image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಿಟ್ ಅರ್ಜಿಯಲ್ಲಿ ಹೆಸರು ಕೇಳಿಬರುತ್ತಿದ್ದಂತೆ ನಟ ಪ್ರಕಾಶ್ ರಾಜ್ ಸ್ಪಷ್ಟನೆ

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ರಿಟ್ ಅರ್ಜಿಯಲ್ಲಿ ಹೆಸರು ಕೇಳಿಬರುತ್ತಿದ್ದಂತೆ ನಟ ಪ್ರಕಾಶ್ ರಾಜ್ ಸ್ಪಷ್ಟನೆ

ಬೆಂಗಳೂರು : ರಾಜ್ಯಾದ್ಯಂತ ತೀವ್ರ ಕುತೂಹಲ ಮೂಡಿಸಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ದೊಡ್ಡ ತಿರುವು ಎದುರಾಗಿದೆ. ಪ್ರಕರಣದ ಪ್ರಮುಖ ವ್ಯಕ್ತಿಯಾಗಿದ್ದ ಚಿನ್ನಯ್ಯ ಅಲಿಯಾಸ್ ಚಿನ್ನ ಎಂಬಾತ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದು, ಇಡೀ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ ಎಂದು ಗಂಭೀರ ಆರೋಪ ಮಾಡಿದ್ದಾನೆ. ಧರ್ಮಸ್ಥಳದ ವಿರುದ್ಧ ಸಂಚು ರೂಪಿಸಲು ಕೆಲವರು ನನ್ನನ್ನು ದಾಳವಾಗಿ ಬಳಸಿಕೊಂಡಿದ್ದಾರೆ ಎಂದು ಆತ ಹೇಳಿಕೊಂಡಿದ್ದು, ಈ ಅರ್ಜಿಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್ ಹೆಸರನ್ನು ಉಲ್ಲೇಖಿಸಿರುವುದು ಸಂಚಲನ ಸೃಷ್ಟಿಸಿದೆ. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ವ್ಯಾಪಕವಾಗಿ ಕೇಳಿಬರುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ನಟ ಪ್ರಕಾಶ್ ರಾಜ್ ಅವರು ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ. ತಮ್ಮ ವಿರುದ್ಧ ಹರಡುತ್ತಿರುವುದು ಕೇವಲ ಸುಳ್ಳು ಮತ್ತು ಗಾಳಿ ಸುದ್ದಿ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಪ್ರಕಾಶ್ ರಾಜ್, "ಎಲ್ಲರಿಗೂ ನಮಸ್ಕಾರ.. ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಕೆಲವು ಸುದ್ದಿಗಳು ಚರ್ಚೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದು ಅತ್ಯಂತ ಸೂಕ್ಷ್ಮವಾದ ವಿಷಯವಾಗಿರುವುದರಿಂದ ಮತ್ತು ಕೋಟ್ಯಂತರ ಭಕ್ತರ ನಂಬಿಕೆಗೆ ಸಾಕ್ಷಿಯಾಗಿರುವುದರಿಂದ, ಇಂತಹ ಅನುಮಾನಗಳಿಗೆ ಉತ್ತರಿಸುವುದು ನನ್ನ ಕರ್ತವ್ಯವೂ ಆಗಿದೆ" ಎಂದು ಬರೆದುಕೊಂಡಿದ್ದಾರೆ. ಮುಂದುವರಿದು ಮಾತನಾಡಿದ ಅವರು, "ನಾನು ಸದ್ಯ ಊರಿನಲ್ಲಿ ಇಲ್ಲ, ದೂರದೂರಿನಲ್ಲಿದ್ದೇನೆ. ಇನ್ನೆರಡು ದಿನಗಳಲ್ಲಿ ನಾನೇ ಖುದ್ದಾಗಿ ಬಂದು ಮಾಧ್ಯಮ ಮಿತ್ರರ ಮುಖೇನ ಇದಕ್ಕೆ ಸೂಕ್ತವಾದ ಪ್ರತ್ಯುತ್ತರ ಹಾಗೂ ಸ್ಪಷ್ಟನೆ ನೀಡಲಿದ್ದೇನೆ. ಅಲ್ಲಿಯವರೆಗೆ ಗಾಳಿ ಮಾತುಗಳನ್ನು ಮತ್ತು ಕೆಲವು ದುರುಳರು ಈ ಸುದ್ದಿಗೆ ಕಟ್ಟಲು ಯತ್ನಿಸುತ್ತಿರುವ ರೆಕ್ಕೆಪುಕ್ಕಗಳನ್ನು ದಯವಿಟ್ಟು ಯಾರೂ ನಂಬಬೇಡಿ" ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಚಿನ್ನಯ್ಯ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯಲ್ಲಿ, ಈ ಇಡೀ ವಿವಾದದ ಹಿಂದೆ ನಟ ಪ್ರಕಾಶ್ ರಾಜ್, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಜಯಂತ್ ಹಾಗೂ ಯೂಟ್ಯೂಬರ್‌ಗಳಾದ ಸಮೀರ್ ಎಂ.ಡಿ., ಅಜಯ್ ಮತ್ತು ದಿನೇಶ್ ಸೇರಿದಂತೆ ಹಲವು ಪ್ರಭಾವಿ ವ್ಯಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾನೆ. ಅಲ್ಲದೆ, ಅವರು ಹೇಳಿದಂತೆ ನಡೆದುಕೊಳ್ಳದಿದ್ದರೆ ತನಗೆ ಕೊಲೆ ಬೆದರಿಕೆ ಕೂಡ ಹಾಕಲಾಗಿತ್ತು ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ. ಸದ್ಯ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು, ತೀವ್ರ ಸ್ವರೂಪ ಪಡೆದುಕೊಂಡಿದೆ.

Category
ಕರಾವಳಿ ತರಂಗಿಣಿ