image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಕೇಂದ್ರದೊಂದಿಗೆ ಸಹಕಾರದ ಹಸ್ತ ಚಾಚಿದ ಸಿಎಂ ಡಿ.ಕೆ. ಶಿವಕುಮಾರ್: ನೀತಿ ಆಯೋಗದ ಸಭೆಯಲ್ಲಿ ಭಾಗಿ..!

ಕೇಂದ್ರದೊಂದಿಗೆ ಸಹಕಾರದ ಹಸ್ತ ಚಾಚಿದ ಸಿಎಂ ಡಿ.ಕೆ. ಶಿವಕುಮಾರ್: ನೀತಿ ಆಯೋಗದ ಸಭೆಯಲ್ಲಿ ಭಾಗಿ..!

ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಹೊಸ ಮತ್ತು ಭಿನ್ನವಾದ ಹೆಜ್ಜೆಯನ್ನಿಟ್ಟಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಧೋರಣೆಯನ್ನು ಪ್ರತಿಭಟಿಸಿ ನೀತಿ ಆಯೋಗದ ಸಭೆಗಳನ್ನು ಬಹಿಷ್ಕರಿಸುತ್ತಿದ್ದ ದಾರಿಗೆ ಭಿನ್ನವಾಗಿ, ಹಾಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಸಭೆಗೆ ಹಾಜರಾಗುವ ಮೂಲಕ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಮುಖಾಮುಖಿ ಚರ್ಚೆ ನಡೆಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಈ ಪ್ರಮುಖ ಸಭೆಯಲ್ಲಿ ಬಹುತೇಕ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಗಣ್ಯ ನಾಯಕರು ಪಾಲ್ಗೊಂಡಿದ್ದು, ಕರ್ನಾಟಕದ ಪರವಾಗಿ ಮೊದಲ ಬಾರಿಗೆ ಡಿ.ಕೆ. ಶಿವಕುಮಾರ್ ಅವರು ನೇತೃತ್ವ ವಹಿಸಿ ದೇಶದ ಆರ್ಥಿಕ ಪ್ರಗತಿಯಲ್ಲಿ ರಾಜ್ಯದ ಪಾತ್ರದ ಕುರಿತು ಮಾಹಿತಿ ಹಂಚಿಕೊಂಡರು.

ಸಭೆಯ ನಂತರ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿರುವುದು ವಿಶೇಷ ಗಮನ ಸೆಳೆದಿದೆ. ಈ ಸೌಜನ್ಯಯುತ ಭೇಟಿಯ ವೇಳೆ ಪ್ರಧಾನಿಯವರಿಗೆ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ ಜಗದ್ಗುರು ಬಸವಣ್ಣನವರ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದರು. ಬಳಿಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಸಂಬಂಧಿಸಿದಂತೆ ಮೂಲಸೌಕರ್ಯ, ಹೂಡಿಕೆ, ನಗರ ಸಾರಿಗೆ, ನೀರಾವರಿ ಹಾಗೂ ನಾವೀನ್ಯತೆಯಂತಹ ಪ್ರಮುಖ ಆದ್ಯತೆಗಳ ಬಗ್ಗೆ ರಚನಾತ್ಮಕ ಚರ್ಚೆ ನಡೆಸಿದರು. ಭಾರತದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ಕರ್ನಾಟಕವು ನಿರಂತರವಾಗಿ ನೀಡುತ್ತಿರುವ ಕೊಡುಗೆಯನ್ನು ಸ್ಮರಿಸಿದ ಅವರು, ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯೊಂದಿಗೆ ಕೇಂದ್ರ ಸರ್ಕಾರದೊಂದಿಗೆ ನಿಕಟವಾಗಿ ಕೆಲಸ ಮಾಡಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಮೋದಿಯವರಿಗೆ ಭರವಸೆ ನೀಡಿದರು.

