷವೂ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಘದ ಸ್ವಯಂಸೇವಕರು ವರ್ಷಕ್ಕೊಮ್ಮೆ ನೀಡುವ ‘ಗುರುದಕ್ಷಿಣೆ’ ಸಮರ್ಪಣೆಯ ಮೂಲಕವೇ ಸಂಘದ ಚಟುವಟಿಕೆಗಳು ನಡೆಯುತ್ತವೆ ಮತ್ತು ಅದರ ಪ್ರತಿಯೊಂದು ಪೈಸೆ ಲೆಕ್ಕವೂ ಸಂಘದ ಬಳಿ ಇರುತ್ತದೆ ಎಂದು ಹೇಳಿದರು. ಜೀವನವನ್ನೇ ರಾಷ್ಟ್ರಸೇವೆಗೆ ಮುಡಿಪಾಗಿಟ್ಟಿರುವ ಪ್ರಚಾರಕರು ಸಂಘದ ಕಾರ್ಯವನ್ನು ಮುನ್ನಡೆಸುತ್ತಿದ್ದಾರೆ. ಈ ಹಿಂದೆ ಸಂಘದ ಮೇಲೆ ಮೂರು ಬಾರಿ ನಿಷೇಧ ಹೇರಲಾಗಿತ್ತು. ಆದರೆ ನ್ಯಾಯಾಲಯ ಮತ್ತು ಸರ್ಕಾರದ ಮಟ್ಟದಲ್ಲಿ ನಡೆದ ಎಲ್ಲ ಕಠಿಣ ಪರೀಕ್ಷೆಗಳನ್ನು ಸಂಘವು ಯಶಸ್ವಿಯಾಗಿ ಎದುರಿಸಿ ಹೊರಬಂದಿದೆ. ಹೀಗಿದ್ದರೂ ಈಗ ಮತ್ತೆ ಅದೇ ಹಳೆಯ ಪ್ರಶ್ನೆಗಳನ್ನು ಮುಂದಿಡಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವು ಎಡಪಂಥೀಯ ಬೌದ್ಧಿಕ ಪ್ರಭಾವಕ್ಕೆ ಒಳಗಾಗಿ ತನ್ನ ಸ್ವಂತಿಕೆಯನ್ನು ಕಳೆದುಕೊಂಡಿದೆ. ಭಾರತೀಯ ಮೂಲದ ಹಾಗೂ ದೇಶದ ಹಿತಕ್ಕೆ ಪೂರಕವಾದ ಪ್ರತಿಯೊಂದು ವಿಚಾರದ ಬಗ್ಗೆಯೂ ಅನುಮಾನಿಸುವ ಮನೋಭಾವವನ್ನು ಆ ಪಕ್ಷ ಬೆಳೆಸಿಕೊಂಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರು ಪತ್ರ ಬರೆಯುವುದರಲ್ಲಿ ಸ್ವತಂತ್ರರಾಗಿದ್ದಾರೆ. ಆದರೆ ಸಂಘದ ಉದ್ದೇಶಗಳ ಕುರಿತು ಈಗಾಗಲೇ ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್ ಭಾಗವತ್ ರವರು ಕೇರಳದ ತ್ರಿಶೂರ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಮೋಹನ್ ಭಾಗವತ್ ಅವರು ತಮ್ಮ ಇಡೀ ಜೀವನವನ್ನೇ ದೇಶಸೇವೆಗೆ ಸಮರ್ಪಿಸಿಕೊಂಡಿರುವ ಹಿರಿಯ ವ್ಯಕ್ತಿಯಾಗಿದ್ದು, ಅಂತಹ ಉನ್ನತ ವ್ಯಕ್ತಿತ್ವದ ಬಗ್ಗೆ ಮಾತನಾಡುವಾಗ ಅವರ ಹಿರಿತನ ಹಾಗೂ ವಯಸ್ಸಿಗೆ ತಕ್ಕ ಗೌರವವನ್ನು ನೀಡಬೇಕು ಎಂದು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದರು.

ಆರ್‌ಎಸ್‌ಎಸ್ ಅನ್ನು ನಿಜವಾಗಿ ಅರ್ಥಮಾಡಿಕೊಳ್ಳುವ ಪ್ರಾಮಾಣಿಕ ಆಸಕ್ತಿ ಇದ್ದರೆ ಒಮ್ಮೆ ಸಂಘದ ಶಾಖೆಗೆ ಭೇಟಿ ನೀಡಬೇಕು. ಸಂಘದಲ್ಲಿ ಯಾವುದೇ ನೋಂದಣಿ ಶುಲ್ಕ ಇರುವುದಿಲ್ಲ, ಯಾರನ್ನೂ ಜಾತಿ ಕೇಳುವುದಿಲ್ಲ, ಎಲ್ಲವೂ ಉಚಿತವಾಗಿರುತ್ತದೆ. ಅಲ್ಲಿ ಸಂಸ್ಕಾರ, ದೇಶಭಕ್ತಿ ಹಾಗೂ ಸಾಮಾಜಿಕ ಸಾಮರಸ್ಯದ ಪಾಠಗಳನ್ನು ಕಲಿಸಲಾಗುತ್ತದೆ. ಬಸವಣ್ಣನವರ ವಚನಗಳಿಂದ ಹಿಡಿದು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಗತಿಪರ ವಿಚಾರಗಳವರೆಗೆ ಎಲ್ಲವನ್ನೂ ಪರಿಚಯಿಸಲಾಗುತ್ತದೆ. ಕಬಡ್ಡಿಯಂತಹ ಭಾರತೀಯ ಗ್ರಾಮೀಣ ಕ್ರೀಡೆಗಳ ಮೂಲಕ ಈ ನೆಲದ ಸಂಸ್ಕೃತಿಯನ್ನು ಪರಿಚಯಿಸುವ ಕೆಲಸ ನಡೆಯುತ್ತದೆ. ದೇಶಭಕ್ತಿ ಗೀತೆಗಳು ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಶಾಖೆಗಳಲ್ಲಿ ಬಿತ್ತಲಾಗುತ್ತದೆ. ಸಂಘದ ಬಗ್ಗೆ ತಪ್ಪು ಅಭಿಪ್ರಾಯ ಹೊಂದಿದ್ದ ಹಲವರು ಶಾಖೆ ಹಾಗೂ ಶಿಬಿರಗಳಿಗೆ ಭೇಟಿ ನೀಡಿದ ನಂತರ ತಮ್ಮ ಅಭಿಪ್ರಾಯ ಬದಲಿಸಿಕೊಂಡಿದ್ದಾರೆ. ಮುಕ್ತ ಮನಸ್ಸಿನಿಂದ ಸಂಘವನ್ನು ಅರ್ಥಮಾಡಿಕೊಳ್ಳಲು ಶಾಖೆಯೇ ಅತ್ಯಂತ ಸರಳವಾದ ದಾರಿಯಾಗಿದ್ದು, ಪೂರ್ವಗ್ರಹ ಪೀಡಿತ ಮನಸ್ಥಿತಿಯನ್ನು ಬಿಟ್ಟು ಶಾಖೆಗೆ ಬಂದರೆ ಸಂಘದ ಬಗ್ಗೆ ಇರುವ ಎಲ್ಲ ಗೊಂದಲಗಳು ತಾನಾಗಿಯೇ ದೂರವಾಗುತ್ತವೆ ಎಂದು ಸಿ.ಟಿ. ರವಿ ಆಹ್ವಾನ ನೀಡಿದರು.

Category
ಕರಾವಳಿ ತರಂಗಿಣಿ