image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆರ್‌ಎಸ್‌ಎಸ್ ನೋಂದಣಿ ವಿವಾದ: ಸರಸಂಘಚಾಲಕ ಮೋಹನ್ ಭಾಗವತ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಪತ್ರ

ಆರ್‌ಎಸ್‌ಎಸ್ ನೋಂದಣಿ ವಿವಾದ: ಸರಸಂಘಚಾಲಕ ಮೋಹನ್ ಭಾಗವತ್‌ಗೆ ಸಚಿವ ಪ್ರಿಯಾಂಕ್ ಖರ್ಗೆ ಬಹಿರಂಗ ಪತ್ರ

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಅಧಿಕೃತವಾಗಿ ನೋಂದಣಿಯಾಗದಿರುವುದನ್ನು ಆಕ್ಷೇಪಿಸಿ ಹಾಗೂ ಸಂಸ್ಥೆಯ ಕಾನೂನುಬದ್ಧ ಸ್ಥಾನಮಾನ ಮತ್ತು ಹಣಕಾಸಿನ ಪಾರದರ್ಶಕತೆಗೆ ಸಂಬಂಧಿಸಿದಂತೆ ಪೂರಕ ಎಂಟು ಅಂಶಗಳ ವಿವರಗಳನ್ನು ಬಹಿರಂಗಪಡಿಸುವಂತೆ ಕೋರಿ ಕರ್ನಾಟಕದ ಗೃಹ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.

ತಮ್ಮ ಪತ್ರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು, ರಾಷ್ಟ್ರೀಯತೆ, ಶಿಸ್ತು ಮತ್ತು ಕರ್ತವ್ಯದ ಕುರಿತು ನಿರಂತರವಾಗಿ ಮಾತನಾಡುವ ಸಂಘಟನೆಯೊಂದು, ಪಾರದರ್ಶಕತೆ, ಕಾನೂನಿನ ಅನುಸರಣೆ ಮತ್ತು ಭಾರತದ ಸಂವಿಧಾನದ ಬಗೆಗಿನ ಗೌರವವನ್ನೂ ಅಷ್ಟೇ ದೃಢವಾಗಿ ಪ್ರದರ್ಶಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಸಾಮಾನ್ಯ ಭಾರತೀಯರು ನಿಯಮಗಳನ್ನು ಪಾಲಿಸಬೇಕೆಂದು ಒತ್ತಾಯಿಸುತ್ತಲೇ, ತಾನು ಮಾತ್ರ ಅದೇ ನಿಯಮಗಳಿಂದ ವಿನಾಯಿತಿ ಪಡೆದುಕೊಳ್ಳುವ ನೈತಿಕ ಹಕ್ಕು ಆರ್‌ಎಸ್‌ಎಸ್‌ಗೆ ಇಲ್ಲ. ದೇಶದ ಸಾಮಾನ್ಯ ಕಾರ್ಮಿಕರು, ಸಣ್ಣ ಸಂಘ-ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು, ಎನ್‌ಜಿಒಗಳು, ಟ್ರಸ್ಟ್‌ಗಳು, ಕಂಪನಿಗಳು ಮತ್ತು ನಾಗರಿಕರು ನೋಂದಣಿ, ಲೆಕ್ಕಪರಿಶೋಧನೆ ಮತ್ತು ತೆರಿಗೆ ಪಾವತಿಗೆ ಬದ್ಧರಾಗಿರುವಾಗ, ಆರ್‌ಎಸ್‌ಎಸ್ ಕೂಡ ದೇಶದ ಕಾನೂನಿಗೆ ಮಾದರಿಯಾಗಿ ಬದ್ಧವಾಗಿರಬೇಕು ಎಂದು ಅವರು ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ನ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ಸಂಸ್ಥೆಯಾದ ಅಖಿಲ ಭಾರತೀಯ ಪ್ರತಿನಿಧಿ ಸಭಾ (ABPS) ಬಿಡುಗಡೆ ಮಾಡಿರುವ 2025-26ರ ವಾರ್ಷಿಕ ವರದಿಯ ಅಂಕಿ-ಅಂಶಗಳನ್ನು ಪತ್ರದಲ್ಲಿ ಉಲ್ಲೇಖಿಸಿರುವ ಸಚಿವರು, ಕರ್ನಾಟಕದಲ್ಲಿ ಈ ಸಂಸ್ಥೆಯು ಗಣನೀಯ ಅಸ್ತಿತ್ವವನ್ನು ಹೊಂದಿದೆ. ರಾಜ್ಯದಲ್ಲಿ 4,127 ದೈನಂದಿನ ಶಾಖೆಗಳು, 1,389 ವಾರಾಂತ್ಯದ ಮಿಲನ್‌ಗಳು ಮತ್ತು 60 ಮಾಸಿಕ ಮಂಡಳಿಗಳು ನಡೆಯುತ್ತಿವೆ. ಅಲ್ಲದೆ, ಸಂಸ್ಥೆಯು 2,194 ಸಮಾಜೋತ್ಸವಗಳನ್ನು ಆಯೋಜಿಸಿದ್ದು, ಅದರಲ್ಲಿ 19,61,158 ಜನರು ಭಾಗವಹಿಸಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದರೊಂದಿಗೆ ರಾಜ್ಯಾದ್ಯಂತ ಸಾಮಾನ್ಯವಾಗಿ 2.5 ರಿಂದ 3 ಕಿಲೋಮೀಟರ್‌ಗಳಷ್ಟು ದೂರವನ್ನು ಕ್ರಮಿಸುವ 562 ಪಥಸಂಚಲನಗಳನ್ನು ಆಯೋಜಿಸಲಾಗಿದ್ದು, ಇದರಲ್ಲಿ ಗಣವೇಷಧಾರಿಗಳಾದ 2,21,963 ಕಾರ್ಯಕರ್ತರು ಪಾಲ್ಗೊಂಡಿದ್ದಾರೆ ಎಂಬ ಮಾಹಿತಿಯನ್ನು ಪತ್ರದಲ್ಲಿ ನೆನಪಿಸಲಾಗಿದೆ.

