image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಎಲ್ ನಿನೋ ಭೀತಿ: ಭಾರತದ ಮುಂಗಾರು ಮಳೆಗೆ ಕಂಟಕವಾಗಲಿದೆಯೇ ಪೆಸಿಫಿಕ್ ಸಾಗರದ ತಾಪಮಾನ?

ಎಲ್ ನಿನೋ ಭೀತಿ: ಭಾರತದ ಮುಂಗಾರು ಮಳೆಗೆ ಕಂಟಕವಾಗಲಿದೆಯೇ ಪೆಸಿಫಿಕ್ ಸಾಗರದ ತಾಪಮಾನ?

ಬೆಂಗಳೂರು : ವಿಶ್ವದ ಹವಾಮಾನ ವ್ಯವಸ್ಥೆಯನ್ನೇ ಏರುಪೇರು ಮಾಡುವ ಭೀಕರ 'ಎಲ್ ನಿನೋ' ಹವಾಮಾನ ಪ್ರಕ್ರಿಯೆಯು ಪೆಸಿಫಿಕ್ ಮಹಾಸಾಗರದಲ್ಲಿ ಅಧಿಕೃತವಾಗಿ ಆರಂಭವಾಗಿದೆ ಎಂದು ಜಪಾನ್ ಹವಾಮಾನ ಇಲಾಖೆ ಘೋಷಿಸಿದೆ. ಈ ಆತಂಕಕಾರಿ ಪ್ರಕಟಣೆಯು ಭಾರತದ ರೈತರು ಹಾಗೂ ಹವಾಮಾನ ತಜ್ಞರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಸಾಮಾನ್ಯವಾಗಿ ಭಾರತದಲ್ಲಿ ಸುಡುವ ಬೇಸಿಗೆ ಮತ್ತು ದುರ್ಬಲ ಮುಂಗಾರು ಮಳೆಗೆ ಕಾರಣವಾಗುವ ಈ ಎಲ್ ನಿನೋ ವಿದ್ಯಮಾನವು, ಈ ಬಾರಿ ದೇಶದ ಕೃಷಿ ವಲಯದ ಮೇಲೆ ನೇರ ಪರಿಣಾಮ ಬೀರಲು ಹೊಂಚು ಹಾಕುತ್ತಿದೆ.

ಪೆಸಿಫಿಕ್ ಮಹಾಸಾಗರದ ಮೇಲ್ಮೈ ಭಾಗದಲ್ಲಿನ ತಾಪಮಾನವು ನಿಗದಿತ ಮಿತಿಗಿಂತ ಗಣನೀಯವಾಗಿ ಹೆಚ್ಚಾಗಿದ್ದು, ವಾತಾವರಣದಲ್ಲೂ ಅದಕ್ಕೆ ಪೂರಕವಾದ ಬದಲಾವಣೆಗಳು ಕಾಣಿಸಿಕೊಂಡಿವೆ ಎಂದು ಜಪಾನ್ ವಿಜ್ಞಾನಿಗಳು ಧೃಡಪಡಿಸಿದ್ದಾರೆ. ಜಾಗತಿಕ ವಿಜ್ಞಾನಿಗಳ ಕಣ್ಣು ಈಗ ಪೆಸಿಫಿಕ್ ಸಾಗರದತ್ತ ನೆಟ್ಟಿದ್ದು, ಮತ್ತೊಂದೆಡೆ ಆಸ್ಟ್ರೇಲಿಯಾ ಹವಾಮಾನ ಇಲಾಖೆಯು ಪರಿಸ್ಥಿತಿ ತೀರಾ ಹತ್ತಿರದಲ್ಲಿದೆ ಎಂದು ಎಚ್ಚರಿಸಿದೆ. ಇನ್ನು ಭಾರತೀಯ ಹವಾಮಾನ ಇಲಾಖೆಯು (IMD) ಈ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಈ ಬಗ್ಗೆ ಇಷ್ಟರಲ್ಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಈ ಎಲ್ ನಿನೋ ಎಫೆಕ್ಟ್‌ನಿಂದಾಗಿ ಈ ಬಾರಿ ಭಾರತದ ಮುಂಗಾರು ಮಳೆ ಸರಾಸರಿಗಿಂತ ತೀರಾ ಕಡಿಮೆಯಾಗುವ ಮುನ್ಸೂಚನೆ ಸಿಕ್ಕಿದೆ. ಹವಾಮಾನ ಇಲಾಖೆಯು ತನ್ನ ಹಳೆಯ ಮುನ್ಸೂಚನೆಯನ್ನು ಬದಲಾಯಿಸಿದ್ದು, ಈ ಬಾರಿ ಶೇಕಡಾ 90 ರಷ್ಟು ಮಾತ್ರ ಮಳೆಯಾಗಬಹುದು ಎಂದು ಅಂದಾಜಿಸಿದೆ. ಅಷ್ಟೇ ಅಲ್ಲದೆ, ದೇಶದಲ್ಲಿ ಶೇಕಡಾ 60 ರಷ್ಟು ಮಳೆ ಕೊರತೆಯಾಗುವ ಆತಂಕಕಾರಿ ಮುನ್ಸೂಚನೆಯನ್ನೂ ನೀಡಲಾಗಿದೆ. ಈಗಾಗಲೇ ಕೇರಳಕ್ಕೆ ಮುಂಗಾರು ಪ್ರವೇಶ ತಡವಾಗಿದ್ದು, ಜೂನ್ ತಿಂಗಳ ಮಳೆ ಪ್ರಮಾಣ ತೀರಾ ಇಳಿಮುಖವಾಗಿದೆ. ಮುಂಬರುವ ಜುಲೈ ಮತ್ತು ಆಗಸ್ಟ್ ತಿಂಗಳ ನಂತರ ಮಳೆ ಮತ್ತಷ್ಟು ಕುಂಠಿತವಾಗುವ ಸಾಧ್ಯತೆ ದಟ್ಟವಾಗಿದೆ.

