ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೇವಲ ಬೆಂಗಳೂರು ಮಾತ್ರವಲ್ಲದೆ ಇಡೀ ರಾಜ್ಯದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದಾರೆ ಎಂದು ಬಯೋಕಾನ್ ಸಂಸ್ಥಾಪಕಿ ಕಿರಣ್ ಮಜುಂದಾರ್ ಶಾ ಅವರು ತಿಳಿಸಿದ್ದಾರೆ. ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಮಂಗಳವಾರ ವಿವಿಧ ದೇಶಗಳ ಗೌರವಾನ್ವಿತ ರಾಯಭಾರಿಗಳ ನಿಯೋಗದೊಂದಿಗೆ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಅಭಿನಂದಿಸಿದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡಲು ಸರ್ಕಾರ ಕೈಗೊಳ್ಳಲಿರುವ ಎಲ್ಲಾ ಹೊಸ ಉಪಕ್ರಮಗಳು ಮತ್ತು ಪ್ರಯತ್ನಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ನಮ್ಮ ನಿಯೋಗದಲ್ಲಿ ಪ್ರತಿನಿಧಿಸುವ ಪ್ರತಿಯೊಂದು ದೇಶವೂ ಈ ಪ್ರಗತಿಯ ಕಾರ್ಯಕ್ಕೆ ಕೈಜೋಡಿಸಲು ಸಿದ್ಧವಾಗಿದೆ. ಮುಖ್ಯಮಂತ್ರಿಯವರು ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿಯಲ್ಲಿರುವ ರಾಜ್ಯವನ್ನಾಗಿ ಮಾಡಲು ಪಣ ತೊಟ್ಟಿದ್ದಾರೆ ಎಂದು ಅವರು ಹೇಳಿದರು.
ನಗರದ ಮೂಲಸೌಕರ್ಯ ಮತ್ತು ನಾಗರಿಕ ಸೌಲಭ್ಯಗಳ ಕುರಿತು ಮಾತನಾಡಿದ ಕಿರಣ್ ಮಜುಂದಾರ್ ಶಾ, ಬೆಂಗಳೂರಿಗೆ ಇನ್ನೂ ಉತ್ತಮ ಮೂಲಸೌಕರ್ಯಗಳ ಅಗತ್ಯವಿದೆ. ಸಿಎಂ ಅವರು ಈಗಾಗಲೇ ಸುರಂಗ ರಸ್ತೆ, ಮೇಲ್ಸೇತುವೆ ಹೆದ್ದಾರಿಗಳು, ಕಾರಿಡಾರ್‌ಗಳು ಹಾಗೂ ಪೆರಿಫೆರಲ್ ರಿಂಗ್ ರೋಡ್ ಸೇರಿದಂತೆ ಹಲವು ಯೋಜನೆಗಳ ಮೂಲಕ ಕೆಲಸಗಳನ್ನು ಚುರುಕುಗೊಳಿಸಿದ್ದಾರೆ. ಔಟರ್ ರಿಂಗ್ ರೋಡ್ ಸುಧಾರಣೆಗಾಗಿ ವಿಶೇಷ ಬಜೆಟ್ ಹಂಚಿಕೆಯನ್ನೂ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ದೊಡ್ಡ ಬದಲಾವಣೆಗಳು ಕಂಡುಬರಲಿವೆ ಎಂದರು. ಇದೇ ವೇಳೆ ಕಸ ಮತ್ತು ಘನತ್ಯಾಜ್ಯ ನಿರ್ವಹಣೆಯಲ್ಲಿ ಮುಖ್ಯಮಂತ್ರಿಯವರು ಧೈರ್ಯದ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಶ್ಲಾಘಿಸಿದ ಅವರು, ಸರ್ಕಾರದ ಪ್ರಯತ್ನಗಳ ಜೊತೆಗೆ ನಾಗರಿಕರಾದ ನಾವೂ ಸಹ ನಮ್ಮ ಜವಾಬ್ದಾರಿಯನ್ನು ಅರಿತು ನಾಗರಿಕ ಪ್ರಜ್ಞೆಯನ್ನು ಮೆರೆಯಬೇಕು ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಕಿರಣ್ ಮಜುಂದಾರ್ ಶಾ ಅವರೊಂದಿಗೆ ಸುರೇಶ್, ಗೀತಾಂಜಲಿ ಕಿರ್ಲೊಸ್ಕರ್, ವಿಕ್ರಂ ವಿಶ್ವನಾಥ್, ಮೋಹನ್ ಸುರೇಶ್, ಶಬೀನಾ ಸುಲ್ತಾನ, ಕಾರ್ತಿಕ್ ತಲ್ಲಮ್, ರಾಘವೇಂದ್ರ ಪೂಜಾರಿ, ರವಿಶಂಕರ್ ಸೇರಿದಂತೆ ವಿವಿಧ ದೇಶಗಳ ಗೌರವಾನ್ವಿತ ರಾಯಭಾರಿಗಳ ನಿಯೋಗದ ಅಧಿಕಾರಿಗಳು ಉಪಸ್ಥಿತರಿದ್ದರು.