image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಿರಿ: ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಹೈಕಮಾಂಡ್‌ ಕಟ್ಟುನಿಟ್ಟಿನ ಸೂಚನೆ

ಸಾಮೂಹಿಕ ನಾಯಕತ್ವದಲ್ಲಿ ಮುನ್ನಡೆಯಿರಿ: ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಹೈಕಮಾಂಡ್‌ ಕಟ್ಟುನಿಟ್ಟಿನ ಸೂಚನೆ

ಬೆಂಗಳೂರು : ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್‌ ಅವರಿಗೆ ಕಾಂಗ್ರೆಸ್‌ ಹೈಕಮಾಂಡ್‌ ಅತ್ಯಂತ ಮಹತ್ವದ ಹಾಗೂ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ. ಆಡಳಿತದಲ್ಲಿ ಯಾವುದೇ ಕಾರಣಕ್ಕೂ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳದೇ, ಎಲ್ಲ ನಾಯಕರನ್ನು ಒಟ್ಟಿಗೆ ಕೊಂಡೊಯ್ಯುವ ‘ಸಾಮೂಹಿಕ ನಾಯಕತ್ವ’ದ ಸೂತ್ರವನ್ನು ಪಾಲಿಸುವಂತೆ ವರಿಷ್ಠರು ಹಿತಬೋಧನೆ ಮಾಡಿದ್ದಾರೆ ಎನ್ನಲಾಗಿದೆ.

ಡಿ.ಕೆ.ಶಿವಕುಮಾರ್‌ ಅವರು ಸಂಘಟನೆ ಮತ್ತು ಆಡಳಿತದ ಕೆಲವು ವಿಚಾರಗಳಲ್ಲಿ ಮುನ್ನುಗ್ಗುವ ಹಾಗೂ ತಮಗೆ ಸರಿ ಎನಿಸಿದ್ದನ್ನು ಏಕಪಕ್ಷೀಯವಾಗಿ ಜಾರಿಗೆ ತರುವ ಪ್ರವೃತ್ತಿ ಹೊಂದಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿವೆ. ಈ ಹಿಂದೆ ಪಕ್ಷದ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಪ್ರಮುಖ ಮತ್ತು ಪ್ರಭಾವಿ ನಾಯಕರನ್ನೇ ಸಾಂಸ್ಥಿಕ ಚಟುವಟಿಕೆಗಳಿಂದ ದೂರವಿಟ್ಟ ಉದಾಹರಣೆಗಳೂ ಇವೆ. ಜೊತೆಗೆ, ರಾಜಕೀಯ ವಿರೋಧಿಗಳ ತಂತ್ರಗಳಿಗೆ ತಕ್ಕ ಪ್ರತ್ಯುತ್ತರ ನೀಡುವಲ್ಲಿ ಅವರು ಎತ್ತಿದ ಕೈಯಾಗಿದ್ದರೂ, ಮುಖ್ಯಮಂತ್ರಿಯಾದ ಬಳಿಕ ಪಕ್ಷದ ಹಿತದೃಷ್ಟಿಯಿಂದ ಇಂತಹ ಧೋರಣೆಗಳನ್ನು ನಿಯಂತ್ರಿಸಿಕೊಳ್ಳಬೇಕು ಎಂದು ವರಿಷ್ಠರು ತಿಳಿಸಿದ್ದಾರೆ. ಇಂತಹ ಏಕಪಕ್ಷೀಯ ನಿರ್ಧಾರಗಳು ಮುಂಬರುವ ಚುನಾವಣೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬ ಆತಂಕ ಹೈಕಮಾಂಡ್‌ಗೆ ಇರುವುದರಿಂದ, ಸೂಕ್ಷ್ಮ ಹಾಗೂ ನಯ-ನಾಜೂಕಿನ ನಿರ್ಧಾರಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಮೂಲಗಳು ವರದಿ ಮಾಡಿವೆ.

ವಿಶೇಷವಾಗಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪೂರ್ಣ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುವಂತೆ ಹೈಕಮಾಂಡ್‌ ತಾಕೀತು ಮಾಡಿದೆ. ರಾಜ್ಯದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಭರ್ಜರಿ ಗೆಲುವಿಗೆ ಸಿದ್ದರಾಮಯ್ಯ ಅವರ ಜನಪ್ರಿಯತೆ ಹಾಗೂ ಕೊಡುಗೆ ಅಪಾರವಾಗಿದ್ದು, ಅದನ್ನು ಕಡೆಗಣಿಸುವಂತಿಲ್ಲ. ಮುಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲೂ ಅವರ ಮಾರ್ಗದರ್ಶನ ಮತ್ತು ನಾಯಕತ್ವ ಪಕ್ಷಕ್ಕೆ ಅತಿ ಪ್ರಮುಖವಾಗಿದೆ. ಹೀಗಾಗಿ ಯಾವುದೇ ಹಂತದಲ್ಲೂ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರ ಹಿತರಕ್ಷಣೆಗೆ ಧಕ್ಕೆಯಾಗದಂತೆ ಎಚ್ಚರಿಕೆ ವಹಿಸಲು ಹಿರಿಯ ನಾಯಕರು ಸ್ಪಷ್ಟಪಡಿಸಿದ್ದಾರೆ.

