ಬೆಂಗಳೂರು : ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ನೆಪೋಟಿಸಂ (ಬಂಧು-ಬಳಗ ಪ್ರೀತಿ) ಕುರಿತಾದ ಚರ್ಚೆ ಜೋರಾಗಿ ಕೇಳಿಬರುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಳಿಯ ಸಂಚಿತ್ ಸಂಜೀವ್ 'ಮ್ಯಾಂಗೋ ಪಚ್ಚ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ ಬೆನ್ನಲ್ಲೇ ಈ ವಿವಾದ ಮುನ್ನೆಲೆಗೆ ಬಂದಿತ್ತು. ಈ ಹಿಂದೆ ಸುದೀಪ್ ಅವರಿಗೆ ನೆಪೋಟಿಸಂ ಬಗ್ಗೆ ಪ್ರಶ್ನೆ ಎದುರಾದಾಗ, "ಇದೇ ಪ್ರಶ್ನೆಯನ್ನು ಶಿವರಾಜ್ಕುಮಾರ್ಗೆ ಏಕೆ ಕೇಳಲ್ಲ" ಎಂದು ಅವರು ನೇರವಾಗಿ ಪ್ರಶ್ನಿಸಿದ್ದರು. ಇದೀಗ ಈ ವಿಚಾರವಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ ತಮ್ಮದೇ ಶೈಲಿಯಲ್ಲಿ ಪತ್ರಕರ್ತರಿಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.
ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಸಿನಿಮಾದ ವಿಶೇಷ ಪ್ರದರ್ಶನ ವೀಕ್ಷಿಸಿದ ಬಳಿಕ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಶಿವಣ್ಣ ಮಾತನಾಡುತ್ತಿದ್ದರು. ಈ ವೇಳೆ ಪತ್ರಕರ್ತರೊಬ್ಬರು ಸುದೀಪ್ ಅವರ ಹಳೆಯ ಹೇಳಿಕೆಯನ್ನು ಉಲ್ಲೇಖಿಸಿ ಪ್ರಶ್ನೆ ಕೇಳಿದರು. ಇದಕ್ಕೆ ತೀವ್ರ ಆಕ್ಷೇಪ್ ವ್ಯಕ್ತಪಡಿಸಿದ ಶಿವಣ್ಣ, "ನೀವು ಆ ಪ್ರಶ್ನೆಯನ್ನು ಏಕೆ ಕೇಳಿದ್ರಿ? ನಾನು ಆ ವಿಡಿಯೋ ನೋಡಿದ್ದೇನೆ. ಆದರೆ ನೀವು ಈ ರೀತಿಯ ಪ್ರಶ್ನೆಯನ್ನು ಕೇಳುತ್ತಿರುವುದೇ ತಪ್ಪು. ಅದು ಕೇಳಬೇಕಾದ ಪ್ರಶ್ನೆಯೇ ಅಲ್ಲ" ಎಂದು ಪತ್ರಕರ್ತರನ್ನು ತರಾಟೆಗೆ ತೆಗೆದುಕೊಂಡರು.
ಚಿತ್ರರಂಗಕ್ಕೆ ಯಾರು ಬರಬೇಕು, ಯಾರು ಬರಬಾರದು ಎಂಬ ನಿಯಮವಿಲ್ಲ ಎಂದು ಸ್ಪಷ್ಟಪಡಿಸಿದ ಶಿವಣ್ಣ, "ಚಿತ್ರರಂಗದಲ್ಲಿ ಕೇವಲ ಇವರ ಮಕ್ಕಳು ಅಥವಾ ಅವರ ಮಕ್ಕಳೇ ಬಂದು ಕನಸು ಕಾಣಬೇಕು ಎಂದೇನೂ ಇಲ್ಲ. ಪ್ರತಿಯೊಬ್ಬ ಮನುಷ್ಯನಿಗೂ, ಪ್ರತಿಯೊಬ್ಬ ಮಗುವಿಗೂ ಕನಸು ಕಾಣುವ ಹಕ್ಕಿದೆ. ಚಿತ್ರರಂಗಕ್ಕೆ ಯಾರ ಮಕ್ಕಳು ಬೇಕಾದರೂ ಬರಬಹುದು, ನೀವು ಕೂಡ ಬರಬಹುದು. ಎಲ್ಲರಿಗೂ ಇಲ್ಲಿ ಅವಕಾಶವಿದೆ" ಎಂದು ಹೇಳುವ ಮೂಲಕ ನೆಪೋಟಿಸಂ ವಾದಕ್ಕೆ ತಕ್ಕ ಉತ್ತರ ನೀಡಿದರು.
ಇನ್ನು ಶಿವಣ್ಣ ಪತ್ರಕರ್ತನಿಗೆ ಖಡಕ್ ಆಗಿ ಉತ್ತರಿಸುತ್ತಿದ್ದಾಗ ಅವರ ಪಕ್ಕದಲ್ಲೇ ನಿಂತಿದ್ದ ನಟ ಕಿಚ್ಚ ಸುದೀಪ್ ಮುಗುಳ್ನಗುತ್ತಿದ್ದರು. ಶಿವಣ್ಣ ಮಾತು ಮುಗಿಸುತ್ತಿದ್ದಂತೆ ಮೈಕ್ ಕೈಗೆತ್ತಿಕೊಂಡ ಸುದೀಪ್, "ಗ್ರೇಟ್‌ನೆಸ್ ಅಂದ್ರೆ ಏನು ಗೊತ್ತಾ? ಈ ಪ್ರಶ್ನೆಯನ್ನು ಶಿವಣ್ಣನಿಗೆ ಕೇಳಿದ್ರಲ್ಲ, ಅದಕ್ಕೆ ಅವರು ಕೊಟ್ಟ ಉತ್ತರವೇ ಅವರ ಗ್ರೇಟ್‌ನೆಸ್" ಎಂದು ಶಿವಣ್ಣ ಅವರ ದೊಡ್ಡಗುಣವನ್ನು ಮುಕ್ತಕಂಠದಿಂದ ಕೊಂಡಾಡಿದರು. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ನೆಪೋಟಿಸಂ ಹೆಸರಿನಲ್ಲಿ ಅನಗತ್ಯ ವಿವಾದ ಸೃಷ್ಟಿಸಲು ಯತ್ನಿಸಿದವರಿಗೆ ಇಬ್ಬರು ಸ್ಟಾರ್ ನಟರು ಒಟ್ಟಾಗಿಯೇ ತಿರುಗೇಟು ನೀಡಿದ್ದಾರೆ.