ಬೆಂಗಳೂರು : ರಾಜ್ಯದಲ್ಲಿ ಖಾಲಿಯಿರುವ ಒಟ್ಟು 3,991 ಪೊಲೀಸ್ ಕಾನ್ಸ್‌ಟೇಬಲ್ (ಸಿವಿಲ್) ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿದೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಅವರು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜೂನ್ 10 ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ. ಒಟ್ಟು ಹುದ್ದೆಗಳ ಪೈಕಿ 596 ಹುದ್ದೆಗಳನ್ನು ಕಲ್ಯಾಣ ಕರ್ನಾಟಕ ಭಾಗಕ್ಕೆ ಹಾಗೂ ಉಳಿದ 3,395 ಹುದ್ದೆಗಳನ್ನು ಮಿಕ್ಕ ವೃಂದದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದ್ದು, ಅರ್ಜಿ ಸಲ್ಲಿಸಲು ಜುಲೈ 3 ಕೊನೆಯ ದಿನಾಂಕವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಅರ್ಜಿ ಸಲ್ಲಿಸುವ ಪರಿಶಿಷ್ಟ ಜಾತಿಯ (SC) ಅಭ್ಯರ್ಥಿಗಳು ಒಳಮೀಸಲಾತಿ ನಿಯಮಗಳ ಪ್ರಕಾರ ತಮಗೆ ಅನ್ವಯವಾಗುವ ಎಸ್‌ಸಿ-ಎ, ಎಸ್‌ಸಿ-ಬಿ ಅಥವಾ ಎಸ್‌ಸಿ-ಸಿ ಜಾತಿ ಪ್ರಮಾಣ ಪತ್ರಗಳ ಆರ್‌ಡಿ (RD) ಸಂಖ್ಯೆಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸಬೇಕಾಗುತ್ತದೆ. ಇದರೊಂದಿಗೆ ಗ್ರಾಮೀಣ ಹಾಗೂ ಕನ್ನಡ ಮಾಧ್ಯಮ ವ್ಯಾಸಂಗದಂತಹ ವಿಶೇಷ ಮೀಸಲಾತಿ ಕೋಟಾಗಳನ್ನು ಪಡೆಯಲು ಇಚ್ಛಿಸುವ ಅಭ್ಯರ್ಥಿಗಳು, ಸರ್ಕಾರ ನಿಗದಿಪಡಿಸಿರುವ ಅಗತ್ಯ ನಮೂನೆಗಳಲ್ಲಿಯೇ ಪ್ರಮಾಣ ಪತ್ರಗಳನ್ನು ಸಿದ್ಧವಾಗಿಟ್ಟುಕೊಂಡು ಸಲ್ಲಿಸಬೇಕಿದೆ.
ಸಾಮಾನ್ಯ ವರ್ಗದ (GM) ಅಭ್ಯರ್ಥಿಗಳು ಒಂದು ವೇಳೆ ಗ್ರಾಮೀಣ ಕೋಟಾದ ಅಡಿಯಲ್ಲಿ ಮೀಸಲಾತಿ ಕ್ಲೇಮ್ ಮಾಡಬೇಕಾದರೆ, ಅವರು ಕಡ್ಡಾಯವಾಗಿ ನಾನ್ ಕ್ರೀಮಿಲೇಯರ್ ಪ್ರಮಾಣ ಪತ್ರವನ್ನು ಹೊಂದಿರಬೇಕು ಎಂದು ಪ್ರಾಧಿಕಾರ ತಿಳಿಸಿದೆ. ಕೊನೆಯದಾಗಿ, ಅಭ್ಯರ್ಥಿಗಳು ಅರ್ಜಿಯೊಂದಿಗೆ ಅಪ್ಲೋಡ್ ಮಾಡುವ ತಮ್ಮ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದ ಗಾತ್ರವು ಕಡ್ಡಾಯವಾಗಿ 50KB ಒಳಗಿರಬೇಕು ಎಂದು ಹೆಚ್.ಪ್ರಸನ್ನ ಅವರು ಪ್ರಕಟಣೆಯಲ್ಲಿ ನೆನಪಿಸಿದ್ದಾರೆ.