image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ತೆರಿಗೆ ವಂಚನೆ ಪ್ರಕರಣ: ಡಿ.ಕೆ. ಶಿವಕುಮಾರ್‌ಗೆ ಕೋರ್ಟ್‌ನಿಂದ ಭಾರಿ ರಿಲೀಫ್, 2 ವರ್ಷ ವಿದೇಶ ಪ್ರವಾಸಕ್ಕೆ ಅನುಮತಿ

ತೆರಿಗೆ ವಂಚನೆ ಪ್ರಕರಣ: ಡಿ.ಕೆ. ಶಿವಕುಮಾರ್‌ಗೆ ಕೋರ್ಟ್‌ನಿಂದ ಭಾರಿ ರಿಲೀಫ್, 2 ವರ್ಷ ವಿದೇಶ ಪ್ರವಾಸಕ್ಕೆ ಅನುಮತಿ

ಬೆಂಗಳೂರು : ತೆರಿಗೆ ವಂಚನೆ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿರುವ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬೆಂಗಳೂರಿನ ವಿಶೇಷ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಭಾರಿ ರಿಲೀಫ್ ನೀಡಿದೆ. ಅವರ ಜಾಮೀನು ಷರತ್ತುಗಳನ್ನು ಸಡಿಲಿಸಿರುವ ಕೋರ್ಟ್, ಮುಂದಿನ ಎರಡು ವರ್ಷಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳಲು ಅನುಮತಿ ನೀಡಿದೆ. ಈ ಮೂಲಕ ಸಿಎಂ ಸ್ಥಾನದ ನಿರೀಕ್ಷೆಯಲ್ಲಿರುವ ಡಿ.ಕೆ. ಶಿವಕುಮಾರ್‌ ಅವರಿಗೆ ಸಿದ್ದರಾಮಯ್ಯ ರಾಜೀನಾಮೆ ಜತೆಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಂತಾಗಿದೆ.

ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್‌ ಕೆ.ಎನ್. ಶಿವಕುಮಾರ್ ಅವರಿದ್ದ ಪೀಠವು ಈ ಮಹತ್ವದ ಆದೇಶ ಹೊರಡಿಸಿದೆ. ಇದರನ್ವಯ ಡಿ.ಕೆ. ಶಿವಕುಮಾರ್ ಅವರು ಮುಂದಿನ 2 ವರ್ಷಗಳಲ್ಲಿ ಅಮೆರಿಕ, ಯುರೋಪ್‌ ರಾಷ್ಟ್ರಗಳು, ಇಂಗ್ಲೆಂಡ್‌, ಆಸ್ಟ್ರೇಲಿಯಾ, ರಷ್ಯಾ ಮತ್ತು ಅರಬ್‌ ರಾಷ್ಟ್ರಗಳಿಗೆ ಅಧಿಕೃತ ಹಾಗೂ ಉದ್ಯಮದ ನಿಮಿತ್ತ ಪ್ರವಾಸ ಕೈಗೊಳ್ಳಬಹುದಾಗಿದೆ.

ಆದರೆ ನ್ಯಾಯಾಲಯವು ಈ ಅನುಮತಿಯೊಂದಿಗೆ ಕೆಲವು ಕಟ್ಟುನಿಟ್ಟಿನ ಷರತ್ತುಗಳನ್ನು ವಿಧಿಸಿದೆ. ಪ್ರತಿ ಬಾರಿ ವಿದೇಶಕ್ಕೆ ತೆರಳುವ ಮುನ್ನ ಶಿವಕುಮಾರ್ ಅವರು ತಮ್ಮ ಸಂಪೂರ್ಣ ಪ್ರವಾಸದ ವಿವರವನ್ನು ತನಿಖಾ ಸಂಸ್ಥೆಗೆ ಕಡ್ಡಾಯವಾಗಿ ಸಲ್ಲಿಸಬೇಕು. ಅಷ್ಟೇ ಅಲ್ಲದೆ, ನ್ಯಾಯಾಲಯವು ನಿರ್ದೇಶಿಸಿದಾಗಲೆಲ್ಲಾ ವಿಚಾರಣೆಗೆ ಖುದ್ದಾಗಿ ಹಾಜರಾಗಬೇಕಾಗುತ್ತದೆ. ಒಂದು ವೇಳೆ ಈ ಷರತ್ತುಗಳನ್ನು ಉಲ್ಲಂಘಿಸಿದರೆ, ಪ್ರವಾಸದ ಅನುಮತಿಯನ್ನು ರದ್ದುಪಡಿಸುವಂತೆ ಕೋರಿ ಪ್ರಾಸಿಕ್ಯೂಷನ್‌ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಡಿ.ಕೆ. ಶಿವಕುಮಾರ್ ಅವರು ತಮ್ಮ ವೈಯಕ್ತಿಕ ಉದ್ಯಮದ ಅಭಿವೃದ್ಧಿ ಹಾಗೂ ರಾಜ್ಯದ ಜಲಸಂಪನ್ಮೂಲ ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿರುವ ಕಾರಣ, ವಿವಿಧ ಯೋಜನೆಗಳ ಭಾಗವಾಗಿ ಹಲವು ದೇಶಗಳಿಗೆ ಭೇಟಿ ನೀಡುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಅವರು ಕೋರಿರುವ ಮನವಿಯಲ್ಲಿ ಸತ್ಯಾಂಶ ಮತ್ತು ಪ್ರಾಮಾಣಿಕತೆ ಇದೆ ಎಂದು ನ್ಯಾಯಾಲಯವು ಮೇ 15ರಂದು ನೀಡಿದ ತನ್ನ ಆದೇಶದಲ್ಲಿ ಉಲ್ಲೇಖಿಸಿ ಈ ಅನುಮತಿ ನೀಡಿದೆ.

ಇದೇ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿಗೆ ಈ ಹಿಂದೆ 8 ತಿಂಗಳ ಕಾಲ ವಿದೇಶ ಪ್ರವಾಸಕ್ಕೆ ಅವಕಾಶ ನೀಡಲಾಗಿತ್ತು. ಹಾಗಾಗಿ ಶಿವಕುಮಾರ್ ಅವರಿಗೆ ಅನುಮತಿ ನಿರಾಕರಿಸಲು ಯಾವುದೇ ಸಕಾರಣಗಳಿಲ್ಲ ಎಂದು ಕೋರ್ಟ್ ಹೇಳಿದೆ. ಅಲ್ಲದೆ, ಪ್ರಕರಣದ ಇಬ್ಬರು ಆರೋಪಿಗಳು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿ ಪ್ರಕರಣಕ್ಕೆ ತಡೆಯಾಜ್ಞೆ ತಂದಿದ್ದಾರೆ. ಹೀಗಾಗಿ, ಸರ್ವೋಚ್ಚ ನ್ಯಾಯಾಲಯವು ಮುಂದಿನ ಆದೇಶ ನೀಡುವವರೆಗೆ ವಿಚಾರಣೆಯಲ್ಲಿ ಶಿವಕುಮಾರ್‌ ಖುದ್ದಾಗಿ ಭಾಗವಹಿಸುವ ಅಗತ್ಯವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಈ ಹಿಂದೆ 2022ರ ಮಾರ್ಚ್‌ 28ರಿಂದ ಏಪ್ರಿಲ್‌ 3ರವರೆಗೆ ದುಬೈಗೆ ತೆರಳಲೂ ಸಹ ನ್ಯಾಯಾಲಯ ಅನುಮತಿ ನೀಡಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

Category
ಕರಾವಳಿ ತರಂಗಿಣಿ