image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಮೇಕೆದಾಟು ಯೋಜನೆ: ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ರಾಜ್ಯಕ್ಕೆ ನ್ಯಾಯ ಒದಗಿಸಲು ಸಿ.ಎನ್.ಮಂಜೇಗೌಡ ಆಗ್ರಹ

ಮೇಕೆದಾಟು ಯೋಜನೆ: ಪ್ರಧಾನಿ ಮೋದಿ ಮಧ್ಯಪ್ರವೇಶಿಸಿ ರಾಜ್ಯಕ್ಕೆ ನ್ಯಾಯ ಒದಗಿಸಲು ಸಿ.ಎನ್.ಮಂಜೇಗೌಡ ಆಗ್ರಹ

ಮೈಸೂರು : ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಕಾವೇರಿ ಕ್ರಿಯಾ ಸಮಿತಿ ಗೌರವಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯರಾದ ಸಿ. ಎನ್. ಮಂಜೇಗೌಡ ಅವರು ಮೇಕೆದಾಟು ಯೋಜನೆಯ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶ ಮಾಡಿ, ಕರ್ನಾಟಕ ರಾಜ್ಯಕ್ಕೆ ನ್ಯಾಯ ಒದಗಿಸಬೇಕು ಎಂದು ಬಲವಾಗಿ ಆಗ್ರಹಿಸಿದರು. ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಇತ್ತೀಚೆಗೆ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮೇಕೆದಾಟು ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಮನವಿ ಮಾಡಿರುವುದನ್ನು ಉಲ್ಲೇಖಿಸಿದ ಅವರು, ಮೇಕೆದಾಟು ಯೋಜನೆಯಿಂದ ಕೇವಲ ಕರ್ನಾಟಕ ಮಾತ್ರವಲ್ಲದೆ ಉಭಯ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂದು ಸ್ಪಷ್ಟಪಡಿಸಿದರು. ಈ ಕುರಿತು ಶೀಘ್ರದಲ್ಲೇ ಕಾವೇರಿ ಕ್ರಿಯಾ ಸಮಿತಿಯ ನಿಯೋಗವು ರಾಷ್ಟ್ರಪತಿಗಳು, ಪ್ರಧಾನಿ ಹಾಗೂ ಕೇಂದ್ರ ನೀರಾವರಿ ಮಂತ್ರಿಗಳನ್ನು ಭೇಟಿ ಮಾಡಿ, ಯೋಜನೆ ನಿರ್ಮಾಣಕ್ಕೆ ಶೀಘ್ರವಾಗಿ ಅನುಮತಿ ಕೊಡಿಸುವಂತೆ ಅಧಿಕೃತವಾಗಿ ಮನವಿ ಸಲ್ಲಿಸಲಿದೆ ಎಂದು ಅವರು ಮಾಹಿತಿ ನೀಡಿದರು.

