ಮೈಸೂರು : ಮೈಸೂರು ದಸರಾದಲ್ಲಿ ಅ.6 ಮತ್ತು 7ರಂದು ಅತಿ ದೊಡ್ಡ ಡ್ರೋನ್ ಪ್ರದರ್ಶನ ನಡೆಸಲಾಗಿತ್ತು. ಈ ಕಾರ್ಯಕ್ರಮವೂ ಅಭೂತಪೂರ್ವ ಯಶಸ್ಸು ಪಡೆದುಕೊಂಡಿದ್ದು, ಈ ಕಾರ್ಯಕ್ರಮದ ವೇಳೆ ಖಾಸಗಿ ಸಂಸ್ಥೆಗಳು ಹಾಗೂ ವ್ಯಕ್ತಿಗಳು ಡ್ರೋನ್ ಗಳನ್ನು ಹಾರಿಸಿ ಪ್ರದರ್ಶನದ ದೃಶ್ಯಾವಳಿಗಳನ್ನು ಸೆರೆಹಿಡಿಯುತ್ತಿರುವುದು ಹಾಗೂ ಡ್ರೋನ್ ಗಳ ಮೂಲಕ ಚಿತ್ರೀಕರಿಸಿದ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾದ್ಯಮದಲ್ಲಿ ಹರಿ ಬಿಡುತ್ತಿರುವುದು ಕಂಡು ಬಂದಿದೆ.
ಸಂಬಂಧಿಸಿದ ಪ್ರಾಧಿಕಾರದಿಂದ ಯಾವುದೇ ಅನುಮತಿ ಪಡೆಯದೇ ಡ್ರೋನ್ಗಳನ್ನು ಹಾರಿಸಿ ದೃಶ್ಯ ಚಿತ್ರೀಕರಿಸುವುದು ಮತ್ತು ಡ್ರೋನ್ ಗಳ ಮೂಲಕ ಚಿತ್ರೀಕರಿಸಿದ ದೃಶ್ಯದ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿ ಬಿಡುವುದು ಕಂಡುಬಂದಲ್ಲಿ ಅವರುಗಳ ವಿರುದ್ಧ ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣ ದಾಖಲಿಸಿ, ಕಠಿಣ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್) ತಿಳಿಸಿದೆ.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ (ಸೆಸ್ಕ್)ದ ವತಿಯಿಂದ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ ಡ್ರೋನ್ ಶೋ ಅದ್ಬುತವಾಗಿ ನೋಡುಗರ ಕಣ್ಮನ ಸೆಳೆಯಿತು. ಆದರೆ, ಈ ಡ್ರೋನ್ ಶೋವನ್ನು ಕೆಲವು ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುತ್ತಿರುವುದು ಬೆಳಕಿಗೆ ಬಂದಿದ್ದು, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೆಸ್ಕ್ ಎಚ್ಚರಿಕೆ ನೀಡಿದೆ.