ನೀತಿ ಆಯೋಗದ ವೇದಿಕೆಯಲ್ಲಿ ರಾಜ್ಯದ ಆಡಳಿತ ತತ್ವಗಳನ್ನು ಮಂಡಿಸಿದ ಮುಖ್ಯಮಂತ್ರಿಗಳು, ಅಭಿವೃದ್ಧಿಯು ಕೇವಲ ಅಂಕಿ-ಅಂಶಗಳಿಗೆ ಸೀಮಿತವಾಗದೆ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಪ್ರತಿಪಾದಿಸಿದರು. ರಾಜ್ಯದ ಗ್ಯಾರಂಟಿ ಯೋಜನೆಗಳು ಮಾನವ ಬಂಡವಾಳದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ವಿವರಿಸಿದ ಅವರು, ಶಾಲಾ ಮಕ್ಕಳಿಗೆ ಉಚಿತ ಬಸ್ ಪಾಸ್ ಒದಗಿಸಿರುವುದನ್ನು ಹಾಗೂ ದುರ್ಬಲ ವರ್ಗಗಳ ಕಲ್ಯಾಣಕ್ಕಾಗಿ ರಾಜ್ಯ ಬಜೆಟ್‌ನಲ್ಲಿ ಶೇಕಡಾ 24 ರಷ್ಟು ಅನುದಾನವನ್ನು ಮೀಸಲಿಟ್ಟಿರುವುದನ್ನು ಹೆಮ್ಮೆಯಿಂದ ಉಲ್ಲೇಖಿಸಿದರು. ಬಡವರಿಗೆ ಉನ್ನತ ಮಟ್ಟದ ಶಿಕ್ಷಣ ನೀಡಲು ಆರಂಭಿಸಿರುವ 'ಕರ್ನಾಟಕ ಪಬ್ಲಿಕ್ ಸ್ಕೂಲ್' ಮತ್ತು ದ್ವಿಭಾಷಾ ನೀತಿಯ ಯಶಸ್ಸನ್ನು ಸಭೆಯ ಗಮನಕ್ಕೆ ತಂದರು. ಇದರೊಂದಿಗೆ ತಂತ್ರಜ್ಞಾನ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿರುವ ಕರ್ನಾಟಕವು ಸೆಮಿಕಂಡಕ್ಟರ್, ಜೈವಿಕ ತಂತ್ರಜ್ಞಾನ ಹಾಗೂ ಏರೋಸ್ಪೇಸ್ ಕ್ಷೇತ್ರಗಳಿಗೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಆಡಳಿತ ಸುಧಾರಣೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯ ಕುರಿತು ಅವರು ವಿವರಣೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕೇಂದ್ರ ಸರ್ಕಾರದ ನೀತಿ ಆಯೋಗದ ಸಭೆಗಳಿಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರನ್ನು ಕಳುಹಿಸಲಾಗಿತ್ತು ಮತ್ತು ನಂತರದ ಸಭೆಗಳನ್ನು ಬಹಿಷ್ಕರಿಸಿ ಕೇವಲ ಪತ್ರಗಳ ಮೂಲಕ ಅನುದಾನಕ್ಕೆ ಒತ್ತಾಯಿಸಲಾಗುತ್ತಿತ್ತು. ಆದರೆ ಪ್ರಸ್ತುತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಂಪ್ರದಾಯವನ್ನು ಬದಿಗೆ ಸರಿಸಿ, ನೇರ ಸಂವಹನದ ಹಾದಿ ಹಿಡಿದಿದ್ದಾರೆ. ಪ್ರಧಾನಿ ಮೋದಿ ಅವರೊಂದಿಗಿನ ವೈಯಕ್ತಿಕ ಮಾತುಕತೆಯ ಸಂದರ್ಭದಲ್ಲಿ, ಕೇಂದ್ರದಿಂದ ರಾಜ್ಯಕ್ಕೆ ಬಿಡುಗಡೆಯಾಗಬೇಕಿರುವ ವಿವಿಧ ಬಾಕಿ ಅನುದಾನಗಳನ್ನು ತಕ್ಷಣವೇ ಬಿಡುಗಡೆ ಮಾಡುವಂತೆ ಮತ್ತು ಕರ್ನಾಟಕಕ್ಕೆ ಹೆಚ್ಚಿನ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಮಂಜೂರು ಮಾಡುವಂತೆ ಅಧಿಕೃತವಾಗಿ ಮನವಿ ಸಲ್ಲಿಸಿದರು.

Category
ಕರಾವಳಿ ತರಂಗಿಣಿ