image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್
ರಾಜ್ಯ

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ ಬಾಲಿವುಡ್ ನಟ ರಣವೀರ್ ಸಿಂಗ್: ದೈವಾರಾಧನೆ ವಿವಾದಕ್ಕೆ ಸುಖಾಂತ್ಯ

ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ ಬಾಲಿವುಡ್ ನಟ ರಣವೀರ್ ಸಿಂಗ್: ದೈವಾರಾಧನೆ ವಿವಾದಕ್ಕೆ ಸುಖಾಂತ್ಯ

ಮೈಸೂರು : ಕರಾವಳಿ ಕರ್ನಾಟಕದ ಪರಮ ಪವಿತ್ರ ಸಂಸ್ಕೃತಿಯಾದ ದೈವಾರಾಧನೆಯನ್ನು ಅವಹೇಳನ ಮಾಡಿದ ಆರೋಪ ಎದುರಿಸುತ್ತಿದ್ದ ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್, ಕೊನೆಗೂ ಕಾನೂನು ಹೋರಾಟಕ್ಕೆ ಮಣಿದಿದ್ದಾರೆ. ತಮ್ಮ ತಪ್ಪಿನ ಅರಿವಾಗಿ ಮೈಸೂರಿನ ಪ್ರಸಿದ್ಧ ಚಾಮುಂಡಿ ಬೆಟ್ಟಕ್ಕೆ ದಿಢೀರ್ ಭೇಟಿ ನೀಡಿದ ನಟ, ನಾಡದೇವತೆ ತಾಯಿ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ಮಂಡಿಯೂರಿ ಬೇಷರತ್ ಕ್ಷಮೆಯಾಚಿಸಿದ್ದಾರೆ. ಈ ಮೂಲಕ ಕಳೆದ ಕೆಲವು ಸಮಯದಿಂದ ಸೃಷ್ಟಿಯಾಗಿದ್ದ ದೊಡ್ಡ ಧಾರ್ಮಿಕ ವಿವಾದವೊಂದು ಸುಖಾಂತ್ಯ ಕಂಡಿದೆ.

ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (IFFI) ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದ ನಟ ರಣವೀರ್ ಸಿಂಗ್, ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿದ್ದ ಕರಾವಳಿ ಹಿನ್ನೆಲೆಯ 'ಕಾಂತಾರ' ಸಿನಿಮಾದ ಪವಿತ್ರ ದೈವದ ನರ್ತನ ಹಾಗೂ ನಟನೆಯನ್ನು ವೇದಿಕೆಯ ಮೇಲೆ ಅನುಕರಿಸಿದ್ದರು. ಈ ವೇಳೆ ಅವರು ಪವಿತ್ರ ಚಾವುಂಡಿ ದೈವವನ್ನು 'ದೆವ್ವ' (Ghost) ಎಂಬುದಾಗಿ ಹೋಲಿಸಿ ಮಾತನಾಡಿದ್ದರು. ಕರಾವಳಿ ಮತ್ತು ಸಮಸ್ತ ಕರ್ನಾಟಕದ ಜನರ ಆರಾಧ್ಯ ದೈವಕ್ಕೆ ಬಾಲಿವುಡ್ ನಟ ಈ ರೀತಿ ಸಾರ್ವಜನಿಕವಾಗಿ ಅಪಮಾನ ಮಾಡಿದ್ದು ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ರಣವೀರ್ ಸಿಂಗ್ ವಿರುದ್ಧ ವ್ಯಾಪಕ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತವಾಗಿತ್ತು.

