image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ವೈಮಾನಿಕ ದಾಳಿ ಎದುರಿಸುವ ರೋಮಾಂಚಕ ಅಣಕು ಪ್ರದರ್ಶನ

ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ವೈಮಾನಿಕ ದಾಳಿ ಎದುರಿಸುವ ರೋಮಾಂಚಕ ಅಣಕು ಪ್ರದರ್ಶನ

ಶಿವಮೊಗ್ಗ : ದೇಶದ ರಕ್ಷಣಾ ಸಿದ್ಧತೆಯನ್ನು ಬಲಪಡಿಸುವ ಹಾಗೂ ತುರ್ತು ಪರಿಸ್ಥಿತಿಗಳನ್ನು ಎದುರಿಸುವ ನಿಟ್ಟಿನಲ್ಲಿ ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಶುಕ್ರವಾರ ಸಂಜೆ ಬೃಹತ್ 'ಮಾಕ್ ಡ್ರಿಲ್' (ಅಣಕು ಪ್ರದರ್ಶನ) ನಡೆಸಲಾಯಿತು. ವೈಮಾನಿಕ ದಾಳಿ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲು ಕೇಂದ್ರ ಗೃಹ ಸಚಿವಾಲಯದ ಸೂಚನೆಯಂತೆ ಈ ರಾಷ್ಟ್ರಮಟ್ಟದ ನಾಗರಿಕ ರಕ್ಷಣೆ ಮತ್ತು ಕರಾಳ ರಾತ್ರಿ ಅಣಕು ಪ್ರದರ್ಶನವನ್ನು ಜಿಲ್ಲಾ ಮಟ್ಟದಲ್ಲಿ ಯಶಸ್ವಿಯಾಗಿ ಆಯೋಜಿಸಲಾಗಿತ್ತು.

ಅಣಕು ಪ್ರದರ್ಶನದ ಆರಂಭದಲ್ಲಿ ಬಹುಮಹಡಿ ಕಟ್ಟಡ ಮತ್ತು ಶಾಲಾ ಸಮುಚ್ಚಯಕ್ಕೆ ಶತ್ರುಗಳ ವಾಯುದಾಳಿಯ ಮುನ್ಸೂಚನೆ ನೀಡುವಂತೆ ‘ಕೋಡ್ ರೆಡ್’ ಎಚ್ಚರಿಕೆಯ 2 ನಿಮಿಷಗಳ ಸೈರನ್ ಮೊಳಗಿಸಲಾಯಿತು. ಸೈರನ್ ಕೇಳುತ್ತಿದ್ದಂತೆ ಸಾರ್ವಜನಿಕರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ರವಾನಿಸುವ ಪ್ರಕ್ರಿಯೆ ಆರಂಭವಾಯಿತು. ದಾಳಿಯಿಂದ ಕಟ್ಟಡಗಳು ಧರಾಶಾಯಿಯಾದ ಸನ್ನಿವೇಶವನ್ನು ಸೃಷ್ಟಿಸಿ, ಅವಶೇಷಗಳಡಿ ಸಿಲುಕಿದವರನ್ನು ಹುಡುಕಿ ರಕ್ಷಿಸುವುದು, ಗಾಯಾಳುಗಳಿಗೆ ತಾತ್ಕಾಲಿಕ ವೈದ್ಯಕೀಯ ಶಿಬಿರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆ ಹಾಗೂ ನಿರಾಶ್ರಿತರ ಕೇಂದ್ರಕ್ಕೆ ಕಳುಹಿಸುವ ಕಾರ್ಯಾಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಯಿತು. ಇದೇ ವೇಳೆ ಸ್ಥಳ ಪರಿಶೀಲನೆ ನಡೆಸಿದಾಗ ಪತ್ತೆಯಾದ ಐಇಡಿ (ಬಾಂಬ್) ಅನ್ನು ಬಾಂಬ್ ಕಿಲ್ಲರ್ ಮೂಲಕ ಸುರಕ್ಷಿತ ಪ್ರದೇಶಕ್ಕೆ ತಂದು ನಿಷ್ಕ್ರಿಯಗೊಳಿಸುವ ಬಿಡಿಎಸ್ ಅಧಿಕಾರಿಗಳು ಮತ್ತು ಸೋಕೋ ತಂಡದ ರೋಮಾಂಚಕ ಕಾರ್ಯಾಚರಣೆಯ ಪ್ರಾತ್ಯಕ್ಷಿಕೆಯೂ ನಡೆಯಿತು.

