ಬೆಂಗಳೂರು : ಧರ್ಮಸ್ಥಳ ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎನ್ನಲಾದ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ನಟ ಪ್ರಕಾಶ್ ರಾಜ್ ಅವರು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮಗೂ ಈ ಪ್ರಕರಣದ ಮುಖ್ಯ ವ್ಯಕ್ತಿ ಎನ್ನಲಾದ ಚಿನ್ನಯ್ಯನಿಗೂ ಇರುವ ಸಂಬಂಧವನ್ನು ಅವರು ಎಳೆಎಳೆಯಾಗಿ ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ. ಸುದ್ದಿಗೋಷ್ಠಿಯ ಆರಂಭದಲ್ಲಿ ಮಾಧ್ಯಮಗಳ ಆಹ್ವಾನ ಪತ್ರಿಕೆಯ ವಿವಾದಕ್ಕೆ ಸ್ಪಷ್ಟನೆ ನೀಡಿದ ಅವರು, ತಾವು ಸಾಮಾಜಿಕ ಜಾಲತಾಣಗಳಲ್ಲಿ ಪ್ರೆಸ್ ಮೀಟ್ ಬಗ್ಗೆ ಪೋಸ್ಟ್ ಹಾಕಿದಾಗ 'ಮಾರಿಕೊಂಡ ಮಾಧ್ಯಮಗಳು' ಎಂಬ ಪದ ಬಳಸಿರುವುದು ನಿಜ ಎಂದು ಒಪ್ಪಿಕೊಂಡರು. ಆದರೆ, ಪ್ರೆಸ್ ಕ್ಲಬ್‌ಗೆ ಅಧಿಕೃತವಾಗಿ ಕಳುಹಿಸಿದ ಇನ್ವಿಟೇಶನ್‌ನಲ್ಲಿ ಆ ಪದ ಬಳಸದೇ, ಮಾಧ್ಯಮದವರನ್ನು ತಮ್ಮ 'ಬಂಧುಗಳು ಮತ್ತು ಆತ್ಮೀಯರು' ಎಂದೇ ಕರೆದಿರುವುದಾಗಿ ತಿಳಿಸಿದರು. ಕೆಲವು ಗಂಭೀರ ಪ್ರಶ್ನೆಗಳಿಗೆ ಉತ್ತರಿಸುವ ಜವಾಬ್ದಾರಿ ತಮ್ಮ ಮೇಲಿದ್ದ ಕಾರಣ ಈ ಸುದ್ದಿಗೋಷ್ಠಿ ಕರೆದಿರುವುದಾಗಿ ಅವರು ಸ್ಪಷ್ಟಪಡಿಸಿದರು.
ಮಾಧ್ಯಮಗಳಲ್ಲಿ ಚಿನ್ನಯ್ಯ ಎಂಬಾತ ತಮ್ಮ ಹೆಸರು ಹೇಳಿದ್ದಾನೆ ಎಂದು ವರದಿಯಾಗುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್ ರಾಜ್, ಆತ ತಮ್ಮ ಹೆಸರು ಹೇಳಿದ್ದಾನೋ ಇಲ್ಲವೋ ತಮಗೆ ಗೊತ್ತಿಲ್ಲ ಎಂದಿದ್ದಾರೆ. ಆದರೆ ಗಿರೀಶ್ ಮಟ್ಟಣ್ಣನವರ್ ಹೇಳಿದಂತೆ ಕೇಳಿ ಚಿನ್ನಯ್ಯ ಮಾತನಾಡಿದ್ದಾನೆ. ಈ ಪ್ರಕರಣದಲ್ಲಿ 200 ಕೋಟಿ ರೂಪಾಯಿ ಹಗರಣ ಮತ್ತು ಪೇಮೆಂಟ್ ವ್ಯವಹಾರ ನಡೆದಿದೆ ಎಂದು ಚಿನ್ನಯ್ಯ ಹೇಳಿದ್ದಾನಂತೆ. ಕೆಲವು ಮಾಧ್ಯಮಗಳಂತೂ ಈ ಷಡ್ಯಂತ್ರದಲ್ಲಿ ತಮ್ಮ ಕೈವಾಡ ಇದೆ ಎಂದು ಅವರೇ ಸ್ವತಃ ಡಿಕ್ಲೇರ್ ಮಾಡಿಬಿಟ್ಟಿದ್ದಾರೆ. ಆದರೆ ತಾವು ಇದುವರೆಗೂ ಚಿನ್ನಯ್ಯ ಅಥವಾ ಮಟ್ಟಣ್ಣನವರ್ ಸೇರಿ ಯಾರನ್ನೂ ಖುದ್ದಾಗಿ ಭೇಟಿ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಕರಣದ ಹಿನ್ನೆಲೆಯನ್ನು ವಿವರಿಸಿದ ಅವರು, ಹಿರಿಯ ಪೊಲೀಸ್ ಅಧಿಕಾರಿ ಮೊಹಾಂತಿ ಅವರು ಇನ್ನೂ ಚಾರ್ಜ್ ತಗೊಳ್ಳದ ಸಮಯದಲ್ಲಿ ತಮಗೆ ಗಿರೀಶ್ ಮಟ್ಟಣ್ಣನವರ್ ಕಡೆಯಿಂದ ಒಂದು ಫೋನ್ ಕರೆ ಬಂದಿತ್ತು. 