image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೊನೆಯ ಪ್ರಮಾಣಪತ್ರ ಸ್ವೀಕಾರ ಆಗಬಹುದು: ಭಾವುಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಕೊನೆಯ ಪ್ರಮಾಣಪತ್ರ ಸ್ವೀಕಾರ ಆಗಬಹುದು: ಭಾವುಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು : ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರಿಂದ ಪ್ರಮಾಣಪತ್ರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಭಾವುಕ ನುಡಿಗಳನ್ನಾಡಿದ್ದಾರೆ. ಇದು ತಮ್ಮ ರಾಜಕೀಯ ಜೀವನದ ಕೊನೆಯ ಪ್ರಮಾಣಪತ್ರ ಸ್ವೀಕಾರ ಆಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮಗೆ 13ನೇ ಬಾರಿ ಜನಪ್ರತಿನಿಧಿಯಾಗುವ ಅಪರೂಪದ ಅವಕಾಶ ಸಿಕ್ಕಿರುವುದಕ್ಕಾಗಿ ಕಲಬುರಗಿಯ ಜನತೆ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಗೆ ಅವರು ಕೃತಜ್ಞತೆ ಸಲ್ಲಿಸಿದರು. ಜೀವನದಲ್ಲಿ ಇಷ್ಟೊಂದು ದೊಡ್ಡ ಅವಕಾಶಗಳು ಸಿಗಲು ಕಾಂಗ್ರೆಸ್‌ ಪಕ್ಷವೇ ಕಾರಣ ಎಂದು ಸ್ಮರಿಸಿದ ಖರ್ಗೆ, ಇಂದಿರಾಗಾಂಧಿ ಅವರ ಅವಧಿಯಿಂದ ಸೋನಿಯಾಗಾಂಧಿವರೆಗೆ ತಮಗೆ ನಾಯಕತ್ವ ಬೆಂಬಲ ನೀಡಿದೆ ಎಂದರು. 1972ರಲ್ಲಿ ತಾವು ಮೊದಲ ಬಾರಿಗೆ ವಿಧಾನಸೌಧಕ್ಕೆ ಕಾಲಿಟ್ಟಿದ್ದನ್ನು ನೆನಪಿಸಿಕೊಂಡ ಅವರು, ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಅನೇಕ ಏರುಪೇರುಗಳನ್ನು ನೋಡಿರುವುದಾಗಿ ಹೇಳಿದರು. ಇದೇ ವೇಳೆ ಪ್ರಜಾಪ್ರಭುತ್ವದ ಉಳಿವಿಗಾಗಿ ಮಾಧ್ಯಮ ಮತ್ತು ರಾಜಕೀಯ ನಡವಳಿಕೆ ಎರಡೂ ನಿಷ್ಪಕ್ಷವಾಗಿರಬೇಕು ಹಾಗೂ ಈ ಎರಡೂ ಕ್ಷೇತ್ರಗಳಲ್ಲೂ ಸುಧಾರಣೆ ಆಗಬೇಕು ಎಂದು ಅವರು ಕರೆ ನೀಡಿದರು.

ಇನ್ನು ರಾಜ್ಯಸಭಾ ಚುನಾವಣೆಯಲ್ಲಿ ಮೀನಾಕ್ಷಿ ನಟರಾಜನ್ ಅವರ ನಾಮಪತ್ರ ತಿರಸ್ಕೃತಗೊಂಡಿರುವ ವಿಷಯದ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಖರ್ಗೆ, ಇದೊಂದು ವಿಶೇಷ ಪ್ರಕರಣವಾಗಿದ್ದು, ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಹೈಕೋರ್ಟ್‌ ಮೆಟ್ಟಿಲು ಹತ್ತಲಿದ್ದೇವೆ ಎಂದು ಸ್ಪಷ್ಟಪಡಿಸಿದರು. ಮಧ್ಯಪ್ರದೇಶದಲ್ಲಿ ನಡೆದಿರುವುದು ಕಾನೂನುಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿ ಕೃತ್ಯವಾಗಿದ್ದು, ಪ್ರಧಾನಿ ಮೋದಿಯವರ ಬೆಂಬಲವಿಲ್ಲದೆ ಇದು ನಡೆಯಲು ಸಾಧ್ಯವಿಲ್ಲ ಎಂದು ನೇರವಾಗಿ ಆರೋಪಿಸಿದರು. ದೇಶದ ಎಲ್ಲಾ ಕಡೆ ಆರ್‌ಎಸ್‌ಎಸ್‌ನ ಏಜೆಂಟರನ್ನು ಕೂರಿಸಿ ಮನಸ್ಸಿಗೆ ಬಂದಂತೆ ಆಟ ಆಡಲಾಗುತ್ತಿದೆ ಮತ್ತು ಜಾರ್ಖಂಡ್‌ನಲ್ಲೂ ಇದೇ ರೀತಿಯಾಗಿದೆ ಎಂದು ದೂರಿದ ಅವರು, ಮತ ಖರೀದಿ ಹಾಗೂ ಮತ ವಿಭಜನೆಗಾಗಿಯೇ ಇಂತಹ ಏಜೆಂಟರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

Category
ಕರಾವಳಿ ತರಂಗಿಣಿ