ಬೆಂಗಳೂರು : ಭೂಗತ ಜಗತ್ತಿನ ಮಾಜಿ ಡಾನ್ ಹಾಗೂ ಉದ್ಯಮಿ ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ ಒಡೆತನದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ರಾಜಧಾನಿ ಬೆಂಗಳೂರಿನ ರಸ್ತೆಗಳಲ್ಲಿ ಮತ್ತೊಮ್ಮೆ ಪುಂಡಾಟಿಕೆ ನಡೆಸಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅತಿವೇಗದ ಚಾಲನೆ ಹಾಗೂ ಕರ್ಕಶ ಶಬ್ದದ ಮೂಲಕ ಬೆಂಕಿ ಉಗುಳುತ್ತಾ ಕಾರನ್ನು ಓಡಿಸಿದ್ದು, ಈ ಘಟನೆಯ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಏರ್ಪೋರ್ಟ್) ರಸ್ತೆಯಲ್ಲಿ KA 05 NR 0009 ನೋಂದಣಿ ಸಂಖ್ಯೆಯ ಈ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಅತ್ಯಂತ ಅಪಾಯಕಾರಿ ರೀತಿಯಲ್ಲಿ ಸಂಚರಿಸಿದೆ. ಕಾರನ್ನು ಅತಿ ವೇಗವಾಗಿ ಚಲಾಯಿಸುವುದಷ್ಟೇ ಅಲ್ಲದೆ, ಅದರ ಸೈಲೆನ್ಸರ್ ಅನ್ನು ಮಾರ್ಪಾಡು (Modify) ಮಾಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ರಸ್ತೆಯಲ್ಲಿ ಸಾಗುವಾಗ ಸೈಲೆನ್ಸರ್‌ನಿಂದ ಕರ್ಕಶ ಶಬ್ದ ಹೊರಹೊಮ್ಮುತ್ತಿದ್ದು, ಬೆಂಕಿಯ ಜ್ವಾಲೆ ಉಗುಳುವಂತೆ ಮಾಡಲಾಗಿದೆ. ಈ ವಿಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.
ವೈರಲ್ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ಪೊಲೀಸರು ಸದ್ಯ ಪ್ರಾಥಮಿಕ ಪರಿಶೀಲನೆ ನಡೆಸುತ್ತಿದ್ದಾರೆ. ಲಭ್ಯವಿರುವ ದೃಶ್ಯಾವಳಿಗಳ ಆಧಾರದ ಮೇಲೆ ಮೊದಲಿಗೆ ಪ್ರಕರಣ (FIR) ದಾಖಲಿಸಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಈ ಘಟನೆ ಯಾವಾಗ ನಡೆದಿದೆ? ಕಾರಿನ ಚಾಲನಾ ಸೀಟಿನಲ್ಲಿ ಇದ್ದದ್ದು ಯಾರು? ಸ್ವತಃ ರಿಕ್ಕಿ ರೈ ಅವರೇ ಕಾರು ಚಲಾಯಿಸುತ್ತಿದ್ದರೇ ಅಥವಾ ಬೇರೆ ಯಾರಾದರೂ ಕಾರು ಚಲಾಯಿಸುತ್ತಿದ್ದರೇ? ಎಂಬುದನ್ನು ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪತ್ತೆ ಹಚ್ಚಿ, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ರಿಕ್ಕಿ ರೈ ಅವರ ಈ ಲ್ಯಾಂಬೋರ್ಗಿನಿ ಕಾರು ಇಂತಹ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಮಾರ್ಚ್ 21 ರಂದು ಇದೇ ಕಾರು ನಗರದ ಹೃದಯಭಾಗದಲ್ಲಿ ರೇಸಿಂಗ್ ನಡೆಸಿ ಸುದ್ದಿಯಾಗಿತ್ತು. ಅಂದು