ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನ ಗಡಿಭಾಗದಲ್ಲಿ ಭಾರಿ ಪ್ರಮಾಣದ ಸ್ಫೋಟಕಗಳು ಪತ್ತೆಯಾಗಿದ್ದು, ಸ್ಥಳೀಯ ಜನರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ. ಅವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ಜನ ಪ್ರದೇಶದಲ್ಲಿ ನೂರಕ್ಕೂ ಹೆಚ್ಚು ಜಿಲೆಟಿನ್ ಕಡ್ಡಿಗಳು ಹಾಗೂ ವೈಯರ್‌ಗಳು ಪತ್ತೆಯಾಗಿವೆ. ರಸ್ತೆ ಬದಿಯಲ್ಲಿ ಸ್ಫೋಟಕಗಳು ಇರುವ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಅವಲಹಳ್ಳಿ ಪೊಲೀಸರು, ಎಲ್ಲಾ ಜಿಲೆಟಿನ್ ಕಡ್ಡಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಭಾಗದಲ್ಲಿ ಕಲ್ಲು ಕ್ವಾರಿಗಳು ಹಾಗೂ ಬಂಡೆಗಳನ್ನು ಒಡೆಯುವ ಉದ್ಯಮಗಳು ಹೆಚ್ಚಾಗಿ ಇರುವುದರಿಂದ, ಅದಕ್ಕಾಗಿ ಯಾರಾದರೂ ಅಕ್ರಮವಾಗಿ ಇವುಗಳನ್ನು ತಂದು ಸಂಗ್ರಹಿಸಿಟ್ಟಿದ್ದರೇ ಎಂಬ ಶಂಕೆ ವ್ಯಕ್ತವಾಗಿದೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸ್ಫೋಟಕಗಳನ್ನು ತಂದಿಟ್ಟ ಕಿಡಿಗೇಡಿಗಳು ಯಾರು ಎಂಬ ಬಗ್ಗೆ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಬೆಂಗಳೂರು ಗಡಿಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಅಕ್ರಮವಾಗಿ ಸ್ಫೋಟಕಗಳನ್ನು ಸಂಗ್ರಹಿಸಿಟ್ಟವರು ಯಾರು? ಎಂಬ ಪ್ರಶ್ನೆ ಈಗ ಮೂಡಿದೆ. ಸಾಮಾನ್ಯವಾಗಿ ಈ ಭಾಗದಲ್ಲಿ ಕಲ್ಲು ಕ್ವಾರಿ ಉದ್ಯಮಕ್ಕಾಗಿ ಅಕ್ರಮವಾಗಿ ಸ್ಫೋಟಕಗಳನ್ನು ತರಿಸುವ ಸಾಧ್ಯತೆ ಇರುತ್ತದೆ. ಆದರೆ, ರಾಜಧಾನಿಯಲ್ಲಿ ಯಾವುದಾದರೂ ದೊಡ್ಡ ದುಷ್ಕೃತ್ಯ ಅಥವಾ ವಿಧ್ವಂಸಕ ಕೃತ್ಯ ಎಸಗಲು ಮಾಸ್ಟರ್‌ಮೈಂಡ್‌ಗಳು ಹೊಂಚು ಹಾಕಿದ್ದಾರಾ? ಎಂಬ ಶಂಕೆ ಮೂಡಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲೂ ಇದೇ ರೀತಿ ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ಪ್ರಸ್ತುತ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಗಂಭೀರ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇಷ್ಟು ದೊಡ್ಡ ಮಟ್ಟದ ಸ್ಫೋಟಕಗಳನ್ನು ಇಲ್ಲಿಗೆ ತಂದ ಕಿಡಿಗೇಡಿಗಳು ಯಾರು? ಇದರ ಹಿಂದಿನ ಅಸಲಿ ಉದ್ದೇಶವೇನು? ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಜಾಲ ಬೀಸಿದ್ದಾರೆ. ಎಫ್‌ಎಸ್‌ಎಲ್ ಹಾಗೂ ಬಾಂಬ್ ಪತ್ತೆ ದಳದ ಸಿಬ್ಬಂದಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.