image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಆರ್​ಎಸ್ಎಸ್ ಮುಟ್ಟಲು ನಿಮ್ಮ ಅಪ್ಪನಿಂದಲೇ ಆಗಿಲ್ಲ, ಬೆಂಕಿ ಹಚ್ಚುವ ಕೆಲಸ ಮಾಡಬೇಡಿ: ಪ್ರಿಯಾಂಕ್ ಖರ್ಗೆ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಆರ್​ಎಸ್ಎಸ್ ಮುಟ್ಟಲು ನಿಮ್ಮ ಅಪ್ಪನಿಂದಲೇ ಆಗಿಲ್ಲ, ಬೆಂಕಿ ಹಚ್ಚುವ ಕೆಲಸ ಮಾಡಬೇಡಿ: ಪ್ರಿಯಾಂಕ್ ಖರ್ಗೆ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಬೆಂಗಳೂರು : ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್ಎಸ್) ಕುರಿತು ಸಚಿವ ಪ್ರಿಯಾಂಕ್ ಖರ್ಗೆ ನೀಡಿರುವ ಹೇಳಿಕೆಗೆ ಮಾಜಿ ಸಚಿವ ಸಿ.ಟಿ.ರವಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ ನೆಹರು ಅವರೇ ಆರ್​ಎಸ್ಎಸ್ ಅನ್ನು ಹತ್ತಿಕ್ಕುವುದಾಗಿ ಹೇಳಿದ್ದರು, ಆದರೆ ಪ್ರಿಯಾಂಕ್ ಖರ್ಗೆ ಅವರ ತಂದೆಯವರಿಂದಲೇ (ಮಲ್ಲಿಕಾರ್ಜುನ ಖರ್ಗೆ) ಏನೂ ಮಾಡಲು ಸಾಧ್ಯವಾಗಿಲ್ಲ ಎಂದು ತಿರುಗೇಟು ನೀಡಿದರು. ರಾಜಕೀಯ ಪ್ರೇರಿತವಲ್ಲದ ಆರ್​ಎಸ್ಎಸ್, ಯಾವುದೇ ನೋಂದಣಿ ಮಾಡಿಕೊಳ್ಳಲು ವ್ಯಾವಹಾರಿಕ ಸಂಘಟನೆಯೂ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಬೇಡಿ, ಆ ಬೆಂಕಿ ನಿಮ್ಮನ್ನೇ ಸುಡುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂದು ಆರೋಪಿಸಿದ ಸಿ.ಟಿ.ರವಿ, ಅಕ್ರಮ ಬಾಂಗ್ಲಾದೇಶಿಗರ ನುಸುಳುವಿಕೆ, ಮಾದಕ ದ್ರವ್ಯ ಜಾಲ, ಮಹಿಳೆಯರ ನಾಪತ್ತೆ ಪ್ರಕರಣಗಳು ಮತ್ತು ಬಾಂಬ್ ತಯಾರಿಕಾ ಕೃತ್ಯಗಳ ಕಡೆಗೆ ಸರ್ಕಾರ ಗಮನ ಹರಿಸಬೇಕು ಎಂದು ಒತ್ತಾಯಿಸಿದರು. ನೀವು ಗೃಹ ಸಚಿವರಂತೆ ವರ್ತಿಸಬೇಕೇ ಹೊರತು ಗೂಂಡಾಗಳ ತರಹ ಅಲ್ಲ ಎಂದು ಕಿಡಿಕಾರಿದ ಅವರು, ದಬ್ಬಾಳಿಕೆ ಮುಂದುವರಿದರೆ ಕರ್ನಾಟಕದ ಪರಿಸ್ಥಿತಿಯೂ ಪಶ್ಚಿಮ ಬಂಗಾಳದಂತಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಇದೇ ವೇಳೆ ಪ್ರಧಾನಿ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ನಡುವಿನ ಬಾಂಧವ್ಯ ಸಹಜ ಪ್ರೀತಿ ಮತ್ತು ವಾತ್ಸಲ್ಯದಿಂದ ಕೂಡಿದ್ದಾಗಿದ್ದು, ಇತಿಹಾಸದಲ್ಲಿ ಪಿ.ವಿ. ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಅವರನ್ನು ಕಾಂಗ್ರೆಸ್ ನಡೆಸಿಕೊಂಡ ರೀತಿಯನ್ನು ಜನ ಮರೆತಿಲ್ಲ ಎಂದು ಟೀಕಿಸಿದರು.

ಸರ್ಕಾರದಲ್ಲಿನ ಭ್ರಷ್ಟಾಚಾರದ ಕುರಿತು ವಾಗ್ದಾಳಿ ನಡೆಸಿದ ಅವರು, ಈ ಹಿಂದೆ 40% ಕಮಿಷನ್ ಆರೋಪ ಮಾಡಿದ್ದ ಕಾಂಗ್ರೆಸ್ ಸರ್ಕಾರದ ವಿರುದ್ಧ ಈಗ ಗುತ್ತಿಗೆದಾರರೇ 60% ಕಮಿಷನ್ ಆರೋಪ ಮಾಡುತ್ತಿದ್ದಾರೆ ಎಂದು ದೂರಿದರು. ಮುಖ್ಯಮಂತ್ರಿಗಳು ತಕ್ಷಣವೇ ಖಾತೆ ಹಂಚಿಕೆ ಗೊಂದಲವನ್ನು ಬಗೆಹರಿಸಿ ಆಡಳಿತದ ಕಡೆ ಗಮನ ಕೊಡಬೇಕು ಎಂದು ಸಲಹೆ ನೀಡಿದ ಸಿ.ಟಿ.ರವಿ, ಭ್ರಷ್ಟಾಚಾರವನ್ನು ತಡೆದು ಜನರ ಕೆಲಸ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರೇ ಈ ಸರ್ಕಾರದ ನಟ್ಟು-ಬೋಲ್ಟ್ ಟೈಟ್ ಮಾಡಲಿದ್ದಾರೆ ಎಂದು ವ್ಯಂಗ್ಯವಾಡಿದರು. ಇನ್ನು ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಮೂರನೇ ಅಭ್ಯರ್ಥಿ ಗೆಲುವಿಗೆ ಬಿಜೆಪಿಯ ಹೆಚ್ಚುವರಿ ಮತಗಳನ್ನು ಜೆಡಿಎಸ್​ಗೆ ನೀಡುವುದಾಗಿ ಮತ್ತು ಜೆಡಿಎಸ್ ತಂತ್ರಗಾರಿಕೆ ಯಶಸ್ವಿಯಾದರೆ ಜಯ ನಿಶ್ಚಿತ ಎಂದರು.

Category
ಕರಾವಳಿ ತರಂಗಿಣಿ