ಇದರೊಂದಿಗೆ ಸಶಸ್ತ್ರ ದುಷ್ಕರ್ಮಿಗಳು ಪ್ರಯಾಣಿಕರನ್ನು ಬಸ್ಸಿನಲ್ಲಿ ಒತ್ತೆಯಾಳಾಗಿ ಇರಿಸಿಕೊಂಡಿರುವ ಮತ್ತೊಂದು ತುರ್ತು ಸನ್ನಿವೇಶವನ್ನು ಯಶಸ್ವಿಯಾಗಿ ನಿಭಾಯಿಸಲಾಯಿತು. ಪೊಲೀಸ್ ನಿಯಂತ್ರಣ ಕೊಠಡಿಗೆ ಸಂದೇಶ ತಲುಪಿದ ಕೆಲವೇ ನಿಮಿಷಗಳಲ್ಲಿ ಹಿರಿಯ ಅಧಿಕಾರಿಗಳ ನೇತೃತ್ವದ ಕಮಾಂಡೋ ಮಾದರಿಯ ಶಸ್ತ್ರಸಜ್ಜಿತ ಪಡೆ ಮತ್ತು ಶ್ವಾನ ದಳ ಸ್ಥಳಕ್ಕೆ ಧಾವಿಸಿತು. ಇಡೀ ಆವರಣವನ್ನು ಸುತ್ತುವರಿದ ಭದ್ರತಾ ಸಿಬ್ಬಂದಿ, ದುಷ್ಕರ್ಮಿಗಳೊಂದಿಗೆ ಸಂಧಾನ ನಡೆಸುವ ನಾಟಕೀಯ ಸನ್ನಿವೇಶದ ನಡುವೆಯೇ ಅತ್ಯಂತ ಜಾಣ್ಮೆಯಿಂದ ಬಸ್ಸಿನ ಹಿಂಬಾಗಿಲು ಮತ್ತು ಕಿಟಕಿಗಳ ಮೂಲಕ ಒಳನುಗ್ಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದರು. ಕೆಲವೇ ನಿಮಿಷಗಳಲ್ಲಿ ದುಷ್ಕರ್ಮಿಗಳನ್ನು ಸೆರೆಹಿಡಿದು, ಪ್ರಯಾಣಿಕರನ್ನು ಯಾವುದೇ ಅಪಾಯವಿಲ್ಲದೆ ರಕ್ಷಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು, ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು, ಇಲಾಖೆಗಳ ಸಮನ್ವಯತೆ ಮತ್ತು ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ವಿಪತ್ತು ಎದುರಾದಾಗ ಇಲಾಖೆಗಳ ಸನ್ನದ್ಧತೆಯನ್ನು ಪರೀಕ್ಷಿಸಲು ಈ ನೈಜ ಮಾದರಿಯ ಪ್ರದರ್ಶನ ಸಹಕಾರಿಯಾಗಿದೆ ಎಂದರು. ಈ ಅಣಕು ಪ್ರದರ್ಶನದಲ್ಲಿ ಪೊಲೀಸ್, ಗೃಹರಕ್ಷಕ ದಳ, ಎನ್‌ಸಿಸಿ ಸೇರಿದಂತೆ ಸುಮಾರು 300ಕ್ಕೂ ಹೆಚ್ಚು ಸಿಬ್ಬಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳದ ಕಮಾಂಡೆಂಟ್ ಚೇತನ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ಹಾಗೂ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