ಅನಿಲ್ ಕುಂಬ್ಳೆ ವೃತ್ತ ಹಾಗೂ ಕಬ್ಬನ್ ರಸ್ತೆಯಲ್ಲಿ ಇದೇ ಲ್ಯಾಂಬೋರ್ಗಿನಿ ಕಾರನ್ನು ಅತ್ಯಂತ ಅಪಾಯಕಾರಿ ರೀತಿಯಲ್ಲಿ 'ಡ್ರಿಫ್ಟಿಂಗ್' ಮಾಡಲಾಗಿತ್ತು. ಆರಂಭದಲ್ಲಿ ಈ ಆರೋಪವನ್ನು ನಿರಾಕರಿಸಿದ್ದ ರಿಕ್ಕಿ ರೈ, "ಆ ಕಾರಿನಲ್ಲಿ ಇದ್ದದ್ದು ನಾನಲ್ಲ" ಎಂದು ಸಮರ್ಥಿಸಿಕೊಂಡಿದ್ದರು. ಆದರೆ ಕಬ್ಬನ್ ಪಾರ್ಕ್ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಸ್ವತಃ ರಿಕ್ಕಿ ರೈ ಅವರೇ ಕಾರು ಚಲಾಯಿಸುತ್ತಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಹಳೆಯ ಪ್ರಕರಣದ ವಿಚಾರಣೆ ವೇಳೆ ರಿಕ್ಕಿ ರೈ ಪರ ವಕೀಲರು ಕೋರ್ಟ್‌ನಲ್ಲಿ ಮಂಡಿಸಿದ್ದ ವಾದ ಭಾರಿ ಅಪಹಾಸ್ಯಕ್ಕೆ ಗುರಿಯಾಗಿತ್ತು. "ಅಂದು ಬೆಂಗಳೂರಿನ ರಸ್ತೆ ಸರಿಯಿರಲಿಲ್ಲ, ಹಾಗಾಗಿ ಕಾರು ಸ್ಕಿಡ್ ಆಗಿತ್ತು. ಆ ಸಂದರ್ಭದಲ್ಲಿ ನಮ್ಮ ಕಕ್ಷಿದಾರರು (ರಿಕ್ಕಿ ರೈ) ಅಪಘಾತವಾಗದಂತೆ ತಡೆಯಲು ತಮ್ಮ ಅದ್ಭುತ ಚಾಲನಾ ನೈಪುಣ್ಯತೆಯನ್ನು ಮೆರೆದಿದ್ದರು" ಎಂದು ವಕೀಲರು ಸಮರ್ಥಿಸಿಕೊಂಡಿದ್ದರು. ಈ ವಾದ ಸಾರ್ವಜನಿಕವಾಗಿ ಅಪಹಾಸ್ಯಕ್ಕೆ ಗುರಿಯಾಗಿತ್ತು. ತದನಂತರ ರಿಕ್ಕಿ ರೈ ನ್ಯಾಯಾಲಯದ ಮುಂದೆ ಹಾಜರಾಗಿ ದಂಡ ಪಾವತಿಸಿ ಪ್ರಕರಣದಿಂದ ಮುಕ್ತಿ ಪಡೆದಿದ್ದರು.
ಈಗ ಮತ್ತೊಮ್ಮೆ ಅದೇ ಕಾರು ನಿಯಮ ಉಲ್ಲಂಘಿಸಿರುವುದು ಪೊಲೀಸರ ಕೆಂಗಣ್ಣಿಗೆ ಗುರಿಯಾಗಿದೆ. ಅತಿವೇಗದ ಚಾಲನೆ (Over speeding), ಸೈಲೆನ್ಸರ್ ಮಾರ್ಪಾಡು ಮಾಡಿ ಶಬ್ದ ಮಾಲಿನ್ಯ ಉಂಟುಮಾಡಿರುವುದು ಹಾಗೂ ರಸ್ತೆಯಲ್ಲಿ ಸಾರ್ವಜನಿಕರ ಜೀವಕ್ಕೆ ಅಪಾಯ ತಂದೊಡ್ಡಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಮೋಟಾರು ವಾಹನ ಕಾಯ್ದೆ-1988 (Karnataka Motor Vehicle Act) ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯಿದೆ. ತನಿಖೆಯ ನಂತರ ಕಾರಿನ ಮಾಲೀಕರ ವಿರುದ್ಧ ಮತ್ತೊಂದು ಕಾನೂನು ಕಂಠಕ ಬಿಗಿಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿಂದಿನ ಘಟನೆಯಲ್ಲಿ ಲ್ಯಾಂಬೋರ್ಗಿನಿ ಕಾರು ನಗರದ ರಸ್ತೆಯಲ್ಲಿ ಅಡ್ಡಾದಿಡ್ಡಿ ಚಲಿಸಿದ ದೃಶ್ಯ ಹಾಗೂ ಅದಕ್ಕೆ ವಕೀಲರು ನೀಡಿದ ಸಮರ್ಥನೆಯ ವಿವರಗಳನ್ನು ನೀವು ಲ್ಯಾಂಬೋರ್ಗಿನಿ ಸ್ಟಂಟ್ ವರದಿ ವಿಡಿಯೋದಲ್ಲಿ ವೀಕ್ಷಿಸಬಹುದು.