image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹಾಗೂ ಎಪಿಎಂಸಿ ಸಮಸ್ಯೆ: ತಕ್ಷಣದ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೆ ಸಿ. ಟಿ. ರವಿ ಆಗ್ರಹ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಳೆ ಹಾಗೂ ಎಪಿಎಂಸಿ ಸಮಸ್ಯೆ: ತಕ್ಷಣದ ಪರಿಹಾರಕ್ಕೆ ಜಿಲ್ಲಾಧಿಕಾರಿಗಳಿಗೆ ಸಿ. ಟಿ. ರವಿ ಆಗ್ರಹ

ಚಿಕ್ಕಮಗಳೂರು : ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಯಿಂದಾಗಿ ಉಂಟಾಗಿರುವ ಮನೆ, ಬೆಳೆ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಗೆ ಜಿಲ್ಲಾಡಳಿತ ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯರು ಹಾಗೂ ಮಾಜಿ ಸಚಿವರಾದ ಸಿ. ಟಿ. ರವಿ ಅವರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕಟ್ಟುನಿಟ್ಟಿನ ಒತ್ತಾಯ ಮಾಡಿದ್ದಾರೆ. ಮೇ 30, 2026 ರಂದು ಅಧಿಕೃತ ಪತ್ರ ಬರೆದಿರುವ ಅವರು, ತಾಲೂಕಿನಾದ್ಯಂತ ಜನರು ಮತ್ತು ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.

ಚಿಕ್ಕಮಗಳೂರು ನಗರ ಹಾಗೂ ಚಿಕ್ಕಮಗಳೂರು ಮತ್ತು ಕಡೂರು ತಾಲ್ಲೂಕುಗಳ ಕೆ.ಬಿ.ಹಾಳ್‌, ಹಿರೇಗೌಜ, ಹಂಚಿಹಳ್ಳಿ, ಬೀಕನಹಳ್ಳಿ, ಹಂಪಾಪುರ, ಬ್ಯಾಡರಹಳ್ಳಿ, ಪಿಳ್ಳೇನಹಳ್ಳಿ, ಕುನ್ನಾಳು ಮತ್ತು ಲಕ್ಕುಮ್ಮನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಭಾರಿ ನಷ್ಟ ಸಂಭವಿಸಿದೆ. ಮಳೆಯಿಂದಾಗಿ ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಜಿಲ್ಲಾಡಳಿತ ತಕ್ಷಣವೇ ಪರಿಹಾರ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಇನ್ನು ಮಳೆಯಿಂದ ಹಾನಿಗೊಳಗಾದ ಕೃಷಿ ಪ್ರದೇಶಗಳಿಗೆ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಭೇಟಿ ನೀಡಿ ಸಮೀಕ್ಷೆ ನಡೆಸಬೇಕು, ಬೆಳೆ ಹಾನಿಯ ನಿಖರ ಅಂದಾಜು ಮಾಡಿ ಶೀಘ್ರವೇ ರೈತರಿಗೆ ಸೂಕ್ತ ಪರಿಹಾರ ವಿತರಿಸಬೇಕು ಎಂದು ಪತ್ರದಲ್ಲಿ ಪ್ರಮುಖವಾಗಿ ಉಲ್ಲೇಖಿಸಿದ್ದಾರೆ.

ನಗರ ಪ್ರದೇಶಗಳಲ್ಲಿ ಎದುರಾಗುತ್ತಿರುವ ಕಸ ಮತ್ತು ಹೂಳಿನ ಸಮಸ್ಯೆಯ ಬಗ್ಗೆಯೂ ಗಮನ ಸೆಳೆದಿರುವ ಶಾಸಕರು, ನಗರದ ರಾಜಕಾಲುವೆಗಳಲ್ಲಿ ತುಂಬಿಕೊಂಡಿರುವ ಹೂಳು ಹಾಗೂ ಕಸವನ್ನು ತಕ್ಷಣವೇ ಸ್ವಚ್ಛಗೊಳಿಸುವ ಮೂಲಕ ಮಳೆ ನೀರು ಸರಾಗವಾಗಿ ಹರಿದುಹೋಗಲು ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದ್ದಾರೆ. ಇದರೊಂದಿಗೆ, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ, ವಿದ್ಯುತ್ ಲೈನ್‌ಗಳ ಪಕ್ಕದಲ್ಲಿರುವ ಮತ್ತು ಲೈನ್‌ಗಳ ಮೇಲೆ ಬೀಳುವ ಸಂಭವವಿರುವ ಅಪಾಯಕಾರಿ ಮರದ ಕೊಂಬೆಗಳನ್ನು ಮೆಸ್ಕಾಂ ಹಾಗೂ ವಿದ್ಯುತ್ ಇಲಾಖೆಯು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತಕ್ಷಣವೇ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಳೆ ಹಾನಿಯ ಜೊತೆಗೆ ಚಿಕ್ಕಮಗಳೂರು ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರು ಎದುರಿಸುತ್ತಿರುವ ಅನ್ಯಾಯದ ಕುರಿತೂ ಸಿ. ಟಿ. ರವಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಎಪಿಎಂಸಿಯಲ್ಲಿ ಮಧ್ಯವರ್ತಿಗಳ ಕೈವಾಡದಿಂದಾಗಿ ರೈತರು ತಾವು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ರಾಜ್ಯದ ಇತರ ಮಾರುಕಟ್ಟೆಗಳ ಸಮನಾಗಿ ಯೋಗ್ಯ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಈ ಅನ್ಯಾಯದ ವಿರುದ್ಧ ರೈತರು ಈಗಾಗಲೇ ಪ್ರತಿಭಟನೆ ನಡೆಸಿರುವುದನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿರುವ ಅವರು, ಈ ಮಧ್ಯವರ್ತಿಗಳ ಹಾವಳಿಯ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಕೋರಿದ್ದಾರೆ. ರಾಜ್ಯದ ಇತರೆ ಮಾರುಕಟ್ಟೆಗಳಂತೆಯೇ ಚಿಕ್ಕಮಗಳೂರಿನ ರೈತರಿಗೂ ನ್ಯಾಯಯುತ ಬೆಲೆ ಸಿಗುವಂತೆ ಮಾಡಲು ಮತ್ತು ಎಪಿಎಂಸಿಗಳಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ಸಂಪೂರ್ಣವಾಗಿ ತಪ್ಪಿಸಿ ರೈತರಿಗೆ ನೆರವಾಗಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಬೇಕು ಎಂದು ಶಾಸಕ ಸಿ. ಟಿ. ರವಿ ಅವರು ಜಿಲ್ಲಾಧಿಕಾರಿಗಳಿಗೆ ಬರೆದ ಪತ್ರದಲ್ಲಿ ಕಡಾಖಂಡಿತವಾಗಿ ಆಗ್ರಹಿಸಿದ್ದಾರೆ.

Category
ಕರಾವಳಿ ತರಂಗಿಣಿ