ಪ್ರಸ್ತುತ ಡಿ.ಕೆ.ಶಿವಕುಮಾರ್‌ ಸಂಪುಟಕ್ಕೆ 13 ಮಂದಿ ಸಚಿವರ ಸೇರ್ಪಡೆಯಾಗಿದ್ದು, ಇನ್ನು 20 ಸಚಿವ ಸ್ಥಾನಗಳು ಖಾಲಿ ಇವೆ. ಇದರೊಂದಿಗೆ 60ಕ್ಕೂ ಹೆಚ್ಚು ನಿಗಮ ಮಂಡಳಿಗಳ ಹುದ್ದೆಗಳ ನೇಮಕಾತಿ ಬಾಕಿ ಉಳಿದಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಯಾಗಿ ಹಿಂದುಳಿದ ಈಡಿಗ ಸಮುದಾಯದ ಬಿ.ಕೆ.ಹರಿಪ್ರಸಾದ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಲಾಗಿದ್ದು, ರಾಜ್ಯದಲ್ಲಿ ‘ಅಹಿಂದ’ ನಾಯಕತ್ವದ ಬಲವರ್ಧನೆಗೆ ಸಿದ್ದರಾಮಯ್ಯ ಅವರ ಉಪಸ್ಥಿತಿ ಅನಿವಾರ್ಯ ಎಂದು ಭಾವಿಸಲಾಗಿದೆ. ಬಿಬಿಎಂಪಿ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸೇರಿದಂತೆ ಮುಂಬರುವ ನೇಮಕಾತಿಗಳಲ್ಲಿ ಬಿ.ಕೆ.ಹರಿಪ್ರಸಾದ್‌, ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ವೀರಶೈವ ಲಿಂಗಾಯತ ಸಮುದಾಯದ ಹಿರಿಯ ನಾಯಕ ಈಶ್ವರ್ ಖಂಡ್ರೆ ಸೇರಿದಂತೆ ಎಲ್ಲಾ ಪ್ರಮುಖರೊಂದಿಗೆ ಸಮನ್ವಯತೆಯಿಂದ ಕೆಲಸ ಮಾಡುವಂತೆ ಹೈಕಮಾಂಡ್ ನಿರ್ದೇಶನ ನೀಡಿದೆ.

ಅಧಿಕಾರ ಸ್ವೀಕರಿಸುವ ಮುನ್ನ ನಾಯಕರಲ್ಲಿ ಯಾವ ರೀತಿಯ ಸೌಹಾರ್ದತೆ ಇತ್ತೋ, ಅದನ್ನೇ ಮುಂದೆಯೂ ಕಾಯ್ದುಕೊಳ್ಳಬೇಕು. ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಅಸಮಾಧಾನಗಳು ಸಹಜವಾಗಿದ್ದು, ಶಾಸಕರೊಂದಿಗೆ ನಿರಂತರ ವ್ಯಕ್ತಿಗತ ಸಂಪರ್ಕದಲ್ಲಿರುವ ಮೂಲಕ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಸಚಿವರಿಗೆ ಅವರವರ ಇಲಾಖೆಗಳಲ್ಲಿ ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಮುಕ್ತ ಅವಕಾಶ ನೀಡಬೇಕು ಮತ್ತು ಅನಪೇಕ್ಷಣೀಯ ಹಸ್ತಕ್ಷೇಪಗಳನ್ನು ತಡೆಯಬೇಕು ಎಂದು ವರಿಷ್ಠರು ಹೇಳಿದ್ದಾರೆ. 2028ರ ವಿಧಾನಸಭೆ ಹಾಗೂ 2029ರ ಲೋಕಸಭಾ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು, ರಾಜ್ಯದ ಆರ್ಥಿಕ ಪರಿಸ್ಥಿತಿಯ ಮೇಲೆ ನಿಗಾ ಇರಿಸಿ, ಜನಾಭಿಪ್ರಾಯಕ್ಕೆ ಮನ್ನಣೆ ನೀಡುವ ಜನಸ್ನೇಹಿ ಆಡಳಿತ ನೀಡುವಂತೆ ಹಿರಿಯ ನಾಯಕರು ಹೊಸ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ.

Category
ಕರಾವಳಿ ತರಂಗಿಣಿ