ಬೆಂಗಳೂರು : ರಾಜ್ಯದಲ್ಲಿ ಬಹುನಿರೀಕ್ಷಿತ ನೈಋತ್ಯ ಮುಂಗಾರು ಮಾರುತಗಳು ಯಶಸ್ವಿಯಾಗಿ ಪ್ರವೇಶಿಸಿದ್ದು, ಮುಂದಿನ ಏಳು ದಿನಗಳ ಕಾಲ ರಾಜ್ಯಾದ್ಯಂತ ವ್ಯಾಪಕ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ಮುನ್ಸೂಚನೆ ನೀಡಿದೆ. ಹವಾಮಾನ ಇಲಾಖೆಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಎನ್. ಪುವಿಯರಸನ್ ಅವರು ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ನೈಋತ್ಯ ಮುಂಗಾರು ಈಗ ದೇವಗಢ, ಕೊಪ್ಪಳ, ಅನಂತಪುರ ಮತ್ತು ಚೆನ್ನೈ ಮಾರ್ಗವಾಗಿ ಮುನ್ನಡೆಯುತ್ತಿದೆ. ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಮುಂಗಾರು ಸಮಗ್ರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ ಮತ್ತು ತೆಲಂಗಾಣದ ಹಲವು ಭಾಗಗಳಿಗೆ ವ್ಯಾಪಿಸಲು ವಾತಾವರಣ ಪೂರಕವಾಗಿದೆ.
ಪ್ರಸ್ತುತ ದಕ್ಷಿಣ ಕೊಂಕಣ ಕರಾವಳಿಯ ಅರಬ್ಬೀ ಸಮುದ್ರದಲ್ಲಿ 5.8 ಕಿಮೀ ಎತ್ತರದಲ್ಲಿ ಮೇಲ್ಮೈ ಸುಳಿಗಾಳಿ ಸೃಷ್ಟಿಯಾಗಿದೆ. ಇದರೊಂದಿಗೆ ಕರಾವಳಿ ಕರ್ನಾಟಕದಿಂದ ಕರಾವಳಿ ಆಂಧ್ರಪ್ರದೇಶದವರೆಗೆ ಬಲವಾದ ವಾಯುಭಾರ ಕುಸಿತದ ರೇಖೆ ಗೋಚರಿಸುತ್ತಿರುವುದರಿಂದ ಮಳೆಯ ತೀವ್ರತೆ ಗಣನೀಯವಾಗಿ ಹೆಚ್ಚಾಗಲಿದೆ. ವಿಶೇಷವಾಗಿ ಜೂನ್ 8 ರಿಂದ ಜೂನ್ 10 ರ ಅವಧಿಯಲ್ಲಿ ಕರಾವಳಿ ಹಾಗೂ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಅತ್ಯಂತ ಭೀಕರ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ತೀವ್ರ ಮುನ್ನೆಚ್ಚರಿಕೆ ನೀಡಿದೆ. ಅತಿ ಭೀಕರ ಮಳೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹವಾಮಾನ ಇಲಾಖೆಯು ರಾಜ್ಯದ ವಿವಿಧ ಜಿಲ್ಲೆಗಳಿಗೆ ಈಗಾಗಲೇ ರೆಡ್ ಮತ್ತು ಆರೆಂಜ್ ಅಲರ್ಟ್ ಘೋಷಿಸಿದೆ.