ಈ ಎಲ್ಲಾ ಅಂಕಿ-ಅಂಶಗಳನ್ನು ಒಟ್ಟಾಗಿ ನೋಡಿದಾಗ, ಕರ್ನಾಟಕದಾದ್ಯಂತ ದೈನಂದಿನ ಕೆಡರ್ ನಿರ್ಮಾಣ, ಸಾಪ್ತಾಹಿಕ ಮತ್ತು ಮಾಸಿಕ ಸಂಪರ್ಕ ಕಾರ್ಯಕ್ರಮಗಳು, ಬೃಹತ್ ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಗಣವೇಷಧಾರಿ ಪಥಸಂಚಲನಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಒಂದು ಬೃಹತ್, ಶಿಸ್ತುಬದ್ಧ ಹಾಗೂ ಆಳವಾಗಿ ಬೇರೂರಿರುವ ಜಾಲವು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಪ್ರಿಯಾಂಕ್ ಖರ್ಗೆ ವಿವರಿಸಿದ್ದಾರೆ.

ಇಷ್ಟೊಂದು ವ್ಯಾಪಕವಾದ ಸಾಂಸ್ಥಿಕ ಅಸ್ತಿತ್ವವನ್ನು, ವಿಶೇಷವಾಗಿ ಅದು ನಿಯಮಿತ ಸಾರ್ವಜನಿಕ ಸಜ್ಜುಗೊಳಿಸುವಿಕೆ, ಗಣವೇಷಧಾರಿ ಪಥಸಂಚಲನಗಳು ಮತ್ತು ದೊಡ್ಡ ಮಟ್ಟದ ಸಾಮಾಜಿಕ ಸಂಪರ್ಕ ಕಾರ್ಯಕ್ರಮಗಳನ್ನು ಒಳಗೊಂಡಿರುವಾಗ, ಕೇವಲ ಒಂದು ಖಾಸಗಿ ಅಥವಾ ಅನೌಪಚಾರಿಕ ವ್ಯವಸ್ಥೆ ಎಂದು ಪರಿಗಣಿಸಲು ಸಾಧ್ಯವಿಲ್ಲ. ಇದು ಕಾನೂನುಬದ್ಧ ಸ್ಥಾನಮಾನ, ಜವಾಬ್ದಾರಿ, ಹಣಕಾಸಿನ ಪಾರದರ್ಶಕತೆ, ಸಾರ್ವಜನಿಕ ಸುವ್ಯವಸ್ಥೆ, ಅನುಮತಿಗಳು, ಧನಸಹಾಯದ ಮೂಲಗಳು ಹಾಗೂ ಭಾರತದ ಸಂವಿಧಾನ ಮತ್ತು ಕಾನೂನುಗಳ ಪಾಲನೆಗೆ ಸಂಬಂಧಿಸಿದಂತೆ ಗಂಭೀರ ಕಾನೂನುಬದ್ಧ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.

ಆದ್ದರಿಂದ, ಇಷ್ಟು ದೊಡ್ಡ ಪ್ರಮಾಣದ ಸಂಘಟನೆಯು ಯಾವುದೇ ಔಪಚಾರಿಕ ನೋಂದಣಿ ಇಲ್ಲದೇ ಅಥವಾ ಅನ್ವಯವಾಗುವ ಕಾನೂನುಗಳ ಅಡಿಯಲ್ಲಿ ಕಾನೂನುಬದ್ಧ ಸಂಸ್ಥೆ ಅಥವಾ "ವ್ಯಕ್ತಿಗಳ ಮಂಡಳಿ" ಎಂದು ನೋಂದಾಯಿಸಿಕೊಳ್ಳದೆ, ಅನಾಮಧೇಯವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಇರುವ ಕಾನೂನು ಆಧಾರಗಳನ್ನು ವಿವರಿಸಲು ತನ್ನ ಅಧಿಕೃತ ಪದಾಧಿಕಾರಿಗಳನ್ನು ನಿಯೋಜಿಸಬೇಕಾಗಿ ಆರ್‌ಎಸ್‌ಎಸ್ ಅನ್ನು ಕೋರುತ್ತೇನೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಪತ್ರದ ಮೂಲಕ ಗಡುಸಾಗಿ ಒತ್ತಾಯಿಸಿದ್ದಾರೆ.

Category
ಕರಾವಳಿ ತರಂಗಿಣಿ