image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ತುಮಕೂರು ಸಿದ್ದಗಂಗಾ ಮಠಕ್ಕೆ 14 ಎಕರೆ ಜಮೀನು ಮಂಜೂರಾತಿ ಆದೇಶ ಎತ್ತಿಹಿಡಿದ ಹೈಕೋರ್ಟ್ ವಿಭಾಗೀಯ ಪೀಠ

ತುಮಕೂರು ಸಿದ್ದಗಂಗಾ ಮಠಕ್ಕೆ 14 ಎಕರೆ ಜಮೀನು ಮಂಜೂರಾತಿ ಆದೇಶ ಎತ್ತಿಹಿಡಿದ ಹೈಕೋರ್ಟ್ ವಿಭಾಗೀಯ ಪೀಠ

ಬೆಂಗಳೂರು : ತುಮಕೂರಿನ ಸಿದ್ದಗಂಗಾ ಮಠದ 'ದಾಸೋಹ ಪ್ರಸಾದ ವಿತರಣಾ ಕೇಂದ್ರ'ಕ್ಕೆ ಬೆಂಗಳೂರು ವ್ಯಾಪ್ತಿಯ ಕದರನಹಳ್ಳಿಯಲ್ಲಿ 14 ಎಕರೆ ಜಮೀನು ಮಂಜೂರು ಮಾಡಿದ್ದ ರಾಜ್ಯ ಸರ್ಕಾರದ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದೆ. ಮಂಜೂರಾತಿ ರದ್ದುಪಡಿಸಿದ್ದ ಏಕಸದಸ್ಯ ನ್ಯಾಯಪೀಠದ ಆದೇಶ ಪ್ರಶ್ನಿಸಿ ಮಠದ ಆಡಳಿತಾಧಿಕಾರಿ ಎಸ್.ವಿಶ್ವನಾಥಯ್ಯ ಮತ್ತು ರಾಜ್ಯ ಕಂದಾಯ ಇಲಾಖೆ ಸಲ್ಲಿಸಿದ್ದ ರಿಟ್‌ ಮೇಲ್ಮನವಿಗಳನ್ನು ನ್ಯಾಯಮೂರ್ತಿ ಡಿ.ಕೆ.ಸಿಂಗ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ಪುರಸ್ಕರಿಸಿದ್ದು, ಈ ಕುರಿತಂತೆ ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿ ನೀಡಿದ್ದ ಆದೇಶವನ್ನು ಸಮರ್ಥಿಸಿದೆ. ಈ ಪ್ರಕರಣದಲ್ಲಿ ಸರ್ಕಾರದ ಅಮೂಲ್ಯ ಆಸ್ತಿಯನ್ನು ನುಂಗಲು ಕೆಲವು ಕಾಣದ ಕೈಗಳು ತೆರೆಮರೆಯಲ್ಲಿ ಕೆಲಸ ಮಾಡಿರುವುದು ಕಂಡು ಬರುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿಯ ಪ್ರತಿವಾದಿಗಳು ಸಾಗುವಳಿ ಚೀಟಿಯ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಮತ್ತು ನಕಲಿ ಹಂಚಿಕೆ ದಾಖಲೆ ಹೊಂದಿರುವುದು ವೇದ್ಯವಾಗಿದೆ ಎಂದು ಹೇಳಿದೆ. ನ್ಯಾಯಾಲಯವನ್ನು ವಂಚಿಸುವ ಇಂತಹವರನ್ನು ಸುಲಭಕ್ಕೆ ಕೈಬಿಡಲು ಆಗುವುದಿಲ್ಲವಾದರೂ, ಪ್ರತಿವಾದಿಗಳು ಬಡವರಾಗಿರುವ ಕಾರಣ ಯಾವುದೇ ದಂಡ ಅಥವಾ ಕಠಿಣ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಮಠದ ಪರವಾಗಿ ಪದಾಂಕಿತ ಹಿರಿಯ ವಕೀಲ ಪ್ರಭುಲಿಂಗ ಕೆ.ನಾವದಗಿ ವಾದ ಮಂಡಿಸಿದ್ದರೆ, ಹೈಕೋರ್ಟ್‌ ವಕೀಲೆ ಸಂಜೀವಿನಿ ಪಿ. ನಾವದಗಿ ವಕಾಲತ್ತು ವಹಿಸಿದ್ದರು.

