ಬೆಂಗಳೂರು : ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ತಮ್ಮನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಮೂರನೇ ಬಾರಿಗೆ ಗಡಿಪಾರು ಮಾಡಿ ಹೊರಡಿಸಲಾಗಿದ್ದ ಆದೇಶವನ್ನು ಪ್ರಶ್ನಿಸಿ ಹಿಂದೂ ಜಾಗರಣ ವೇದಿಕೆಯ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ತಿಮರೋಡಿ ಅವರನ್ನು ಗಡಿಪಾರು ಮಾಡಿ 2026ರ ಮಾರ್ಚ್ 13ರಂದು ಪುತ್ತೂರು ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್‌ನ ಏಕಸದಸ್ಯ ನ್ಯಾಯಪೀಠವು ಈ ಹಿಂದೆ ಎತ್ತಿಹಿಡಿದಿತ್ತು. ಅಲ್ಲದೆ, ಗಡಿಪಾರು ಆದೇಶದ ವಿರುದ್ಧ ಸರ್ಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ಏಪ್ರಿಲ್ 30ರ ಆದೇಶದಲ್ಲಿ ಸ್ಪಷ್ಟಪಡಿಸಿತ್ತು. ಆದಾಗ್ಯೂ, ತಿಮರೋಡಿ ಅವರು ಸರ್ಕಾರದ ಮುಂದೆ ಹೋಗದೆ ನೇರವಾಗಿ ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಈ ಮೇಲ್ಮನವಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು, ಏಕಸದಸ್ಯ ನ್ಯಾಯಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ ಅರ್ಜಿಯನ್ನು ವಜಾಗೊಳಿಸಿತು. ಇದೇ ವೇಳೆ, ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸುವವರೆಗೆ ಗಡಿಪಾರು ಆದೇಶ ಜಾರಿಗೊಳಿಸದಂತೆ ಏಕಸದಸ್ಯ ನ್ಯಾಯಪೀಠ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಬೇಕು ಎಂದು ತಿಮರೋಡಿ ಪರ ವಕೀಲರು ಕೋರಿದ ಮನವಿಯನ್ನೂ ಸಹ ವಿಭಾಗೀಯ ನ್ಯಾಯಪೀಠವು ತಳ್ಳಿಹಾಕಿದೆ.
ಸರ್ಕಾರದ ಪರ ವಕೀಲರು ನ್ಯಾಯಾಲಯದಲ್ಲಿ ಗಡಿಪಾರು ಆದೇಶವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ಅರ್ಜಿದಾರರು 1997ರಿಂದಲೂ ಹಲವು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ತಿಳಿಸಿದರು. ವಿದ್ಯಾರ್ಥಿನಿ ಸೌಜನ್ಯಾ ಸಾವಿನ ಪ್ರಕರಣಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿಕೊಳ್ಳುತ್ತಾ ಅವರು ಸ್ಥಳೀಯವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ನಿರಂತರವಾಗಿ ಧಕ್ಕೆ ಉಂಟು ಮಾಡುತ್ತಿದ್ದಾರೆ. ಇದರಿಂದಾಗಿ ಬೆಳ್ತಂಗಡಿ ಪೊಲೀಸರು ತಮ್ಮ ದೈನಂದಿನ ಕರ್ತವ್ಯಗಳಿಗಿಂತ ಹೆಚ್ಚಾಗಿ ಈ ವ್ಯಕ್ತಿಯಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆಗಳ ನಿವಾರಣೆಯಲ್ಲೇ ಸಮಯ ಕಳೆಯುವಂತಾಗಿದೆ. ಸದ್ಯ ತಿಮರೋಡಿ ವಿರುದ್ಧ 26 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಮತ್ತೂ ಐದು ಹೊಸ ಎಫ್ಐಆರ್‌ಗಳು ದಾಖಲಾಗಿವೆ ಎಂದು ಸರ್ಕಾರಿ ಅಭಿಯೋಜಕರು ನ್ಯಾಯಪೀಠದ ಗಮನಕ್ಕೆ ತಂದರು. ಹೈಕೋರ್ಟ್‌ನ ಈ ಆದೇಶದಿಂದಾಗಿ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ತಕ್ಷಣದ ಕಾನೂನು ಹಿನ್ನಡೆಯಾಗಿದೆ.