image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಾರಿಗೆ ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್ ಭಾಗ್ಯ: ಸಚಿವ ಬೈರತಿ ಸುರೇಶ್ ಮಹತ್ವದ ಘೋಷಣೆ

ಸಾರಿಗೆ ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್ ಭಾಗ್ಯ: ಸಚಿವ ಬೈರತಿ ಸುರೇಶ್ ಮಹತ್ವದ ಘೋಷಣೆ

ಬೆಂಗಳೂರು : ರಾಜ್ಯದ ಮೂರು ಕೋಟಿಗೂ ಅಧಿಕ ಸಾರಿಗೆ ಪ್ರಯಾಣಿಕರಿಗೆ ಸ್ಮಾರ್ಟ್‌ ಕಾರ್ಡ್ ವಿತರಿಸುವ ಬೃಹತ್ ಯೋಜನೆಯನ್ನು ರಾಜ್ಯ ಸರ್ಕಾರ ಹಮ್ಮಿಕೊಂಡಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಪ್ರಕಟಿಸಿದ್ದಾರೆ. ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯಲ್ಲಿ ಸೋಮವಾರ ನಾಲ್ಕೂ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ 'ಶಕ್ತಿ' ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮತ್ತು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ವಿಶೇಷ 'ಶಕ್ತಿ ಸ್ಮಾರ್ಟ್‌ ಕಾರ್ಡ್‌'ಗಳನ್ನು ವಿತರಿಸಲಾಗುವುದು. ಇದೇ ಮಾದರಿಯಲ್ಲಿ ಪುರುಷರಿಗೂ ಸಹ ರೀಚಾರ್ಜ್ ಮಾಡಬಹುದಾದ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಲು ಉದ್ದೇಶಿಸಲಾಗಿದೆ. ಮಹಿಳೆಯರ ಕಾರ್ಡ್ ಸಂಪೂರ್ಣ ಉಚಿತ ಪ್ರಯಾಣಕ್ಕೆ ಬಳಕೆಯಾದರೆ, ಪುರುಷರ ಕಾರ್ಡ್‌ಗಳಿಗೆ ಹಣ ತುಂಬಿಸಿ (ರೀಚಾರ್ಜ್ ಮಾಡಿ) ಅದರ ಮೂಲಕವೇ ಟಿಕೆಟ್ ದರ ಪಾವತಿಸುವ ಆಧುನಿಕ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈ ಮೂಲಕ ಒಟ್ಟಾರೆಯಾಗಿ ರಾಜ್ಯದ ಸುಮಾರು 3 ಕೋಟಿ ಜನರಿಗೆ ಸ್ಮಾರ್ಟ್ ಕಾರ್ಡ್ ತಲುಪಿಸುವ ಗುರಿ ಹೊಂದಲಾಗಿದೆ ಎಂದು ಅವರು ಸಭೆಯ ವಿವರಗಳನ್ನು ಹಂಚಿಕೊಂಡರು.

ಸಾರ್ವಜನಿಕರಿಗೆ ಇನ್ನು ಉನ್ನತ ಮಟ್ಟದ ಬಸ್ ಸೇವೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಅನುದಾನದಡಿ 1,000 ಹೊಸ ಬಸ್‌ಗಳನ್ನು ಖರೀದಿಸಲಾಗುವುದು. ಇದರ ಜೊತೆಗೆ ಕೇಂದ್ರ ಸರ್ಕಾರದ ಅನುದಾನವನ್ನು ಬಳಸಿಕೊಂಡು 4,000 ಪರಿಸರಸ್ನೇಹಿ ಎಲೆಕ್ಟ್ರಿಕ್ ಬಸ್‌ಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಇವುಗಳನ್ನು ಹಂತಹಂತವಾಗಿ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು. ಇದೇ ವೇಳೆ ಮಹಿಳೆಯರು ಮತ್ತು ಹೆಣ್ಣುಮಕ್ಕಳ ಸುರಕ್ಷತೆಗೆ ಸರ್ಕಾರ ಮೊದಲ ಆದ್ಯತೆ ನೀಡಿದ್ದು, ವಾಣಿಜ್ಯ ಕಾರುಗಳು, ಟ್ಯಾಕ್ಸಿಗಳು ಸೇರಿದಂತೆ ಸಾರ್ವಜನಿಕ ಸೇವೆ ನೀಡುವ ಎಲ್ಲಾ ವಾಹನಗಳಿಗೆ 'ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ವ್ಯವಸ್ಥೆ' (VLTS) ಅಳವಡಿಕೆಯನ್ನು ಕಡ್ಡಾಯಗೊಳಿಸಿ, ಆ ಪ್ರಕ್ರಿಯೆಗೆ ವೇಗ ನೀಡಲು ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಲಾಗಿದೆ. ಸದ್ಯ ರಾಜ್ಯದಲ್ಲಿ ಕೇವಲ 1 ಲಕ್ಷ ವಾಹನಗಳು ಮಾತ್ರ ಈ ಸುರಕ್ಷತಾ ವ್ಯವಸ್ಥೆಯನ್ನು ಹೊಂದಿದ್ದು, ಇನ್ನುಳಿದ 5 ಲಕ್ಷಕ್ಕೂ ಅಧಿಕ ವಾಹನಗಳು ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಕಡ್ಡಾಯವಾಗಿ ವಿಎಲ್‌ಟಿಎಸ್‌ ಅಳವಡಿಸಿಕೊಳ್ಳಬೇಕು ಎಂದು ಗಡುವು ವಿಧಿಸಿರುವುದಾಗಿ ಸಚಿವ ಬೈರತಿ ಸುರೇಶ್ ತಿಳಿಸಿದರು.

Category
ಕರಾವಳಿ ತರಂಗಿಣಿ