image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ರಾಜ್ಯದ ಆರ್ಥಿಕ ದುಸ್ಥಿತಿ ಮತ್ತು ಕಾಂಗ್ರೆಸ್ ಒಳಗಿನ ಅಸಮಾಧಾನ ಸರ್ಕಾರಕ್ಕೆ ಸವಾಲಾಗಲಿದೆ: ಶಾಸಕ ಡಾ. ಸಿ.ಟಿ. ರವಿ ಆತಂಕ

ರಾಜ್ಯದ ಆರ್ಥಿಕ ದುಸ್ಥಿತಿ ಮತ್ತು ಕಾಂಗ್ರೆಸ್ ಒಳಗಿನ ಅಸಮಾಧಾನ ಸರ್ಕಾರಕ್ಕೆ ಸವಾಲಾಗಲಿದೆ: ಶಾಸಕ ಡಾ. ಸಿ.ಟಿ. ರವಿ ಆತಂಕ

ಚಿಕ್ಕಮಗಳೂರು : ರಾಜ್ಯ ಸರ್ಕಾರದ ಮುಂದೆ ಸದ್ಯಕ್ಕೆ ಆರ್ಥಿಕ ಪರಿಸ್ಥಿತಿ, ಸಚಿವ ಸಂಪುಟದೊಳಗಿನ ಅಸಮಾಧಾನ ಹಾಗೂ ಅಭಿವೃದ್ಧಿಯ ಆದ್ಯತೆಗಳಂತಹ ಹಲವು ಪ್ರಮುಖ ಸವಾಲುಗಳಿವೆ ಎಂದು ಕರ್ನಾಟಕ ವಿಧಾನಪರಿಷತ್ ಸದಸ್ಯರಾದ ಡಾ. ಸಿ.ಟಿ. ರವಿ ಅವರು ತಿಳಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಆಡಳಿತ ಅನುಭವ ಮತ್ತು ಕಾರ್ಯಕ್ಷಮತೆಯನ್ನು ಸಮರ್ಪಕವಾಗಿ ಬಳಸಿಕೊಂಡು ರಾಜ್ಯದ ಅಭಿವೃದ್ಧಿಗೆ ಆದ್ಯತೆ ನೀಡುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ ಎಂದು ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಅಭಿಪ್ರಾಯಪಟ್ಟರು.

ರಾಜ್ಯದಲ್ಲಿ ಇನ್ನೂ ಪೂರ್ಣ ಪ್ರಮಾಣದ ಸಚಿವ ಸಂಪುಟ ರಚನೆಯಾಗಿಲ್ಲ. ಆದರೆ ಈಗಾಗಲೇ ಕೆಲ ಹಿರಿಯ ಸಚಿವರಲ್ಲಿ ಅಸಮಾಧಾನ ವ್ಯಕ್ತವಾಗುತ್ತಿರುವುದು ಮುಂದಿನ ದಿನಗಳಲ್ಲಿ ಮತ್ತಷ್ಟು ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಯಿದೆ ಎಂದು ಅವರು ಎಚ್ಚರಿಸಿದರು. ಕೆಲವರು ತಮಗೆ ನೀಡಿರುವ ಹೆಚ್ಚುವರಿ ಜವಾಬ್ದಾರಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದರೆ, ಮತ್ತೊಬ್ಬರು ತಮ್ಮ ಹಿರಿತನಕ್ಕೆ ತಕ್ಕ ಖಾತೆ ಸಿಕ್ಕಿಲ್ಲ ಎಂದು ಅಸಮಾಧಾನ ಹೊರಹಾಕುತ್ತಿದ್ದಾರೆ. ಹೀಗಾಗಿ ಸಂಪುಟ ಪೂರ್ಣಗೊಂಡ ಬಳಿಕ ಈ ಅಸಮಾಧಾನ ಯಾವ ರೂಪ ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ ಎಂದರು.