ಪ್ರಧಾನ ಮಂತ್ರಿಗಳು ಕಾವೇರಿ ವಿವಾದದಲ್ಲಿ ಸಕಾರಾತ್ಮಕವಾಗಿ ಮಧ್ಯಸ್ಥಿಕೆ ವಹಿಸಿ, ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಿಸಲು ಅವಕಾಶ ಕಲ್ಪಿಸಬೇಕು. ಕಾವೇರಿ ನದಿಯು ಕರ್ನಾಟಕದ ಕೊಡಗಿನಲ್ಲಿ ಹುಟ್ಟುವುದರಿಂದ, ಇಲ್ಲಿನ ನೀರು ರಾಜ್ಯದ ಜನರಿಗೆ ಸಲ್ಲಬೇಕು ಮತ್ತು ಅಮೂಲ್ಯವಾದ ನೀರು ಸಮುದ್ರ ಸೇರಿ ವ್ಯರ್ಥವಾಗಬಾರದು ಎಂಬ ಏಕೈಕ ಉದ್ದೇಶದಿಂದ ಈ ಅಣೆಕಟ್ಟು ಕಟ್ಟಲಾಗುತ್ತಿದೆ. ಇದರಿಂದ ತಮಿಳುನಾಡಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಎದುರಾಗುವುದಿಲ್ಲ ಎಂದು ಅವರು ಮನವರಿಕೆ ಮಾಡಿಕೊಟ್ಟರು. ಇದೇ ವೇಳೆ 1974ರ ಕಾವೇರಿ ನೀರಿನ ಒಪ್ಪಂದವನ್ನು ಮರು ಪರಿಶೀಲನೆ ಮಾಡಬೇಕಾದ ಅಗತ್ಯವನ್ನು ಒತ್ತಿಹೇಳಿದ ಅವರು, ರಾಜಕೀಯ ಪಕ್ಷಗಳ ಆಂತರಿಕ ಕಿತ್ತಾಟದಿಂದಾಗಿ ರಾಜ್ಯದಲ್ಲಿ ಕಾವೇರಿ ವಿವಾದ ಇಂದಿಗೂ ಜೀವಂತವಾಗಿದೆ ಎಂದು ವಿಷಾದಿಸಿದರು. ತಮಿಳುನಾಡಿನಲ್ಲಿ ಜಲ, ನೆಲ ಮತ್ತು ಭಾಷೆಯ ವಿಷಯ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಹೋರಾಡುತ್ತವೆ. ಆದರೆ ನಮ್ಮ ರಾಜ್ಯದಲ್ಲಿ ಇಂತಹ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದ್ದು, ಇದನ್ನು ಬದಿಗಿಟ್ಟು ಎಲ್ಲರೂ ಪಕ್ಷಾತೀತವಾಗಿ ಒಟ್ಟಾಗಿ ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿ ಕಾವೇರಿ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಕರೆ ನೀಡಿದರು. ತಮಿಳುನಾಡಿನಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಕಾವೇರಿ ವಿಚಾರದಲ್ಲಿ ಧ್ವನಿ ಎತ್ತುತ್ತವೆ, ಅದರಂತೆ ನೂತನ ಸಿಎಂ ಜೋಸೆಫ್ ವಿಜಯ್ ಕೂಡ ತಮ್ಮ ನಿಲುವನ್ನು ಪ್ರದರ್ಶಿಸಿದ್ದಾರೆ ಎಂದರು.

ಬಳಿಕ ಮಾತನಾಡಿದ ಸಮಿತಿಯ ಅಧ್ಯಕ್ಷ ಎಸ್. ಜಯಪ್ರಕಾಶ್ ಅವರು, ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರು ಮೇಕೆದಾಟು ಯೋಜನೆ ಕೈ ಬಿಡುವಂತೆ ಪ್ರಧಾನಿಗಳಿಗೆ ಮನವಿ ಮಾಡುವ ಮುನ್ನ, ಮೇಕೆದಾಟು ಯೋಜನೆಯ ವಾಸ್ತವತೆ ಹಾಗೂ ಅದರ ಹಿನ್ನೆಲೆಯನ್ನು ಸರಿಯಾಗಿ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು. ರಾಜ್ಯ ಸರ್ಕಾರವು ಮೇಕೆದಾಟು ಯೋಜನೆ ಆರಂಭಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮೇಲೆ ಇನ್ನಷ್ಟು ತೀವ್ರವಾದ ಒತ್ತಡವನ್ನು ಹೇರಬೇಕು. ಈ ಯೋಜನೆಯಿಂದ ನಮ್ಮ ಭಾಗದ ರೈತರಿಗೆ ಹಾಗೂ ಜನಸಾಮಾನ್ಯರಿಗೆ ಕುಡಿಯುವ ನೀರು ಸೇರಿದಂತೆ ಸಾಕಷ್ಟು ಅನುಕೂಲವಾಗಲಿದ್ದು, ಒಂದು ವೇಳೆ ಈ ಯೋಜನೆಯನ್ನು ಕೈ ಬಿಟ್ಟರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಈ ಪ್ರಮುಖ ಮಾಧ್ಯಮಗೋಷ್ಟಿಯಲ್ಲಿ ನಟಿ ಶುಭರಕ್ಷ, ಕಾವೇರಿ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ ಮೂಗೂರು ನಂಜುಂಡಸ್ವಾಮಿ, ಕಾರ್ಯದರ್ಶಿ ಮೆಲ್ಲಹಳ್ಳಿ ಮಹದೇವಸ್ವಾಮಿ, ಪ್ರಮುಖರಾದ ಎಂ. ಜೆ. ಸುರೇಶ್‌ಗೌಡ, ರೈತ ಶಿವಕುಮಾರ್, ರವೀಶ್, ಹನುಮಂತೇಗೌಡ ಹಾಗೂ ಸ್ವಾಮಿಗೌಡ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