ಬೆಂಗಳೂರು : ರಾಜ್ಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳ ಸಮರ್ಪಕ ನಿರ್ವಹಣೆ ಹಾಗೂ ಅನಿವಾಸಿ ಭಾರತೀಯರ (ಎನ್ಆರ್‌ಐ) ಸಮಸ್ಯೆಗಳಿಗೆ ಸ್ಪಂದಿಸಲು ಮತ್ತು ಹೂಡಿಕೆಗೆ ಪೂರಕ ವಾತಾವರಣ ನಿರ್ಮಿಸಲು ಎರಡು ಪ್ರತ್ಯೇಕ ಸಚಿವಾಲಯಗಳನ್ನು ರಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಇಂದು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳ ಮಹತ್ವದ ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಪ್ರಕಟಿಸಿದರು.
ಹೊಸ ಸರ್ಕಾರ ಯಾವ ದಿಕ್ಕಿನಲ್ಲಿ ಕೆಲಸ ಮಾಡಲಿದೆ ಎಂಬ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಸ್ಪಷ್ಟ ಸಂದೇಶ ನೀಡಲಾಗಿದೆ ಎಂದ ಮುಖ್ಯಮಂತ್ರಿಗಳು, ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು ಮತ್ತು ದಿನನಿತ್ಯ ನಡೆಯುವ ವಿವಿಧ ಪ್ರತಿಭಟನೆಗಳ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಲು 'ಕುಂದುಕೊರತೆ ನಿರ್ವಹಣಾ ಸಚಿವಾಲಯ' ಅತ್ಯಗತ್ಯವಾಗಿದೆ ಎಂದು ಸಮರ್ಥಿಸಿಕೊಂಡರು. ಅದೇ ರೀತಿ, ವಿದೇಶಗಳಲ್ಲಿರುವ ಕನ್ನಡಿಗರು ರಾಜ್ಯದಲ್ಲಿ ಹೂಡಿಕೆ ಮಾಡಲು ಎದುರಿಸುತ್ತಿರುವ ಸಮಸ್ಯೆಗಳ ನಿವಾರಣೆ ಹಾಗೂ ಸಮನ್ವಯತೆಗಾಗಿ ಪ್ರತ್ಯೇಕ 'ಎನ್‌ಆರ್‌ಐ ಸಚಿವಾಲಯ' ಸ್ಥಾಪಿಸಲಾಗುವುದು ಎಂದರು.
ರಾಜ್ಯದಲ್ಲಿ ಲಭ್ಯವಿರುವ ಸುಮಾರು 8,000 ಕೋಟಿ ರೂ.ಗಳ ಸಿಎಸ್‌ಆರ್ (ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯ ಬಳಕೆಯ ಕುರಿತು ಸರ್ಕಾರಕ್ಕೆ ಸಂಪೂರ್ಣ ಮಾಹಿತಿ ಇರಬೇಕು ಎಂದು ಸಿಎಂ ಸೂಚಿಸಿದರು. ಈ ನಿಧಿಯನ್ನು ಬಳಸಿಕೊಂಡು ಗ್ರಾಮೀಣ ಭಾಗದ ಪ್ರತಿ ಮೂರು ಪಂಚಾಯತಿಗಳಿಗೆ ಒಂದರಂತೆ ಸುಸಜ್ಜಿತ ಮೂಲಸೌಕರ್ಯ ಹಾಗೂ ಸಲಕರಣೆಗಳನ್ನೊಳಗೊಂಡ ಉತ್ತಮ ಶಾಲೆಗಳನ್ನು ನಿರ್ಮಿಸುವ ಚಿಂತನೆ ಇದೆ. ಗುಣಮಟ್ಟದ ಶಿಕ್ಷಣಕ್ಕಾಗಿ ಹಳ್ಳಿಗಳಿಂದ ಬೆಂಗಳೂರಿಗೆ ಜನರು ವಲಸೆ ಬರುವುದನ್ನು ತಪ್ಪಿಸಲು ಈಗಾಗಲೇ ಸೂಕ್ತ ನೀತಿ ಸಿದ್ಧಪಡಿಸಲಾಗಿದ್ದು, ಇದಕ್ಕಾಗಿ ಜಾಗ ಗುರುತಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಅವರು ವಿವರಿಸಿದರು.
ಆಡಳಿತ ಯಂತ್ರಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿರುವ ಡಿ.ಕೆ.ಶಿವಕುಮಾರ್, ಯಾವುದೇ ಜಾತಿ, ಧರ್ಮ ಅಥವಾ ರಾಜಕೀಯ ಪ್ರಭಾವಕ್ಕೆ ಅಧಿಕಾರಿಗಳು ಮಣಿಯಬಾರದು ಎಂದು ಎಚ್ಚರಿಸಿದ್ದಾರೆ. ಮಂತ್ರಿಗಳು, ಶಾಸಕರು ಅಥವಾ ಸ್ವತಃ ಮುಖ್ಯಮಂತ್ರಿ ಕಚೇರಿಯಿಂದಲೇ ಯಾವುದೇ ಒತ್ತಡ ಬಂದರೂ ಅದಕ್ಕೆ ತಲೆಬಾಗದೆ, ಕೇವಲ ಕಾನೂನು ಚೌಕಟ್ಟಿನಲ್ಲಿ ಮತ್ತು ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು. ಜನರ ಭಾವನೆಗಳನ್ನು ಗೌರವಿಸಿ, ಸಕಾರಾತ್ಮಕ ಧೋರಣೆಯೊಂದಿಗೆ (ಪಾಸಿಟಿವ್ ಅಪ್ರೋಚ್) ಜನರ ಸಮಸ್ಯೆಗಳನ್ನು ಬಗೆಹರಿಸಬೇಕು. ಮುಂದಿನ 15 ದಿನಗಳಲ್ಲಿ ಎಲ್ಲಾ ಇಲಾಖೆಗಳು ತಮ್ಮ ಇಲಾಖಾವಾರು ಕಾರ್ಯಯೋಜನೆಯನ್ನು (ಆಕ್ಷನ್ ಪ್ಲಾನ್) ಸಿದ್ಧಪಡಿಸಿ ಸಲ್ಲಿಸಬೇಕು ಎಂದು ಗಡುವು ವಿಧಿಸಿರುವ ಸಿಎಂ, ರಾಜ್ಯದ ಜನತೆಗೆ ಮುಕ್ತ, ಪಾರದರ್ಶಕ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ದೃಢ ವಿಶ್ವಾಸ ವ್ಯಕ್ತಪಡಿಸಿದರು.