ಭಾರತದಲ್ಲಿ ಇಂದಿಗೂ ಶೇಕಡಾ 50 ರಷ್ಟು ಕೃಷಿ ಭೂಮಿ ಯಾವುದೇ ಕೃತಕ ನೀರಾವರಿ ಸೌಲಭ್ಯವಿಲ್ಲದೆ ಕೇವಲ ಮುಂಗಾರು ಮಳೆಯನ್ನೇ ನೆಚ್ಚಿಕೊಂಡಿದೆ. ಒಂದು ವೇಳೆ ಮಳೆ ಕೈಕೊಟ್ಟರೆ ಇಡೀ ದೇಶದ ಆಹಾರ ಉತ್ಪಾದನೆಗೆ ಭಾರಿ ಧಕ್ಕೆಯಾಗಲಿದೆ. ಇದರ ಜೊತೆಗೆ ದೇಶದ 91 ಪ್ರಮುಖ ಜಲಾಶಯಗಳು ತುಂಬಬೇಕಾದರೆ ಈ ಮುಂಗಾರು ಮಳೆಯೇ ಪ್ರಮುಖ ಆಧಾರವಾಗಿದೆ. ಜಲಾಶಯಗಳು ತುಂಬದಿದ್ದರೆ ಕೃಷಿ ಮಾತ್ರವಲ್ಲದೆ ಕುಡಿಯುವ ನೀರು ಮತ್ತು ಜಲವಿದ್ಯುತ್ ಉತ್ಪಾದನೆಗೂ ಭಾರಿ ಪೆಟ್ಟು ಬೀಳಲಿದೆ. ಇತ್ತೀಚೆಗಷ್ಟೇ ಜಾಗತಿಕ ಹವಾಮಾನ ಸಂಸ್ಥೆಗಳು ಇತಿಹಾಸದಲ್ಲೇ ಅತ್ಯಂತ ಗರಿಷ್ಠ ತಾಪಮಾನದ ಮೇ ತಿಂಗಳನ್ನು ದಾಖಲಿಸಿದ್ದು, ಈ ಜಾಗತಿಕ ಬಿಸಿಯು ಈಗ ಭಾರತದ ಮುಂಗಾರಿಗೆ ಮುಳುವಾಗುವಂತೆ ಕಾಣುತ್ತಿರುವುದು ಇಡೀ ದೇಶವನ್ನು ಚಿಂತೆಗೀಡು ಮಾಡಿದೆ.

Category
ಕರಾವಳಿ ತರಂಗಿಣಿ