ಸರ್ಕಾರದ ಹಣಕಾಸು ಸ್ಥಿತಿಯ ಬಗ್ಗೆ ಮಾತನಾಡಿದ ಸಿ.ಟಿ. ರವಿ ಅವರು, ಹಿಂದಿನ ಬಜೆಟ್‌ನಲ್ಲೇ 2026-27ನೇ ಸಾಲಿನಲ್ಲಿ ಸುಮಾರು ₹1.32 ಲಕ್ಷ ಕೋಟಿ ಹೊಸ ಸಾಲದ ಅಗತ್ಯವಿದೆ ಎಂದು ಸರ್ಕಾರವೇ ಅಂದಾಜು ಮಾಡಿತ್ತು ಎಂದು ನೆನಪಿಸಿದರು. ಇದರ ನಡುವೆ ಹೊಸ ಘೋಷಣೆಗಳು ಮತ್ತು ಉಚಿತ ಯೋಜನೆಗಳು ಸರ್ಕಾರದ ಮೇಲೆ ಹೆಚ್ಚುವರಿ ಆರ್ಥಿಕ ಒತ್ತಡವನ್ನು ಸೃಷ್ಟಿಸಲಿವೆ. ವೆಚ್ಚವನ್ನು ಸರಿದೂಗಿಸಲು ಅಗತ್ಯ ಆದಾಯ ಮೂಲಗಳು ಸರ್ಕಾರದ ಬಳಿ ಇಲ್ಲದ ಕಾರಣ, ಸರ್ಕಾರಕ್ಕೆ ಕೇವಲ ಎರಡು ಆಯ್ಕೆಗಳು ಮಾತ್ರ ಇರುತ್ತವೆ. ಒಂದೋ ಹೆಚ್ಚು ಸಾಲ ಮಾಡುವುದು, ಇಲ್ಲವೇ ತೆರಿಗೆ ಹೆಚ್ಚಿಸುವುದು. ಇವೆರಡೂ ಅಂತಿಮವಾಗಿ ಜನರ ಮೇಲೆಯೇ ನೇರ ಪರಿಣಾಮ ಬೀರುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ನಾವು ಎಂದಿಗೂ ಕೆಟ್ಟದ್ದನ್ನು ಬಯಸುವುದಿಲ್ಲ, ಅವರ ನೇತೃತ್ವದಲ್ಲಿ ಉತ್ತಮ ಆಡಳಿತ ಬರಲಿ ಎಂಬುದೇ ನಮ್ಮ ಆಶಯವಾಗಿದೆ ಎಂದು ಸ್ಪಷ್ಟಪಡಿಸಿದ ಅವರು, ರಾಜ್ಯದ ಆದಾಯ ಹೆಚ್ಚಲಿ, ಸಾಲದ ಹೊರೆಯಿಂದ ರಾಜ್ಯ ಹೊರಬರಲಿ, ಬಡತನ ನಿರ್ಮೂಲನೆ ಆಗಲಿ ಹಾಗೂ ಕರ್ನಾಟಕ ಸಮೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು. ರಾಜ್ಯದ ಆದಾಯವನ್ನು ಹೆಚ್ಚಿಸುವ ಮೂಲಕ ಅಭಿವೃದ್ಧಿಗೆ ವೇಗ ನೀಡುವ ಸಾಮರ್ಥ್ಯ ಮುಖ್ಯಮಂತ್ರಿ ಅವರಿಗಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಅವರು, ಆ ಸಾಮರ್ಥ್ಯವನ್ನು ಜನಹಿತಕ್ಕಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಭಾವ ಕಾಂಗ್ರೆಸ್‌ನಲ್ಲಿ ಮುಂದುವರಿಯಲಿದೆ ಎಂದು ಹೇಳಿದ ಸಿ.ಟಿ. ರವಿ, ಮಾಸ್ ಲೀಡರ್‌ಗಳ ಪ್ರಭಾವ ಅವರು ಅಧಿಕಾರದಲ್ಲಿರಲಿ ಅಥವಾ ಇರದಿರಲಿ ಮುಂದುವರಿಯುತ್ತದೆ. ಸಿದ್ದರಾಮಯ್ಯ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿ ರಾಜಕಾರಣ ಮಾಡುವುದು ಸುಲಭದ ಸಂಗತಿಯಲ್ಲ. ಹೀಗಾಗಿ ಸರ್ಕಾರದೊಳಗಿನ ಸಮತೋಲನ ಕಾಯ್ದುಕೊಳ್ಳುವುದು ಹಾಗೂ ಆಡಳಿತದ ಸವಾಲುಗಳನ್ನು ಎದುರಿಸುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮುಂದಿರುವ ದೊಡ್ಡ ಪರೀಕ್ಷೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ತಮಿಳುನಾಡು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ರಾಜಕೀಯ ನಿರ್ಧಾರದ ಕುರಿತು ಇದೇ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಸಿ.ಟಿ. ರವಿ ಅವರು, ಕೆ. ಅಣ್ಣಾಮಲೈ ಅವರು ತಮಿಳುನಾಡಿನ ಹಿತಾಸಕ್ತಿ ಹಾಗೂ ರಾಷ್ಟ್ರೀಯ ಸುರಕ್ಷತೆಗೆ ವಿರುದ್ಧವಾಗಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ ಎಂಬ ನಂಬಿಕೆ ತನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅಣ್ಣಾಮಲೈ ಅವರು ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಹೊಸ ರಾಜಕೀಯ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದು, ಅವರ ಸಮರ್ಪಿತ ಜೀವನಕ್ಕೆ ಅದು ಸಾರ್ಥಕತೆ ತಂದುಕೊಡಲಿ ಎಂದು ಹಾರೈಸಿದರು. ಒಬ್ಬ ವ್ಯಕ್ತಿಯ ಜೀವನದ ಸಾರ್ಥಕತೆ ಆತನ ಸಮರ್ಪಿತ ಬದುಕಿನಲ್ಲಿ ಅಡಗಿದೆ, ಅವರು ಆಯ್ಕೆ ಮಾಡಿಕೊಂಡಿರುವ ದಾರಿಯ ಮೂಲಕ ತಮಿಳುನಾಡಿಗೂ ಹಾಗೂ ರಾಷ್ಟ್ರಕ್ಕೂ ಒಳ್ಳೆಯದಾಗಲಿ ಎಂದರು.