ದೈವ ನಿಂದನೆಯ ಈ ಗಂಭೀರ ಪ್ರಕರಣವನ್ನು ಖಂಡಿಸಿ ಹಿರಿಯ ವಕೀಲರಾದ ಪ್ರಶಾಂತ್ ಮೇತಲ್ ಅವರು ನಟ ರಣವೀರ್ ಸಿಂಗ್ ವಿರುದ್ಧ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ಹೂಡಿದ್ದರು. ಈ ಕಾನೂನು ಹೋರಾಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದ ವಕೀಲ ಪ್ರಶಾಂತ್, ನಟ ರಣವೀರ್ ಸಿಂಗ್ ಅವರು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಖುದ್ದಾಗಿ ಬಂದು, ತಾಯಿ ಚಾಮುಂಡೇಶ್ವರಿಯ ಎದುರು ಮಂಡಿಯೂರಿ ಬೇಷರತ್ ಕ್ಷಮೆ ಕೇಳಿದರೆ ಮಾತ್ರ ತಾವು ಈ ಕೇಸ್ ಹಿಂಪಡೆಯುವುದಾಗಿ ಕಠಿಣ ಷರತ್ತು ವಿಧಿಸಿದ್ದರು. ಬಾಲಿವುಡ್ ನಟನ ವಿರುದ್ಧ ವಕೀಲರು ನಡೆಸಿದ ಈ ಪಟ್ಟುಬಿಡದ ಕಾನೂನು ಹೋರಾಟದ ಹಿನ್ನೆಲೆಯಲ್ಲಿ, ಕರ್ನಾಟಕ ಉಚ್ಛ ನ್ಯಾಯಾಲಯವು (High Court) ನಟನಿಗೆ ನಾಲ್ಕು ವಾರಗಳ ಒಳಗಾಗಿ ದೇವಸ್ಥಾನಕ್ಕೆ ಭೇಟಿ ನೀಡಿ ಕ್ಷಮೆಯಾಚಿಸುವಂತೆ ಆದೇಶಿಸಿತ್ತು.

ನ್ಯಾಯಾಲಯದ ನಿರ್ದೇಶನದಂತೆ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ರಣವೀರ್ ಸಿಂಗ್, ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ತದನಂತರ, ದೈವ ನಿಂದನೆಯ ಮಹಾಪರಾಧಕ್ಕಾಗಿ ದೇವಸ್ಥಾನದ ಆವರಣದಲ್ಲಿ ತಾಯಿಯ ಸನ್ನಿಧಿಯಲ್ಲೇ ಮಂಡಿಯೂರಿ ಕುಳಿತು ಬೇಷರತ್ ಕ್ಷಮೆಯಾಚಿಸಿದರು. ಈ ಹಿಂದೆ ನ್ಯಾಯಾಲಯದಲ್ಲಿ ಎಫ್‌ಐಆರ್ (FIR) ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದ ರಣವೀರ್ ಸಿಂಗ್, ತಮಗಾದ ತಪ್ಪಿಗೆ ಲಿಖಿತವಾಗಿ ವಿಷಾದ ವ್ಯಕ್ತಪಡಿಸಿದ್ದರು. ಇನ್ನೊಮ್ಮೆ ಯಾವುದೇ ಕಾರಣಕ್ಕೂ ಇಂತಹ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡುವುದಿಲ್ಲ ಎಂದು ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದರು. ಕಾಂತಾರ ಚಿತ್ರದಲ್ಲಿನ ನಟ ರಿಷಬ್ ಶೆಟ್ಟಿ ಅವರ ಅದ್ಭಂರ ಅಭಿನಯವನ್ನು ಶ್ಲಾಘಿಸುವುದು ಮತ್ತು ಎತ್ತಿ ತೋರಿಸುವುದು ಮಾತ್ರ ನನ್ನ ಉದ್ದೇಶವಾಗಿತ್ತು. ಕರಾವಳಿಯ ಜನರ ಧಾರ್ಮಿಕ ನಂಬಿಕೆಗೆ ನೋವುಂಟು ಮಾಡುವ ಯಾವುದೇ ದುರುದ್ದೇಶ ನನಗಿರಲಿಲ್ಲ ಎಂದು ನಟ ರಣವೀರ್ ಸಿಂಗ್ ಈ ಹಿಂದೆ ಸ್ಪಷ್ಟನೆ ಕೂಡ ನೀಡಿದ್ದರು.

