image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ನೆಹರು ಅವರ ಅರ್ಧದಷ್ಟು ಕೆಲಸ ಮೋದಿ ಮಾಡಿದ್ದಾರೆಯೇ : ಪ್ರಿಯಾಂಕ್ ಪ್ರಶ್ನೆ

ನೆಹರು ಅವರ ಅರ್ಧದಷ್ಟು ಕೆಲಸ ಮೋದಿ ಮಾಡಿದ್ದಾರೆಯೇ : ಪ್ರಿಯಾಂಕ್ ಪ್ರಶ್ನೆ

ಬೆಂಗಳೂರು : ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರು ಅವರ ದಿನಗಳ ದಾಖಲೆಯನ್ನು ಮುರಿದರೆ ಸಾಲದು, ನೆಹರು ಅವರು ದೇಶಕ್ಕಾಗಿ ಮಾಡಿರುವ ಅರ್ಧದಷ್ಟು ಕೆಲಸವನ್ನಾದರೂ ಮೋದಿ ಮಾಡಿದ್ದಾರೆಯೇ ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಷ್ಟು ವರ್ಷಗಳ ಸುದೀರ್ಘ ಆಡಳಿತಾವಧಿಯಲ್ಲಿ ಮೋದಿ ಸರ್ಕಾರ ಒಂದು ಇಸ್ರೋ ಸಂಸ್ಥೆಯನ್ನಾಗಲಿ ಅಥವಾ ಒಂದು ಐಐಟಿ ಸಂಸ್ಥೆಯನ್ನಾಗಲಿ ಕಟ್ಟಿದೆಯೇ ಎಂದು ಕಟುವಾಗಿ ಕೇಳಿದ್ದಾರೆ. ನೆಹರು ಅವರು ಅಧಿಕಾರ ವಹಿಸಿಕೊಂಡಾಗ ದೇಶದಲ್ಲಿದ್ದ ಕಠಿಣ ಆರ್ಥಿಕ ಪರಿಸ್ಥಿತಿಗಳು ಹೇಗಿದ್ದವು ಮತ್ತು ಈಗಿನ ಪರಿಸ್ಥಿತಿ ಹೇಗಿದೆ ಎಂಬುದನ್ನು ಒಮ್ಮೆ ತುಲನೆ ಮಾಡಿ ನೋಡಲಿ ಎಂದು ಅವರು ಸವಾಲು ಹಾಕಿದ್ದಾರೆ.

ಇದೇ ವೇಳೆ, ಪಬ್ ಹಾಗೂ ಬಾರ್‌ಗಳಿಗೆ ಅಪ್ರಾಪ್ತ ವಿದ್ಯಾರ್ಥಿಗಳು ಹೋಗುತ್ತಿದ್ದಾರೆ ಎಂಬ ಬಗ್ಗೆ ಪೋಷಕರಿಂದ ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ, ಇನ್ನು ಮುಂದೆ ಪ್ರವೇಶಕ್ಕಾಗಿ ಗುರುತಿನ ಚೀಟಿ ಪರೀಕ್ಷಿಸುವುದನ್ನು ಕಡ್ಡಾಯ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು. ಒಂದು ವೇಳೆ ನಿಯಮ ಉಲ್ಲಂಘಿಸಿ ಇದನ್ನು ನಿಯಂತ್ರಿಸದೇ ಇದ್ದರೆ ಅಂತಹ ಪಬ್ ಮತ್ತು ಬಾರ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇನ್ನು ಬಹುಚರ್ಚಿತ ಬಿಟ್‌ ಕಾಯಿನ್‌ ಪ್ರಕರಣದ ಕುರಿತು ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಈ ಹಗರಣದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಮಾರ್ಮಿಕವಾಗಿ ನುಡಿದರು. ಈ ಪ್ರಕರಣವನ್ನು ನಮ್ಮ ಸರ್ಕಾರ ಅತ್ಯಂತ ಪಾರದರ್ಶಕವಾಗಿ ತನಿಖೆ ಮಾಡಿಸಿದೆ. ಇದರಲ್ಲಿ ಭಾಗಿಯಾದವರು ಹಿಂದಿನ ಮುಖ್ಯಮಂತ್ರಿ ಇರಬಹುದು ಅಥವಾ ಹಾಲಿ ಮುಖ್ಯಮಂತ್ರಿ ಇರಬಹುದು, ತಪ್ಪು ಮಾಡಿದವರನ್ನು ಯಾರೂ ಸಮರ್ಥನೆ ಮಾಡಿಕೊಳ್ಳುತ್ತಿಲ್ಲ ಮತ್ತು ತನಿಖೆಯಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