'ಮಾಸ್ಕ್ ಮ್ಯಾನ್' (ಚಿನ್ನಯ್ಯ) ನಿಮ್ಮ ಹತ್ತಿರ ಮಾತನಾಡಬೇಕಂತೆ ಎಂದಾಗ ತಾವು ಫೋನ್ ಪಡೆದುಕೊಂಡಿದ್ದಾಗಿ ಹೇಳಿದರು. ಆತ ತಮಿಳಿನಲ್ಲಿ ಮಾತನಾಡುತ್ತಾ, ತನಗೆ ಬಹಳ ವಿಷಯ ಗೊತ್ತು, ನಿಮ್ಮನ್ನು ಭೇಟಿ ಆಗಬೇಕು ಮತ್ತು ಸಾಕಷ್ಟು ವಿಚಾರಗಳನ್ನು ಹೇಳಿಕೊಳ್ಳಬೇಕು, ತನಗೆ ಭಯ ಆಗ್ತಾ ಇದೆ, ನಿಮ್ಮ ಸಪೋರ್ಟ್ ಬೇಕು ಎಂದು ಅಳಲು ತೋಡಿಕೊಂಡಿದ್ದ ಎಂದು ಪ್ರಕಾಶ್ ರಾಜ್ ನೆನಪಿಸಿಕೊಂಡರು.
ಆಗ ತಾವು ಅವನಿಗೆ ಫೋನ್‌ನಲ್ಲಿ ಮಾತನಾಡಬೇಡ, ನಿನ್ನ ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸು ಎಂದು ಸೂಚಿಸಿದ್ದಾಗಿ ಹಾಗೂ ಆತ ವಾಯ್ಸ್ ರೆಕಾರ್ಡ್ ಮಾಡಿ ಕಳಿಸಿದ ತಕ್ಷಣ, ತಾವೊಬ್ಬ ಜವಾಬ್ದಾರಿಯುತ ನಾಗರಿಕನಾಗಿ ಪೊಲೀಸ್ ಅಧಿಕಾರಿ ಮೊಹಾಂತಿ ಅವರಿಗೆ ಕರೆ ಮಾಡಿ ಆ ವಾಯ್ಸ್ ಮೆಸೇಜ್ ಅನ್ನು ಪೊಲೀಸರಿಗೆ ಕಳಿಸಿಕೊಟ್ಟಿದ್ದಾಗಿ ತಿಳಿಸಿದರು. ಇದನ್ನು ಹೊರತುಪಡಿಸಿ ತಾವು ಬೇರೇನೂ ಮಾಡಿಲ್ಲ ಎಂದರು. ಇದಾದ ಕೆಲ ದಿನಗಳ ಬಳಿಕ ತನಿಖೆಯ ಅಪ್‌ಡೇಟ್ ಕೇಳಿದಾಗ, ಅಧಿಕಾರಿಗಳು ಚಿನ್ನಯ್ಯನಿಂದ ಅಂತರ ಕಾಯ್ದುಕೊಳ್ಳುವಂತೆ ತಮಗೆ ತಿಳಿಸಿದ್ದರು ಎಂದು ಪ್ರಕಾಶ್ ರಾಜ್ ಹೇಳಿದರು. ಚಿನ್ನಯ್ಯ ತಮ್ಮ ಬಳಿ ಬಂದು ತನಗೆ ಭಯವಾಗುತ್ತಿದೆ, ಆದರೆ ಎಸ್‌ಐಟಿ (SIT) ರಚನೆ ಆಗಿದೆ ಎಂದಾಗ, ತಾವು ಅವನಿಗೆ ಧೈರ್ಯ ತುಂಬಿ, ನೀನು ನನ್ನ ಮುಂದೆ ಹೇಳಿದ ಸತ್ಯವನ್ನು ಎಸ್‌ಐಟಿ ಮುಂದೆಯೇ ಹೋಗಿ ಹೇಳು, ಸತ್ಯ ಹೇಳಿದರೆ ಇಡೀ ಊರೇ ನಿನ್ನನ್ನು ಕೊಂಡಾಡುತ್ತೆ, ನಾನೇ ನಿನ್ನನ್ನು ಬಂದು ತಬ್ಬಿಕೊಳ್ಳುತ್ತೇನೆ ಎಂದು ಹೇಳಿದ್ದಾಗಿ ಒಪ್ಪಿಕೊಂಡರು. ಆದರೆ, ಸ್ವಲ್ಪ ದಿನಗಳ ಬಳಿಕ ಮೊಹಾಂತಿ ಅವರೇ ತಮಗೆ ಕರೆ ಮಾಡಿ, ಚಿನ್ನಯ್ಯ ಉಲ್ಟಾ ಹೊಡೆಯುತ್ತಿದ್ದಾನೆ, ಆತ ಸುಳ್ಳು ಮಾಹಿತಿ ನೀಡುತ್ತಿದ್ದಾನೆ, ಅವನಿಂದ ದೂರ ಇರಿ ಎಂದು ಎಚ್ಚರಿಸಿದ್ದರಿಂದ ತಾವು ಆತನಿಂದ ತಕ್ಷಣ ದೂರ ಸರಿದಿದ್ದಾಗಿ ವಿವರಿಸಿದರು.
ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಪ್ರಕಾಶ್ ರಾಜ್ 200 ಕೋಟಿ ಡೀಲ್ ಮಾಡಿದ್ದಾರೆ ಎಂದು ಬಿಂಬಿಸಲಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಅವರು, ಅಷ್ಟಕ್ಕೂ 200 ಕೋಟಿ ರೂಪಾಯಿ ಹಣವನ್ನು ತಾವು ಎಲ್ಲಿಂದ ತರಲು ಸಾಧ್ಯ ಮತ್ತು ಪರಮ ಪವಿತ್ರ ಧರ್ಮಸ್ಥಳದ ಮೇಲೆ ಯಾಕೆ ಅಪಪ್ರಚಾರ ಮಾಡಲಿ ಎಂದು ಪ್ರಶ್ನಿಸಿದರು. ವಿಷಯವನ್ನು ತಿರುಚಿ ತಮಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ತಾವು ಧರ್ಮ ವಿರೋಧಿ ಅಂತೆಲ್ಲಾ ಬಣ್ಣ ಬಳಿಯಲಾಗುತ್ತಿದೆ. ತಮ್ಮ ಹೆಂಡತಿ ಪ್ರತಿದಿನ ದೇವರ ಪೂಜೆ ಮಾಡುತ್ತಾಳೆ, ತಾವು ಅವಳ ಭಾವನೆಗಳನ್ನು ಗೌರವಿಸುತ್ತೇನೆ. ದೇಶದಲ್ಲಿ ಪ್ರಧಾನಿಯನ್ನೇ ಪ್ರಶ್ನಿಸಿದರೂ ಈ ರೀತಿ ವಿಷಯ ತಿರುಚಬಾರದು ಎಂದು ಕಿಡಿಕಾರಿದರು. ತಾವು ತಮ್ಮ ಜೀವನದಲ್ಲಿ ಒಂದೇ ಒಂದು ಬಾರಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಿದ್ದು, ಅವರು ಅತ್ಯಂತ ಅದ್ಭುತವಾದ ಮತ್ತು ಶ್ರೇಷ್ಠ ಮನುಷ್ಯ ಎಂದು ಪ್ರಕಾಶ್ ರಾಜ್ ಶ್ಲಾಘಿಸಿದರು. ಈ ಪ್ರಕರಣದಲ್ಲಿ 200 ಕೋಟಿ ರೂಪಾಯಿ ವ್ಯವಹಾರ, ಧರ್ಮ, ಷಡ್ಯಂತ್ರ ಎಂಬ ಕಟ್ಟುಕಥೆಗಳನ್ನು ಎಳೆದು ತರುವುದು ಸರಿಯಲ್ಲ ಎಂದ ಅವರು, ತಮಗೆ ಯಾವುದೇ ಎಂಎಲ್‌ಎ ಅಥವಾ ಎಂಪಿ ಆಗುವ ಆಸೆ ಇಲ್ಲ ಎಂದರು. ಧರ್ಮಸ್ಥಳದಲ್ಲಿ ಸತ್ತಿರುವ ಹೆಣ್ಣು ಮಕ್ಕಳ ಮೇಲೆ ಯಾರಿಗೂ ಕನಿಕರ ಇಲ್ಲವೇಕೆ ಮತ್ತು ಅಲ್ಲಿ ಮೃತಪಟ್ಟ ಹೆಣ್ಣು ಮಕ್ಕಳು ನಮ್ಮವರಲ್ವಾ ಎಂದು ಪ್ರಶ್ನಿಸಿದ ಅವರು, ಸೌಜನ್ಯ ಹೇಗೆ ಸತ್ತಳು ಮತ್ತು ಅಲ್ಲಿ ಉಳಿದ ಹೆಣ್ಣು ಮಕ್ಕಳ ಸಾವುಗಳು ಹೇಗೆ ಸಂಭವಿಸಿದವು ಎಂದು ಕೇಳುವುದು ತಪ್ಪಾ ಎಂದು ಪ್ರಶ್ನಿಸಿದರು. ತಾವು ಆ ಸಾವುಗಳ ನ್ಯಾಯಕ್ಕಾಗಿ ಪ್ರಶ್ನೆ ಮಾಡಿದ್ದಾರೆಯೇ ಹೊರತು ಕ್ಷೇತ್ರದ ವಿರುದ್ಧ ಯಾವುದೇ ಷಡ್ಯಂತ್ರ ಮಾಡಿಲ್ಲ ಎಂದು ಪ್ರಕಾಶ್ ರಾಜ್ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.