image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಜಮೀರ್ ಅಹ್ಮದ್ ಆಡಿಯೋ ವೈರಲ್ ಪ್ರಕರಣ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ, ಉಚ್ಚಾಟನೆಗೆ ಆಗ್ರಹ

ಜಮೀರ್ ಅಹ್ಮದ್ ಆಡಿಯೋ ವೈರಲ್ ಪ್ರಕರಣ: ದಾವಣಗೆರೆ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ, ಉಚ್ಚಾಟನೆಗೆ ಆಗ್ರಹ

ದಾವಣಗೆರೆ : ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ನಿರ್ದೇಶಕ ಮೊಹಮ್ಮದ್ ಸಿರಾಜ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾ ಕಾಂಗ್ರೆಸ್‌ನಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧವಾಗಿ ಎಸ್‌ಡಿಪಿಐ (SDPI) ಅಭ್ಯರ್ಥಿಗೆ ಬೆಂಬಲ ನೀಡಿದ ಆರೋಪದ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಅವರನ್ನು ಪಕ್ಷದಿಂದ ತಕ್ಷಣವೇ ಉಚ್ಚಾಟಿಸಬೇಕು ಎಂದು ದಾವಣಗೆರೆಯ ಹಿರಿಯ ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ. ಪ್ರಕರಣದ ಕುರಿತು ತೀವ್ರ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಬಸವರಾಜ್, ನಮಗೆ ಹೆತ್ತ ತಾಯಿಯೋ ಒಂದೇ, ಕಾಂಗ್ರೆಸ್ ಪಕ್ಷವೂ ಒಂದೇ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ. ಪಕ್ಷಕ್ಕೆ ದ್ರೋಹ ಬಗೆದಿರುವ ಜಮೀರ್ ಅಹ್ಮದ್ ಅವರನ್ನು ತಕ್ಷಣವೇ ಪಕ್ಷದಿಂದ ಉಚ್ಚಾಟಿಸಬೇಕು. ಉಪಚುನಾವಣೆ ವೇಳೆ ಮಡಿಕೇರಿಯಿಂದ ಬಂದಿದ್ದ ಎಸ್‌ಡಿಪಿಐ ಅಭ್ಯರ್ಥಿ ಮನೆ ಮನೆಗೆ ಹಣ ಹಂಚಿದ್ದಾರೆ. ದಾವಣಗೆರೆಗೆ ಬರಲು ಹಣವಿಲ್ಲದ ಆತನ ಬಳಿ ಕೋಟ್ಯಂತರ ರೂಪಾಯಿ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಅವರು, ಎಸ್‌ಡಿಪಿಐ ಅಭ್ಯರ್ಥಿ ಎರಡು ಸಾವಿರ ರೂಪಾಯಿ ಹಂಚಿಕೆ ಮಾಡಿರುವ ಬಗ್ಗೆ ನಮ್ಮ ಕಾರ್ಯಕರ್ತರೇ ಮಾಹಿತಿ ನೀಡಿದ್ದಾರೆ ಎಂದರು. ತಪ್ಪು ಮಾಡಿ ಈಗ ಕಳ್ಳತನದಿಂದ ಪಾರಾಗಲು 'ಎಐ ಸೃಷ್ಟಿ' (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಎಂದು ನೆಪ ಹೇಳುತ್ತಿದ್ದಾರೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದು ಎಚ್ಚರಿಸಿದ ಬಸವರಾಜ್, ಈ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಹಿರಿಯ ನಾಯಕರಿಗೆ ಇ-ಮೇಲ್ ಹಾಗೂ ಸ್ಪೀಡ್ ಪೋಸ್ಟ್ ಮೂಲಕ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಪಕ್ಷ ಉಳಿಯಬೇಕಾದರೆ ಹೈಕಮಾಂಡ್ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಈ ಆಡಿಯೋವನ್ನು ಎಫ್‌ಎಸ್‌ಎಲ್ (FSL) ತನಿಖೆಗೆ ಒಳಪಡಿಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದಾದರೆ ಜಮೀರ್ ಅಹ್ಮದ್ ಅವರು ಸ್ವಯಂಪ್ರೇರಿತರಾಗಿ ಮಂಪರು ಪರೀಕ್ಷೆಗೆ (Narco-Analysis Test) ಒಳಗಾಗಲು ಸಿದ್ಧರಿದ್ದಾರೆಯೇ ಎಂದು ಸವಾಲು ಹಾಕಿದ್ದಾರೆ. ತಾಯಿ ಕತ್ತು ಸೀಳುವಂತಹ ಇಂತಹ ದೇಶದ್ರೋಹಿ ಕೃತ್ಯ ಎಸಗಿ, ಈಗ ತಂತ್ರಜ್ಞಾನದ ನೆಪ ಒಡ್ಡಿ ನುಣುಚಿಕೊಳ್ಳಲು ಬಿಡುವುದಿಲ್ಲ ಎಂದಿದ್ದಾರೆ. ಇದೇ ವೇಳೆ ಮಾತನಾಡಿದ ಪಾಲಿಕೆ ಮಾಜಿ ಮೇಯರ್ ಚಮನ್ ಸಾಬ್, ಆಡಿಯೋ ಸುಳ್ಳಾಗಿದ್ದರೆ ನಾವು ಹೇಳುವ ಪವಿತ್ರ ಸ್ಥಳಕ್ಕೆ ಬಂದು ಜಮೀರ್ ಅಹ್ಮದ್ ಆಣೆ ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯಿಂದ ಕಾರ್ಯಕರ್ತರು ಮತ್ತು ಮಾಜಿ ಕಾರ್ಪೊರೇಟರ್ ಬಂದು ದಾವಣಗೆರೆಯಲ್ಲಿ ಎಸ್‌ಡಿಪಿಐ ಪರ ಪ್ರಚಾರ ಮಾಡಿದ್ದಾರೆ. ಬಿಜೆಪಿಯನ್ನು ಗೆಲ್ಲಿಸುವುದೇ ಇವರ ಒನ್ ಪಾಯಿಂಟ್ ಅಜೆಂಡಾ ಆಗಿತ್ತು. ಮುಸ್ಲಿಂ ಜಾತಿವಾದಿ ಪಕ್ಷಗಳು ಸಮಾಜದ ಹಿತ ಕಾಯುತ್ತಿವೆಯೋ ಅಥವಾ ಸೋಲಿಸುವ ಕೆಲಸ ಮಾಡುತ್ತಿವೆಯೋ ಎಂದು ಪ್ರಶ್ನಿಸಿದ ಅವರು, ಅಸಾದುದ್ದೀನ್ ಓವೈಸಿ ಮನೆ ಮೇಲೆ ಎಂದಾದರೂ ಇಡಿ ಅಥವಾ ಐಟಿ ದಾಳಿ ನಡೆದಿದೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಮೀರ್ ಆಣೆ ಪ್ರಮಾಣಕ್ಕೆ ಬರುವುದಾದರೆ ಅವರ ಪ್ರಯಾಣದ ವೆಚ್ಚವನ್ನು ನಾವೇ ಭರಿಸುತ್ತೇವೆ ಎಂದು ಚಮನ್ ಸಾಬ್ ಲೇವಡಿ ಮಾಡಿದ್ದಾರೆ.