ಇದೇ ವೇಳೆ, ಖ್ಯಾತ ನಟ ರಣವೀರ್‌ ಸಿಂಗ್‌ ಅವರಿಗೆ ಭಾರತೀಯ ಚಲನಚಿತ್ರ ನೌಕರರ ಒಕ್ಕೂಟ (ಎಫ್‌ಡಬ್ಲ್ಯುಐಸಿಇ) ಅಸಹಕಾರ ಘೋಷಿಸಿದೆ. 'ಡಾನ್‌-3' ಸಿನಿಮಾ ಚಿತ್ರಿಕರಣ ಆರಂಭಕ್ಕೆ ಕೇವಲ 3 ವಾರ ಇರುವಾಗ, ಅದರಲ್ಲಿ ನಾಯಕನಾಗಿ ಕಾಣಿಸಿಕೊಳ್ಳಬೇಕಿದ್ದ ರಣವೀರ್‌ ಸಿಂಗ್‌ ಅವರು ಚಿತ್ರದಿಂದ ಹಿಂದೆ ಸರಿದಿದ್ದರು. ರಣವೀರ್‌ರ ದಿಢೀರ್‌ ನಿರ್ಧಾರದಿಂದ ತಮಗಾಗಿರುವ ನಷ್ಟವನ್ನು ಭರಿಸಲು 45 ಕೋಟಿ ರು. ಪರಿಹಾರ ನೀಡಬೇಕು ಎಂದು ನಿರ್ಮಾಪಕ ಫರ್ಹಾನ್ ಅಖ್ತರ್‌ ಅವರು ಆಗ್ರಹಿಸಿದ್ದರು. ಆದರೆ ನಟ ಇದನ್ನು ನಿರಾಕರಿಸಿದ್ದರು. ಜತೆಗೆ, ಈ ವಿವಾದದ ಕುರಿತು ಸಮಾಲೋಚನೆ ನಡೆಸಲು ಒಕ್ಕೂಟ ನೀಡಿದ್ದ ಸರಣಿ ನೋಟಿಸ್‌ಗಳನ್ನೂ ನಿರ್ಲಕ್ಷಿಸಿದ್ದರು. ಇದರಿಂದ ಕೆರಳಿರುವ ಒಕ್ಕೂಟ, 'ಯಾವ ಸೂಪರ್‌ಸ್ಟಾರ್ ಕೂಡ ನಿಯಮಕ್ಕಿಂತ ದೊಡ್ಡವನಲ್ಲ' ಎಂದು ಎಚ್ಚರಿಸಿದ್ದು, ಸಮಸ್ಯೆ ಇತ್ಯರ್ಥವಾಗುವವರೆಗೂ ಚಿತ್ರರಂಗದ ಯಾವುದೇ ತಾಂತ್ರಿಕ ನೌಕರರು ಅಥವಾ ಕಾರ್ಮಿಕರು ರಣವೀರ್ ಸಿಂಗ್ ಚಿತ್ರಗಳಿಗೆ ಸಹಕರಿಸುವುದಿಲ್ಲ ಎಂದು ಘೋಷಿಸಿದೆ.

ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಇದನ್ನು 'ದೈವದ ಕಾರಣಿಕ' ಎಂದು ಬಣ್ಣಿಸಿದ್ದಾರೆ. ಕಾಂತಾರ ದೈವಕ್ಕೆ ಅಪಮಾನ ಮಾಡಿದ್ದಕ್ಕೇ ರಣವೀರ್ ಸಿಂಗ್‌ಗೆ ಒಂದರ ಮೇಲೊಂದರಂತೆ ಸಂಕಷ್ಟಗಳು ಎದುರಾಗುತ್ತಿವೆ, ದೈವದ ಶಕ್ತಿ ಸುಮ್ಮನೆ ಬಿಡುವುದಿಲ್ಲ ಎಂದು ನೆಟ್ಟಿಗರು ವ್ಯಾಪಕವಾಗಿ ಚರ್ಚೆ ನಡೆಸುತ್ತಿದ್ದಾರೆ. ಕೊನೆಗೂ ಕಾನೂನು ಮತ್ತು ಧಾರ್ಮಿಕ ಸಂಪ್ರದಾಯದ ಮುಂದೆ ಬಾಲಿವುಡ್ ತಾರೆ ತಲೆಬಾಗಿದ್ದು, ವಿವಾದಾತ್ಮಕ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಕ್ಕಂತಾಗಿದೆ.

Category
ಕರಾವಳಿ ತರಂಗಿಣಿ