image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಡಿ.ಕೆ ಶಿವಕುಮಾರ್ ಅವರಿಗೆ ಅನುಭವದೊಡನೆ ಅಭಿವೃದ್ಧಿಯ ಇಚ್ಛಾಶಕ್ತಿ ಬರಲಿ: ಶಾಸಕ ಸಿ.ಟಿ ರವಿ ಆಶಯ

ಡಿ.ಕೆ ಶಿವಕುಮಾರ್ ಅವರಿಗೆ ಅನುಭವದೊಡನೆ ಅಭಿವೃದ್ಧಿಯ ಇಚ್ಛಾಶಕ್ತಿ ಬರಲಿ: ಶಾಸಕ ಸಿ.ಟಿ ರವಿ ಆಶಯ

ಚಿಕ್ಕಮಗಳೂರು : ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಅಗಾಧವಾದ ರಾಜಕೀಯ ಅನುಭವ ಮತ್ತು ಹುರುಪಿದ್ದರೂ, ರಾಜ್ಯದ ಅಭಿವೃದ್ಧಿಗೆ ಬೇಕಾದ ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಶಾಸಕ ಸಿ.ಟಿ ರವಿ ಅವರು ಟೀಕಿಸಿದ್ದಾರೆ. ಅವರು ವೈಯಕ್ತಿಕ ಹಾಗೂ ಪಕ್ಷದ ಹಿತಾಸಕ್ತಿಗಿಂತ ರಾಜ್ಯದ ಹಿತಕ್ಕೆ ಮೊದಲ ಆದ್ಯತೆ ನೀಡಿದರೆ ಮಾತ್ರ ಒಳ್ಳೆಯ ಕೆಲಸ ಮಾಡಲು ಸಾಧ್ಯ, ಇಲ್ಲದಿದ್ದರೆ ಜನರಿಗೆ ಯಾವುದೇ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಸ್ವೀಕಾರದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಹಿತಾಸಕ್ತಿ ಮತ್ತು ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಹಾರೈಸಿದರು. ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಸೃಷ್ಟಿಸುವ ದೂರದೃಷ್ಟಿಯ ಯೋಜನೆಗಳನ್ನು ಜಾರಿಗೆ ತರಬೇಕು ಮತ್ತು ಸಮಾಜದಲ್ಲಿ ಯಾವುದೇ ರೀತಿಯ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷವು ತನ್ನ ನೀತಿಯನ್ನು ಬದಲಿಸಿಕೊಳ್ಳದ ಹೊರತು ತುಷ್ಟೀಕರಣದ ರಾಜಕಾರಣ ಮುಂದುವರೆಯಲಿದ್ದು, ಹಣವೇ ಪ್ರಧಾನವಾದಾಗ ಆಡಳಿತದಲ್ಲಿ ಬಿಗಿ ತಪ್ಪುತ್ತದೆ, ಹೀಗಾಗಿ ಹೊಸ ಮುಖ್ಯಮಂತ್ರಿಗಳು ಎಚ್ಚರ ವಹಿಸಿ ಜನಮನ್ನಣೆ ಗಳಿಸಲಿ ಎಂದು ಆಶಿಸಿದರು.

ಮುಂದುವರಿದು ಮಾತನಾಡಿದ ಸಿ.ಟಿ ರವಿ ಅವರು, ದೇವರಿಂದ ಎಲ್ಲವನ್ನೂ ಪಡೆದಿರುವ ಶಿವಕುಮಾರ್ ಅವರು ಇನ್ನು ಮುಂದೆ ವೈಯಕ್ತಿಕ ಹಿತಾಸಕ್ತಿ ರಕ್ಷಣೆಗೆ ಮುಂದಾಗದೆ, ಮುಖ್ಯಮಂತ್ರಿಯಾಗಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಸಣ್ಣ ಸಣ್ಣ ಸಮುದಾಯಗಳಲ್ಲೂ ಸರ್ಕಾರದ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದರು. ರಾಜ್ಯದ ಜನತೆ ಭ್ರಷ್ಟಾಚಾರ ಮುಕ್ತ ಆಡಳಿತವನ್ನು ಬಯಸುತ್ತಿದ್ದಾರೆ, ಆದರೆ ಕಾಂಗ್ರೆಸ್‌ನ ಈ ಹಿಂದಿನ ಮೂರು ವರ್ಷಗಳ ಆಡಳಿತ ವೈಖರಿಯನ್ನು ನೋಡಿದರೆ ಅಂತಹ ನಂಬಿಕೆ ನಮಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದ ಲೂಟಿ, ಎಸ್‌ಸಿಪಿ-ಟಿಎಸ್‌ಪಿ ಅನುದಾನದ ದುರುಪಯೋಗ ಮತ್ತು ಸಣ್ಣ ಸಮುದಾಯಗಳ ಅಭಿವೃದ್ಧಿ ನಿಗಮಗಳ ವೈಫಲ್ಯದಿಂದ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ ಹಾಗೂ 'ಬ್ರಾಂಡ್ ಬೆಂಗಳೂರು' ಯೋಜನೆ ಕೆಟ್ಟ ಕಾರಣಕ್ಕೆ ಹೆಸರಾಗಿದೆ ಎಂದು ಆರೋಪಿಸಿದರು. ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ನೀಡಿದ ಅಹಿತಕರ ಆಡಳಿತದಿಂದ ಪಾಠ ಕಲಿತು, ಮುಂದಿನ ಎರಡು ವರ್ಷಗಳಲ್ಲಾದರೂ ಒಳ್ಳೆಯ ದಾರಿಯಲ್ಲಿ ಸಾಗುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಅವರು ಹೇಳಿದರು.

Category
ಕರಾವಳಿ ತರಂಗಿಣಿ