ಆಡಿಯೋದಲ್ಲಿ ತಮ್ಮ ಹೆಸರು ಪ್ರಸ್ತಾಪವಾಗಿರುವ ಕುರಿತು ದಾವಣಗೆರೆ ದಕ್ಷಿಣ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಸ್ಪಷ್ಟನೆ ನೀಡಿದ್ದಾರೆ. ಆಡಿಯೋದಲ್ಲಿರುವ ವಿಷಯಗಳು ಸತ್ಯಕ್ಕೆ ದೂರವಾಗಿದ್ದು, ವರ್ಷದ ಹಿಂದೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಮೊಹಮ್ಮದ್ ಸಿರಾಜ್ ಸಿಕ್ಕಿ ನಮಸ್ಕಾರ ಮಾಡಿದ್ದು ಬಿಟ್ಟರೆ, ಇತ್ತೀಚಿನ ಚುನಾವಣೆ ವೇಳೆಯಲ್ಲಿ ಅವರು ತಮಗೆ ಸಿಕ್ಕಿಲ್ಲ ಎಂದಿದ್ದಾರೆ. ಜಮೀರ್ ಅಹ್ಮದ್ ಅವರ ಪರಿಚಯವೇ ತಮಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಬಡವನ ಮಗನಾಗಿ ತಾವು ಚುನಾವಣೆ ಎದುರಿಸಿದ್ದು, ಸಾರ್ವಜನಿಕರು ತಮಗೆ 64 ಸಾವಿರ ಮತಗಳನ್ನು ನೀಡಿದ್ದಾರೆ. ಎದುರಾಳಿಗಳು ಹೇಗೆ ಹಣ, ಹೆಂಡ ಮತ್ತು ಸೀರೆ ಹಂಚಿ ಚುನಾವಣೆ ಮಾಡಿದ್ದಾರೆ ಎಂಬುದು ಇಡೀ ಜಿಲ್ಲೆಗೆ ಗೊತ್ತು. ಒಂದು ವೇಳೆ ನಾವು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ ನಾವೇ ಗೆಲ್ಲುತ್ತಿದ್ದೆವು. ಈ ವೈರಲ್ ಆಡಿಯೋದ ಸತ್ಯಾಸತ್ಯತೆ ಹೊರಬರಲು ಸೂಕ್ತ ತನಿಖೆಯಾಗಬೇಕು. ಸಿರಾಜ್ ಅವರೇ ಈ ಬಗ್ಗೆ ಸೈಬರ್ ಪೊಲೀಸರಿಗೆ ದೂರು ನೀಡಿರುವುದರಿಂದ ತನಿಖೆಯಿಂದ ಸತ್ಯ ಹೊರಬರಲಿ ಎಂದು ಶ್ರೀನಿವಾಸ್ ತಿಳಿಸಿದ್ದಾರೆ. ಜೊತೆಗೆ, ಮುಸ್ಲಿಮರಿಗೆ ಕಾಂಗ್ರೆಸ್ ಟಿಕೆಟ್ ನೀಡದ ಕಾರಣಕ್ಕೆ ಅವರು ಎಸ್‌ಡಿಪಿಐಗೆ ಮತ ಹಾಕಿದ್ದಾರೆಯೇ ಹೊರತು, ಬಿಜೆಪಿಯನ್ನು ಗೆಲ್ಲಿಸಲು ಅಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.

Category
ಕರಾವಳಿ ತರಂಗಿಣಿ