ಅಣ್ಣಾಮಲೈ ಅವರ ನಿರ್ಧಾರದಿಂದ ಬಿಜೆಪಿಗೆ ರಾಜಕೀಯ ನಷ್ಟವಾಗಲಿದೆ ಎಂಬ ವಿಶ್ಲೇಷಣೆಯನ್ನು ಒಪ್ಪದ ಸಿ.ಟಿ. ರವಿ, ತಮಿಳುನಾಡಿನಲ್ಲಿ ಬಿಜೆಪಿ ಇನ್ನೂ ಕೇಂದ್ರ ರಾಜಕೀಯ ಶಕ್ತಿಯಾಗಿ ಬೆಳೆಯುವ ಹಂತಕ್ಕೆ ಬಂದಿಲ್ಲ ಎಂದು ತಿಳಿಸಿದರು. ನಮಗೆ ರಾಜಕೀಯವಾಗಿ ದೊಡ್ಡ ಲಾಭ ಸಿಕ್ಕಿಲ್ಲದಿರುವಾಗ ನಷ್ಟದ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಅಣ್ಣಾಮಲೈ ಒಳ್ಳೆಯ ವ್ಯಕ್ತಿಯಾಗಿದ್ದು, ಅವರೊಂದಿಗಿನ ಸ್ನೇಹ ಸಂಬಂಧ ಮುಂದುವರಿಯಲಿದೆ. ದೇಶಭಕ್ತಿ ಮತ್ತು ತಮಿಳು ಗೌರವವನ್ನು ಉಳಿಸಿಕೊಂಡು ರಾಜಕಾರಣ ಮಾಡುತ್ತಿದ್ದರೆ ಅವರು ಯಾವ ವೇದಿಕೆಯಲ್ಲಿ ಕೆಲಸ ಮಾಡಿದರೂ ಒಳ್ಳೆಯದೇ. ಅವರು ಬಿಜೆಪಿಯಲ್ಲಿ ಇದ್ದರೆ ಸಂತೋಷ, ಇಲ್ಲವೇ ಬೇರೆ ದಾರಿಯಲ್ಲಿ ಜನಹಿತಕ್ಕಾಗಿ ಕೆಲಸ ಮಾಡಿದರೂ ಅದಕ್ಕೂ ನಮ್ಮ ಶುಭ ಹಾರೈಕೆ ಇರುತ್ತದೆ ಎಂದು ತಮ್ಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