ತುಮಕೂರಿನ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಸಿದ್ದಲಿಂಗ ಸ್ವಾಮೀಜಿ ಅವರು 'ದಾಸೋಹ ಪ್ರಸಾದ ವಿತರಣಾ ಕೇಂದ್ರ' ನಿರ್ಮಿಸುವ ಉದ್ದೇಶಕ್ಕಾಗಿ ಸೂಕ್ತ ಜಮೀನು ಮಂಜೂರು ಮಾಡುವಂತೆ 2007ರ ಏಪ್ರಿಲ್‌ ಮತ್ತು 2008ರ ಜೂನ್‌ನಲ್ಲಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಮನವಿ ಪರಿಗಣಿಸಿದ್ದ ರಾಜ್ಯ ಕಂದಾಯ ಇಲಾಖೆಯು 2009ರ ಮೇನಲ್ಲಿ ಬೆಂಗಳೂರು ಉತ್ತರ ತಾಲ್ಲೂಕಿನ ದಾಸನಪುರ ಹೋಬಳಿ ಕದರನಹಳ್ಳಿಯ ಸರ್ವೇ ನಂಬರ್ 41ರಲ್ಲಿನ 14.25 ಎಕರೆ ಗೋಮಾಳ ಜಮೀನನ್ನು ಮಠಕ್ಕೆ ಮಂಜೂರು ಮಾಡಿ ಆದೇಶಿಸಿತ್ತು. ಇದನ್ನು ಆಕ್ಷೇಪಿಸಿದ್ದ ಕದರನಹಳ್ಳಿಯ ಕೆ.ಎಸ್.ಮಂಜೇಶ್‌ ಸೇರಿದಂತೆ ಒಟ್ಟು ಐವರು, ತಾವು ಆದಿ ಕರ್ನಾಟಕ ಪಂಗಡಕ್ಕೆ ಸೇರಿದವರಾಗಿದ್ದು, ಮಠಕ್ಕೆ ಹಂಚಿಕೆ ಮಾಡಿರುವ ಜಮೀನಿಗೆ ಸಾಗುವಳಿ ಚೀಟಿ ಹೊಂದಿರುವುದರಿಂದ ಸರ್ಕಾರ ಮಠಕ್ಕೆ ಜಮೀನು ಮಂಜೂರು ಮಾಡಿರುವ ಆದೇಶವನ್ನು ರದ್ದುಪಡಿಸಬೇಕು ಎಂದು ತಕರಾರು ಎತ್ತಿದ್ದರು. ಈ ಪ್ರಕರಣ ಮೊದಲು ಕರ್ನಾಟಕ ಮೇಲ್ಮನವಿ ನ್ಯಾಯಮಂಡಳಿಯಲ್ಲಿ ಮಠದ ಪರವಾಗಿ ಇತ್ಯರ್ಥಗೊಂಡಿತ್ತು. ನ್ಯಾಯಮಂಡಳಿಯ ಆದೇಶವನ್ನು ಪ್ರಶ್ನಿಸಿ ಮಂಜೇಶ್‌ ಮತ್ತಿತರರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಈ ಕುರಿತಾದ ರಿಟ್‌ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಇ.ಎಸ್‌.ಇಂದಿರೇಶ್‌ ಅವರಿದ್ದ ಏಕಸದಸ್ಯ ನ್ಯಾಯಪೀಠವು 2025ರ ಜುಲೈನಲ್ಲಿ ನ್ಯಾಯಮಂಡಳಿ ಆದೇಶವನ್ನು ರದ್ದುಗೊಳಿಸಿತ್ತು. ಅಷ್ಟೇ ಅಲ್ಲದೆ, ವಿವಾದಿತ ಜಮೀನಿನಲ್ಲಿ ಮಂಜೇಶ್‌ ಸೇರಿದಂತೆ ಐವರು ಅರ್ಜಿದಾರರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ತಕ್ಷಣವೇ ನಮೂದಿಸಬೇಕು ಎಂದು ಸ್ಥಳೀಯ ತಹಶೀಲ್ದಾರ್‌ ಅವರಿಗೆ ನಿರ್ದೇಶನ ನೀಡಿತ್ತು. ಏಕಸದಸ್ಯ ಪೀಠದ ಈ ಆದೇಶವನ್ನು ಪ್ರಶ್ನಿಸಿ ಮಠ ಮತ್ತು ಸರ್ಕಾರ ವಿಭಾಗೀಯ ನ್ಯಾಯಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದವು, ಇದೀಗ ವಿಭಾಗೀಯ ಪೀಠವು ಸರ್ಕಾರದ ಹಳೆಯ ಆದೇಶವನ್ನು ಎತ್ತಿಹಿಡಿಯುವ ಮೂಲಕ ಮಠದ ಪರ ತೀರ್ಪು ನೀಡಿದೆ.

Category
ಕರಾವಳಿ ತರಂಗಿಣಿ